ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಪೂರ್ಣ: ಸರ್ಕಾರದ ಹಣ ಪೋಲು

ಊಟದ ಬದಲಿಗೆ ಫಲಾನುಭವಿಗಳ ಖಾತೆಗೆ ಹಣ ಹಾಕುವ ಬಗ್ಗೆ ಸರ್ಕಾರ ಚಿಂತಿಸಲಿ: ಸಂಸದೆ ಶೋಭಾ ಕರಂದ್ಲಾಜೆ
Last Updated 16 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ‘ಮಾತೃಪೂರ್ಣ’ ಯೋಜನೆ ಸಂಪೂರ್ಣ ವಿಫಲವಾಗಿದ್ದು, ಕರಾವಳಿ ಭಾಗಕ್ಕೆ ಯೋಜನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಬೇಕಾದ ಅಗತ್ಯವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ಪ್ರಗತಿ ಕುರಿತು ಪರಿಶೀಲನೆ ನಡೆಸಿದ ಅವರು, ಕರಾವಳಿಯಲ್ಲಿ ಗರ್ಭಿಣಿ, ಬಾಣಂತಿಯರು ಅಂಗನವಾಡಿಗೆ ಬಂದು ಊಟ ಮಾಡುವುದು ಕಡಿಮೆ. ಫಲಾನುಭವಿಗಳಿಗೆ ಆಹಾರ ಕೊಡುವ ಬದಲು ಖಾತೆಗೆ ಇಂತಿಷ್ಟು ಹಣ ಜಮೆ ಮಾಡಿದರೆ ಅನುಕೂಲವಾಗುತ್ತದೆ. ಇಲ್ಲವಾದರೆ, ಸರ್ಕಾರದ ಯೋಜನೆಯೂ ವ್ಯರ್ಥ; ಹಣವೂ ಪೋಲು ಎಂದರು.

ಇಲಾಖೆ ಎಷ್ಟೇ ಪ್ರಯತ್ನ ಪಟ್ಟರೂ ಗರ್ಭಿಣಿಯರು ಅಂಗನವಾಡಿಗೆ ಬಂದು ಊಟ ಮಾಡಲು ಆಸಕ್ತಿ ತೋರುತ್ತಿಲ್ಲ. ಫನಾನುಭವಿಗಳ ಮನೆಗಳು ಅಂಗನವಾಡಿಯಿಂದ ದೂರು ಇರುವುದು ಇದಕ್ಕೆ ಪ್ರಮುಖ ಕಾರಣ. ಹಾಗಾಗಿ, ಕುಟುಂಬದ ಸದಸ್ಯರ ಅಥವಾ ಅಂಗನವಾಡಿ ಮಕ್ಕಳ ಮೂಲಕ ಅವರಿಗೆ ಬಾಕ್ಸ್‌ನಲ್ಲಿ ಊಟ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲಿಸ್ ತಿಳಿಸಿದರು.

ಜಿಲ್ಲೆಯಲ್ಲಿ ಶೇ 50ರಷ್ಟು ಮಾತ್ರ ‘ಮಾತೃಪೂರ್ಣ’ ಯೋಜನೆ ಜಾರಿಯಾಗಿದೆ. ಗರ್ಭಿಣಿಯರನ್ನು ಅಂಗನವಾಡಿ ಕೇಂದ್ರಗಳತ್ತ ಸೆಲೆಯಲು ಹಲವು ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಅದರ ಭಾಗವಾಗಿ ಕುಚಲಕ್ಕಿ ಅನ್ನ ನೀಡುವ ಉದ್ದೇಶವಿದೆ ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರತಿಕ್ರಿಯಿಸಿ, ಯೋಜನೆ ಜಾರಿಯಲ್ಲಿ ಎದುರಾಗಿರುವ ಸವಾಲು ಹಾಗೂ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಸರ್ಕಾರಕ್ಕೆ ಕಳುಹಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ‘ಮಾತೃ ವಂದನ’ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಮೊದಲ ಬಾರಿ ಗರ್ಭಿಣಿಯಾದವರು ಯೋಜನೆಯಡಿ ಆರ್ಥಿಕ ನೆರವು ಪಡೆಯಬಹುದು. ಫಲಾನುಭವಿಗಳ ಖಾತೆಗೆ ಹಂತ ಹಂತವಾಗಿ ₹ 6 ಸಾವಿರ ಜಮೆಯಾಗಲಿದೆ. ಇದುವರೆಗೂ ಜಿಲ್ಲೆಯಲ್ಲಿ 25 ಸಾವಿರ ಫಲಾನುಭವಿಗಳು ಅನುಕೂಲ ಪಡೆದುಕೊಂಡಿದ್ದಾರೆ ಎಂದು ಗ್ರೇಸಿ ಗೊನ್ಸಾಲಿಸ್ ತಿಳಿಸಿದರು. ಸಂಸದರು ಮೆಚ್ಚುಗೆ ಸೂಚಿಸಿದರು.

ಜಿಲ್ಲೆಯಲ್ಲಿ ಶಿಶುಮರಣ ಹೆಚ್ಚಾಗಲು ಕಾರಣಗಳೇನು, ಶಿಶುಮರಣ ತಡೆಗೆ ತೆಗೆದುಕೊಂಡಿರುವ ಕ್ರಮಗಳೇನು ಎಂದು ಡಿಎಚ್‌ಒ ಅವರನ್ನು ಸಂಸದರು ಪ್ರಶ್ನಿಸಿದಾಗ,ಪ್ರತಿಕ್ರಿಯಿಸಿದ ಡಿಎಚ್‌ಒ ಕಳೆದ ವರ್ಷ ಜಿಲ್ಲೆಯಲ್ಲಿ 135 ಶಿಶುಗಳು ಮೃತಪಟ್ಟಿವೆ. ಈ ವರ್ಷ 68 ಶಿಶುಗಳು ಸಾವನ್ನಪ್ಪಿವೆ. ರಾಜ್ಯದಲ್ಲಿ ಒಟ್ಟಾರೆ ಶಿಶುಮರಣ ಪ್ರಮಾಣ ಶೇ 24ರಷ್ಟಿದೆ. ಜಿಲ್ಲೆಯಲ್ಲಿ ಶೇ 9ರಷ್ಟಿದೆ ಎಂದರು.

ಕರಾವಳಿಯಲ್ಲಿ ಶಿಶುಮರಣದಂತಹ ಪ್ರಕರಣಗಳು ಇರಬಾರದು. ಗರ್ಭಿಣಿಯರ ನಿರಂತರ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ಸರಬರಾಜು ಸೇರಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಎಚ್‌ಒ ಅವರಿಗೆ ಸಂಸದರು ಸೂಚಿಸಿದರು.

ಜಿಲ್ಲೆಗೆ 5 ಬಿಎಲ್‌ಎಸ್‌ (ಬಿಲೊಲೈಫ್‌ ಸಪೋರ್ಟ್‌) 3 ಎಎಲ್‌ಎಸ್‌ (ಎಬೊವ್‌ ಲೈಫ್‌ ಸಪೋರ್ಟ್‌) ಆಂಬುಲೆನ್ಸ್‌ಗಳು ಮಂಜೂರಾಗಿದ್ದು, 7 ಆಂಬುಲೆನ್ಸ್‌ಗಳು ಈಗಾಗಲೇ ಜಿಲ್ಲೆಗೆ ಬಂದಿವೆ. ಅಗತ್ಯವಿರುವೆಡೆ ಸೇವೆ ನೀಡಲಿವೆ ಎಂದು ಡಿಎಚ್‌ಒ ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಸಂಬಂಧಪಟ್ಟ ಎಲ್ಲ ಪ್ರಕ್ರಿಯೆಗಳು ಹಾಗೂ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳಿಸಬೇಕು.ಕಾಮಗಾರಿಗಳಿಗೆ ಸಂಬಂಧಪಟ್ಟ ಯೋಜನೆಗಳು ಕೇಂದ್ರ ಸರ್ಕಾರದ ಹಂತದಲ್ಲಿ ಬಾಕಿ ಇದ್ದರೆ ಗಮನಕ್ಕೆ ತರಬೇಕು. ತಕ್ಷಣ ಸಚಿವರ ಹಾಗೂ ಅಧಿಕಾರಿಗಳ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

ಉಡುಪಿ-ಮಣಿಪಾಲ ಚತುಷ್ಪಥ ರಸ್ತೆ ಕಾಮಗಾರಿ ತ್ವರಿತವಾಗಿ ಸಾಗಬೇಕು. ಕಾರ್ಕಳ-ಮೂಡುಬಿದ್ರೆ-ಮಂಗಳೂರು ಹೆದ್ದಾರಿಯಲ್ಲಿ ಹೊಂಡಗುಂಡಿಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಸತಿ ನಿರ್ಮಾಣ ಯೋಜನೆಯಡಿ ಬಡವರಿಗೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡಬೇಕು. 94 ‘ಸಿ’ ಹಕ್ಕು ಪತ್ರ ಮಂಜೂರು ಸಂದರ್ಭ ಭೂಮಿಯ ಒಡೆತನದ ಬಗ್ಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಸಂವಹನ ಕೊರತೆಯಿಂದ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸರ್ವೇ ನಡೆಸಿ, ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT