ಉಡುಪಿಯ ರಾಜಾಂಗಣದಲ್ಲಿ ಮುದ್ದುಕೃಷ್ಣರ ಕಲರವ

7
ವೇದಿಕೆ ಮೇಲೆ ಪುಟ್ಟಪುಟ್ಟ ಹೆಜ್ಜೆ ಹಾಕಿದ್ದ ಕಂದಮ್ಮಗಳು: ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಣೆ

ಉಡುಪಿಯ ರಾಜಾಂಗಣದಲ್ಲಿ ಮುದ್ದುಕೃಷ್ಣರ ಕಲರವ

Published:
Updated:
Deccan Herald

ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದ ತುಂಬೆಲ್ಲ ಮುದ್ದುಕೃಷ್ಣರ ಕಲರವ ತುಂಬಿಕೊಂಡಿತ್ತು. ಕೈನಲ್ಲಿ ಕೊಳಲು, ಮೊಸರಿನ ಕುಡಿಕೆ ಹಿಡಿದು, ವೇದಿಕೆ ಮೇಲೆ ಪುಟ್ಟಪುಟ್ಟ ಹೆಜ್ಜೆಗಳನ್ನು ಹಾಕುತ್ತಿದ್ದ ಬಾಲಕೃಷ್ಣರನ್ನು ನೋಡುವುದು ಕಣ್ಣಿಗೆ ಹಬ್ಬವಾಗಿತ್ತು.

ಪ್ರತಿವರ್ಷದಂತೆ ಈ ಬಾರಿಯೂ ಕೃಷ್ಣ ಜಯಂತಿ ಅಂಗವಾಗಿ ಪರ್ಯಾಯ ಪಲಿಮಾರು ಮಠದಿಂದ ಭಾನುವಾರ ರಾಜಾಂಗಣದಲ್ಲಿ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಾರು ಮುದ್ದುಕೃಷ್ಣರು ಭಾಗವಹಿಸಿ ಕೃಷ್ಣನ ವಿನೋದಾವಳಿಗಳನ್ನು ಪ್ರದರ್ಶಿಸಿದರು.

ತಲೆಯಲ್ಲಿ ನವಿಲು ಗರಿ ಸಿಕ್ಕಿಸಿಕೊಂಡ ಕಿರೀಟ, ಮೈತುಂಬಾ ಆಭರಣ ಸರಗಳ ಮಾಲೆ, ರೇಷ್ಮೆ ಪಂಚೆ, ತೋಳುಬಂಧಿ, ಕೈನಲ್ಲಿ ಬೆಣ್ಣೆಯ ಕುಡಿಕೆ ಹಿಡಿದು ಪುಟಾಣಿ ಮಕ್ಕಳು ಹೆಜ್ಜೆಹಾಕುವ ದೃಶ್ಯವನ್ನು ನೆರೆದಿದ್ದವರು ಕಣ್ತುಂಬಿಕೊಂಡರು.

ಮಧ್ಯಾಹ್ನದ ಹೊತ್ತಿಗೆ ಪರ್ಯಾಯ ಪಲಿಮಾರು ವಿದ್ಯಾಧೀಶರು ರಾಜಾಂಗಣದ ವೇದಿಕೆಗೆ ಬಂದು ಮುದ್ದುಕೃಷ್ಣರ ಲೀಲಾವಳಿಗಳನ್ನು ವೀಕ್ಷಿಸಿದರು. ಕೆಲಹೊತ್ತು ಮಕ್ಕಳ ಜತೆ ಕಾಲಕಳೆದು ಎಲ್ಲರಿಗೂ ಆಶೀರ್ವದಿಸಿದರು.

ಬಿಸಿಲಿನ ದಗೆ ಹೆಚ್ಚಿದ್ದರಿಂದ ಕೆಲವು ಮಕ್ಕಳು ಅಳುತ್ತಲೇ ವೇದಿಕೆಯಲ್ಲಿ ಹೆಜ್ಜೆಹಾಕಿದರು. ವರ್ಷದೊಳಗಿನ ಕಂದಮ್ಮಗಳು ವೇದಿಕೆಯಲ್ಲಿ ತೆವಳುತ್ತಾ ಸಾಗಿ, ಬೆಣ್ಣೆಯನ್ನು ಮುಖಕ್ಕೆ ಬಳಿದುಕೊಳ್ಳುತ್ತಿದ್ದ ದೃಶ್ಯ ಆಕರ್ಷಣೀಯವಾಗಿತ್ತು.

ಸ್ಪರ್ಧೆಯಲ್ಲಿ ಸುಮಾರು 250 ಮಕ್ಕಳು ಭಾಗವಹಿಸಿದ್ದರು. ಎಲ್ಲರಿಗೂ ಪ್ರಮಾಣ ಪತ್ರ, ಕೃಷ್ಣನ ಪ್ರಸಾದ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !