ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವರ್ಷಗಳಿಂದ ಬೆದರಿಕೆ ಕರೆ, ತನಿಖೆಗೆ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹ

Last Updated 6 ಮೇ 2020, 13:51 IST
ಅಕ್ಷರ ಗಾತ್ರ

ಕುಂದಾಪುರ: ‘ನನಗೆ ವಿದೇಶದಿಂದ ಬೆದರಿಕೆ ಕರೆ ಬರುತ್ತಿರುವ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇನೆ. ರಾಜ್ಯ ಪೊಲೀಸ್‌ ಮುಖ್ಯಸ್ಥರೊಂದಿಗೂ ಮಾತನಾಡಿದ್ದೇನೆ. ಈ ಕುರಿತು ಸಮಗ್ರ ತನಿಖೆ ಆಗಬೇಕು’ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಕುಂದಾಪುರದ ಪುರಸಭಾ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ, ದಿನಸಿ ಕಿಟ್‌ ವಿತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನನಗೆ ಕರೆ ಮಾಡಿರುವ ದೂರವಾಣಿ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದೇನೆ. ಕುಂದಾಪುರದಲ್ಲಿ ಇರುವಾಗಲೂ ಕರೆ ಬಂದಿತ್ತು. ಆದರೆ ನಾನು ಸ್ವೀಕರಿಸಲಿಲ್ಲ. 2 ವರ್ಷಗಳಿಂದಲೂ ಈ ರೀತಿ ಇಂಟರ್‌ನೆಟ್‌ ಕರೆಗಳು ಬರುತ್ತಿವೆ. ಈ ಹಿಂದೆ ಎಸ್‌ಪಿಯಾಗಿದ್ದ ಅಣ್ಣಾಮಲೈ ಅವರಿಗೂ ಈ ಕುರಿತು ತಿಳಿಸಿದ್ದೆ. ಪಿಎಫ್‌ಐ ಹಾಗೂ ಎಸ್‌ಡಿಪಿಐ ವಿರುದ್ಧ ಮಾತನಾಡಿದಾಗ, ತಬ್ಲೀಗಿ ಬಗ್ಗೆ ಮಾತನಾಡಿದಾಗ ಕರೆ ಬರುತ್ತಿರುತ್ತದೆ. ಜಿಹಾದಿಗಳಿಂದ ಕೇರಳದ ಯುವಕನಿಗೆ ವಿದೇಶದಲ್ಲಿ ಕಪಾಳ ಮೋಕ್ಷವಾಗಿರುವ ಕುರಿತು ಮಾತನಾಡಿದ್ದಲ್ಲದೆ, ಅಮಿತ್‌ ಶಾ ಅವರಿಗೆ ಪತ್ರ ಬರೆದ ಮೇಲೆ ಇಂತಹ ಕರೆಗಳ ಸಂಖ್ಯೆ ಜಾಸ್ತಿಯಾಗಿ‌ದೆ’ ಎಂದರು.

‘ರಾಜ್ಯದಲ್ಲಿ ಪೊಲೀಸರ ಸಂಖ್ಯೆ ಕಡಿಮೆ ಇರುವುದರಿಂದಾಗಿ, ನಾನು ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ತೆಗೆದುಕೊಂಡಿಲ್ಲ. ನನಗೆ ಜನರು ಹಾಗೂ ಕಾರ್ಯಕರ್ತರು ಶ್ರೀರಕ್ಷೆಯಾಗಿರುವುದರಿಂದ ಯಾವ ಭದ್ರತೆಯೂ ಬೇಡ. ಕೊರೊನಾ ವೈರಸ್‌ ವಿಸ್ತರಣೆಯಾಗದಂತೆ ಜಿಲ್ಲಾಡಳಿತ ಕೈಗೊಂಡ ಕಾರ್ಯಾಚರಣೆ ಹಾಗೂ ಗಟ್ಟಿ ನಿರ್ಧಾರ ಮೆಚ್ಚುಗೆಗೆ ಅರ್ಹವಾಗಿದೆ’ ಎಂದ ಅವರು, ‘ಕೊರೊನಾ ಕಾರಣದಿಂದ ಏರುಪೇರಾದ ದೇಶದ ಒಟ್ಟಾರೆ ಅಭಿವೃದ್ಧಿ ಹಾಗೂ ಆರ್ಥಿಕ ಸ್ಥಿತಿ–ಗತಿ ಯನ್ನು ಸರಿದೂಗಿಸಲು ಸರ್ಕಾರ ಕೈಗೊಳ್ಳುವ ನಿರ್ಧಾರದ ಜತೆಗಿರುತ್ತೇನೆ’ ಎಂದು ತಿಳಿಸಿದರು.

ಪಡಿಯಾರ್‌ ಮನೆಗೆ ಭೇಟಿ: ಆರ್‌ಎಸ್‌ಎಸ್‌ ಪ್ರಮುಖ ಡಾ.ಎಸ್‌.ಎನ್‌.ಪಡಿಯಾರ್‌ ಅವರ ಮನೆಗೆ ಭೇಟಿ ನೀಡಿ ಪ್ರಧಾನಿ ಪರಿಹಾರ ನಿಧಿಗೆ ವೇದಗಣಿತ ಅಧ್ಯಯನ ವೇದಿಕೆಯಿಂದ ₹5 ಲಕ್ಷ ನೆರವು ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ ಅವರು, ಅರುಣಾ ಎಸ್‌.ಎನ್‌.ಪಡಿಯಾರ್‌ ಅವರು ವೈಯಕ್ತಿಕವಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ ಚೆಕ್‌ ಅನ್ನು ಸ್ವೀಕರಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್‌ಕುಮಾರ ಕೊಡ್ಗಿ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಬೀಜಾಡಿ, ಸತೀಶ್ ಪೂಜಾರಿ ವಕ್ವಾಡಿ, ವಿನೋಸ್‌ರಾಜ್‌ ಪೂಜಾರಿ, ಪುರಸಭೆ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ, ಶಿವ ಮೆಂಡನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT