ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಕ್ಕಳ ಜೀವ ಉಳಿಸಲು ಮಾನ್‌ಸ್ಟರ್‌ ವೇಷ'

ಜನ್ಮಾಷ್ಟಮಿಯಲ್ಲಿ ಅವಿಘ್ನಾ ವ್ಯಾಘ್ರಾಸ್‌ ಹೆಣ್ಣು ಹುಲಿಗಳ ಘರ್ಜನೆ: ದಾನಿಗಳ ಹಣವನ್ನು ಟ್ರಸ್ಟ್‌ಗೆ ದೇಣಿಗೆ
Last Updated 31 ಆಗಸ್ಟ್ 2018, 16:16 IST
ಅಕ್ಷರ ಗಾತ್ರ

ಉಡುಪಿ: ಕಡೆಗೋಲು ಕೃಷ್ಣನೂರಿನಲ್ಲಿ ಹುಲಿವೇಷದ ಗಮ್ಮತ್ತೇ ಬೇರೆ. ವಿಟ್ಲಪಿಂಡಿ ಉತ್ಸವದ ದಿನ ಹುಲಿವೇಷ ಕುಣಿತ ನೋಡಲು ಉಡುಪಿಯ ಕಡೆಗೆ ಜನಸಾಗರವೇ ಹರಿದು ಬರುತ್ತದೆ. ಈ ಬಾರಿಯ ಜನ್ಮಾಷ್ಟಮಿಯ ಹುಲಿವೇಷ ಮಾನವೀಯ ಕಾರಣಗಳಿಂದಾಗಿ ಗಮನ ಸೆಳೆಯುತ್ತಿದೆ.

ಕಳೆದ 4 ವರ್ಷಗಳಿಂದ ಅಷ್ಟಮಿಯ ಸಂದರ್ಭ ವಿಚಿತ್ರ ವೇಷಗಳನ್ನು ಹಾಕುತ್ತಾ ದಾನಿಗಳಿಂದ ದೊರೆತ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾರೆ ಕಲಾವಿದ ರವಿ ಕಟಪಾಡಿ. ಈ ಬಾರಿಯೂ ಅವರು ನಾಲ್ಕು ಮಕ್ಕಳ ವೈದ್ಯಕೀಯ ವೆಚ್ಚ ಭರಿಸುವ ಸಂಕಲ್ಪದೊಂದಿಗೆ ಅಮೇಸಿಂಗ್‌ ಮಾನ್‌ಸ್ಟರ್‌ ವೇಷ ಹಾಕಲಿದ್ದಾರೆ.‌

ಇದೊಂದು ಭಯಾನಕ, ರಾಕ್ಷಸ ವೇಷ. ಈಗಾಗಲೇ ವೇಷ ಹಾಕಲು ಬೇಕಾದ ಸಾಮಾಗ್ರಿಗಳನ್ನು ಹಾಕಾಂಗ್‌ನಿಂದ ತರಿಸಿಕೊಂಡಿದ್ದೇನೆ. ಮೂರು ದಿನ ವೇಷ ಹಾಕಿಕೊಂಡು ಉಡುಪಿ, ಮಲ್ಪೆ, ಕಟಪಾಡಿ, ಪಡುಕೆರೆ ಭಾಗದಲ್ಲಿ ಸಂಚರಿಸುತ್ತೇನೆ. ದಾನಿಗಳು ಕೈಲಾದಷ್ಟು ಆರ್ಥಿಕ ನೆರವು ನೀಡಿದರೆ ನಾಲ್ಕು ಮಕ್ಕಳ ಜೀವ ಉಳಿಸಬಹುದು ಎನ್ನುತ್ತಾರೆ ಅವರು.

ರವಿ ಕಟಪಾಡಿ ನಾಲ್ಕು ವರ್ಷಗಳಿಂದ ಚಿತ್ರ–ವಿಚಿತ್ರ ವೇಷ ಹಾಕುತ್ತಾ ಬಂದಿದ್ದಾರೆ. ವೇಷಕ್ಕೆ ಬಳಸುವ ರಸಾಯನಿಕಗಳ ದುಷ್ಪರಿಣಾಮದಿಂದಾಗಿ ಹಲವು ಬಾರಿ ಅನಾರೋಗ್ಯಕ್ಕೂ ತುತ್ತಾಗಿದ್ದಾರೆ. 2016ರಲ್ಲಿ ಮೈಗೆ ಹಚ್ಚಿಕೊಂಡಿದ್ದ ಕೆಮಿಕಲ್‌ ಬೆನ್ನು, ಮುಖದ ಚರ್ಮವೆಲ್ಲ ಸುಟ್ಟು ಹಾಕಿತ್ತು. ಆದರೂ, ವೇಷ ಹಾಕುವುದನ್ನು ಮಾತ್ರ ರವಿ ನಿಲ್ಲಿಸಿಲ್ಲ.

ಸಾವು–ಬದುಕಿನ ಮಧ್ಯೆ ಹೋರಾಡುವ ಮಕ್ಕಳ ನೋವಿನ ಮುಂದೆ, ವಾರವೊ, ತಿಂಗಳೊ ಅನುಭವಿಸುವ ನನ್ನ ನೋವು ದೊಡ್ಡದಲ್ಲ. ಬಡತನದಿಂದ ಬೇಗೆಯಿಂದ ಬೆಂದಿರುವ ನನಗೆ ದುಡ್ಡಿನ ಬೆಲೆ ತಿಳಿದಿದೆ. ಮಕ್ಕಳು ಸಾವಿನ ದವಡೆಯಲ್ಲಿದ್ದಾಗ ಪೋಷಕರು ಅನುಭವಿಸುವ ಯಾತನೆಯ ಅರಿವಿದೆ. ಹಾಗಾಗಿ, ಎಷ್ಟೆ ಕಷ್ಟವಾದರೂ ವೇಷ ಹಾಕಿಯೇ ತೀರುತ್ತೇನೆ ಎನ್ನುತ್ತಾರೆ ರವಿ.

ವೇಷ ಧರಿಸಲು 20 ಗಂಟೆ ಹಿಡಿಯುತ್ತದೆ. 3 ದಿನ ಘನ ಆಹಾರವನ್ನು ಸೇವಿಸಲಾಗುವುದಿಲ್ಲ. ಸ್ಟ್ರಾ ಮೂಲಕ ಎಳನೀರು, ನೀರು ಸೇರಿದಂತೆ ದ್ರವ ಆಹಾರ ಮಾತ್ರ ತೆಗೆದುಕೊಳ್ಳಬೇಕು. ಇದಕ್ಕೆಲ್ಲ ನನ್ನ ಗೆಳೆಯರ ಬಳಗ ಸಿದ್ಧತೆ ಮಾಡಿಕೊಂಡಿದೆ ಎನ್ನುತ್ತಾರೆ ರವಿ.‌

ಈ ಬಾರಿ ದಾನಿಗಳು ನೀಡಿದ ಹಣವನ್ನು ಸೆ.9ರಂದು ಮಲ್ಪೆಯ ಹನುಮಾನ್ ಭಜನಾ ಮಂದಿರದಲ್ಲಿ ಮಧ್ಯಾಹ್ನ 4ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುವುದು. ದಾನಮಾಡಲು ಇಚ್ಚಿಸುವವರು ವಿಜಯ ಬ್ಯಾಂಕ್ ಖಾತೆ 117206331000013, ಐಎಫ್‌ಎಸ್‌ಸಿ ಕೋಡ್: ವಿಐಜೆಬಿ 0001172 ಖಾತೆಗೆ ಹಣ ಸಂದಾಯ ಮಾಡಬಹುದು ಎಂದು ಅವರು ಮನವಿ ಮಾಡಿದ್ದಾರೆ.

ಮಹಿಳೆಯರ ಹುಲಿವೇಷ:ಕಡಿಯಾಳಿ ಗಣೇಶೋತ್ಸವ ಸಮಿತಿ ವತಿಯಿಂದ ‘ಅವಿಘ್ನ ವ್ಯಾಘ್ರಾಸ್’ ಹೆಣ್ಣುಮಕ್ಕಳ ಹುಲಿವೇಷ ತಂಡ ಕೂಡ ಈ ಬಾರಿ ರಥ ಬೀದಿಯಲ್ಲಿ ಹೆಜ್ಜೆ ಹಾಕಲು ಸಿದ್ಧವಾಗಿದೆ. ಈ ತಂಡ ಕಳೆದ 15 ದಿನಗಳಿಂದ ಕುಂಜಿಬೆಟ್ಟು ಶಿವಪ್ಪ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಹುಲಿ ನೃತ್ಯ ಅಭ್ಯಸ ಮಾಡಿದೆ.

‘ಅವಿಘ್ನ ವ್ಯಾಘ್ರಾಸ್’ ಹಣ್ಣು ಹುಲಿವೇಷ ತಂಡ ಸೆ. 2ರಂದು ನಗರದ 31 ಕಡೆಗಳಲ್ಲಿ ಪ್ರದರ್ಶನ ನೀಡಲಿದೆ. ಈ ಸಂದರ್ಭದಲ್ಲಿ ದಾನಿಗಳಿಂದ ದೊರೆತ ನೆರವನ್ನು ಆಸರೆ ಚಾರಿಟೇಬಲ್ ಟ್ರಸ್ಟ್‌ಗೆ ನೀಡಲಿದ್ದಾರೆ. ಪೋಷಕರನ್ನು ಕಳೆದುಕೊಂಡ 25 ಮಕ್ಕಳು ಈ ಟ್ರಸ್ಟ್‌ ಅನ್ನು ಅವಲಂಬಿಸಿದ್ದು, ಅವರ ವಿದ್ಯಾಭ್ಯಾಸಕ್ಕಾಗಿ ಲಕ್ಷಾಂತರ ಹಣ ವ್ಯಯಿಸಲಾಗುತ್ತಿದೆ. ಟ್ರಸ್ಟ್‌ಗೆ ನಮ್ಮ ತಂಡದಿಂದ ಕೈಲಾದ ನೆರವು ನೀಡಲಾಗುತ್ತಿದೆ ಎನ್ನುತ್ತಾರೆ ತಂಡದ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT