ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ್ಕಿಯ ಜಾನ್ ಸೌದಿಯಲ್ಲಿ ಅನುಮಾನಾಸ್ಪದ ಸಾವು

ಸಾವಿನ ಸತ್ಯ ಬಯಲಿಗೆ ಕುಟುಂಬ ಸದಸ್ಯರ ಒತ್ತಾಯ
Last Updated 2 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಉಡುಪಿ: ಈಚೆಗೆ ಸೌದಿ ಅರೇಬಿಯಾ ಜೈಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಮೂಲದ ಜಾನ್‌ ಮೊಂತೆರೊ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅವರ ಸಾವಿನ ತನಿಖೆಯಾಗಬೇಕು ಹಾಗೂ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಬೇಕು ಎಂದುಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷಡಾ.ರವೀಂದ್ರನಾಥ್ ಶಾನುಭಾಗ್ ಒತ್ತಾಯಿಸಿದರು.

ಸೋಮವಾರ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಜಾನ್‌ ಮೊಂತೆರೊ ತನ್ನದಲ್ಲದ ತಪ್ಪಿಗೆ ಸೌದಿ ಜೈಲಿನಲ್ಲಿ ನಾಲ್ಕೂವರೆ ವರ್ಷ ಶಿಕ್ಷೆ ಅನುಭವಿಸಿದ್ದಾರೆ. ಬಿಡುಗಡೆ ಹೊತ್ತಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅವರ ಸಾವು ಅಸಹಜವಾಗಿದ್ದು, ಷಡ್ಯಂತ್ರ ಅಡಗಿದೆ’ಎಂದು ಆರೋಪಿಸಿದರು.

‘ಜಾನ್ ಅವರ ಬಂಧನಕ್ಕೆ ಕಾರಣ ಏನು, ಸಾವು ಸಂಭವಿಸಿದ್ದು ಹೇಗೆ, ಮರಣೋತ್ತರ ಪರೀಕ್ಷಾ ವರದಿ, ಶಿಕ್ಷೆಯ ಆದೇಶ ಪ್ರತಿ, ಪಾಸ್‌ಪೋರ್ಟ್‌, ಆಸ್ತಿಯ ವಿವರ, ಬ್ಯಾಂಕ್‌ ಖಾತೆ ಹಾಗೂ ಜೀವ ವಿಮೆಯ ಮಾಹಿತಿ ಬಹಿರಂಗವಾಗಬೇಕು’ಎಂದು ಒತ್ತಾಯಿಸಿದರು.

ಜಾನ್‌ ಜೈಲಿನಲ್ಲಿ ಅನುಭವಿಸಿದ ಮಾನಸಿಕ ಹಾಗೂ ದೈಹಿಕ ಹಿಂಸೆಯ ಕುರಿತು ಕುಟುಂಬದ ಸದಸ್ಯರಿಗೆ ಫೋನ್ ಮೂಲಕ ವಿವರವಾಗಿ ಹೇಳಿದ್ದಾರೆ. ಸಂಭಾಷಣೆಯ ಸಾಕ್ಷ್ಯಗಳು ಲಭ್ಯವಿದ್ದು, ಇದನ್ನು ಪರಿಗಣಿಸಿ ವಿದೇಶಾಂಗ ಇಲಾಖೆಯು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಕರಣದ ವಿವರ:ಜೋನ್ ಮೊಂತೆರೊ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹಾಗೂ ಏರ್‌ಕಂಡಿಷನ್ ನಿರ್ವಹಣೆಯ ಪರಿಣಿತಿ ಪಡೆದಿದ್ದರು. 10 ವರ್ಷ ಅಬುದಾಬಿಯ ಪೆಟ್ರೋಲಿಯಂ ರಿಫೈನರಿಯಲ್ಲಿ ಉದ್ಯೋಗದಲ್ಲಿದ್ದರು. ರಿಫೈನರಿ ಬೆಂಕಿ ದುರಂತಕ್ಕೀಡಾದ ಬಳಿಕ ಕೆಲಸ ಕಳೆದುಕೊಂಡು ದೆಹಲಿಗೆ ಮರಳಿದ್ದರು. ಅಲ್ಲಿಯೇ ಅಮೀನಾ ಅವರನ್ನು ವಿವಾಹವಾಗಿದ್ದ ಅವರಿಗೆ ಕರೀಶ್ಮಾ ಹಾಗೂ ನಿರ್ಮಾಣ್‌ ಎಂಬ ಮಕ್ಕಳಿದ್ದಾರೆ.

2003ರಲ್ಲಿ ಮತ್ತೆ ಸೌದಿಗೆ:2003ರಲ್ಲಿ ಮತ್ತೆ ಉದ್ಯೋಗ ಹರಸಿ ಸೌದಿಗೆ ತೆರಳಿದ ಜಾನ್ 2014ರಲ್ಲಿ ನಾಪತ್ತೆಯಾದರು. ಅವರ ಪತ್ತೆಗೆ ಕುಟುಂಬ ಸದಸ್ಯರು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಬಳಿಕ ಪತ್ನಿಗೆ ಕರೆಮಾಡಿದ ಜಾನ್‌ ಏರ್‌ಕಂಡೀಷನ್‌ ರಿಪೇರಿಗೆ ಜೈಲಿಗೆ ಬಂದಿದ್ದಾಗ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದ್ದರು.

ಐದು ವರ್ಷ ಜೈಲು:ನಾಲ್ಕೈದು ತಿಂಗಳಾದರೂ ಜಾನ್‌ ಬಿಡುಗಡೆಯಾಗಲಿಲ್ಲ. ಬಳಿಕ, ನ್ಯಾಯಾಲಯ 5 ವರ್ಷ ಶಿಕ್ಷೆ ವಿಧಿಸಿರುವ ಮಾಹಿತಿ ದೊರೆಯಿತು. ಆದರೆ, ಯಾವ ಕಾರಣಕ್ಕೆ ಶಿಕ್ಷೆ ನೀಡಲಾಗಿದೆ ಎಂದು ಯಾರೂ ತಿಳಿಸಲಿಲ್ಲ. ರಾಯಭಾರ ಕಚೇರಿಯೂ ಸ್ಪಂದಿಸಲಿಲ್ಲ. ಉದ್ದೇಶಪೂರ್ವಕವಾಗಿ ಜಾನ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಿರುವ ಬಲವಾದ ಶಂಕೆ ಇದೆ ಎಂದು ಶಾನುಭಾಗ್ ಅನುಮಾನ ವ್ಯಕ್ತಪಡಿಸಿದರು.

ಜಾನ್ ಪತ್ನಿ ಅಮೀನಾ ಮಾತನಾಡಿ, ಜೈಲಿನಲ್ಲಿನ ಹಿಂಸೆ ತಾಳಲಾರದೆ ಪತಿ ಅನಾರೋಗ್ಯಕ್ಕೆ ತುತ್ತಾಗಬೇಕಾಯಿತು. ಸೂಕ್ತ ಚಿಕಿತ್ಸೆ ಕೊಡಿಸುವಂತೆ ರಾಯಭಾರ ಕಚೇರಿಗೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ. 2019ರ ಜೂನ್‌ನಲ್ಲಿ ಪತಿ ಬಿಡುಗಡೆಯಾಗಬೇಕಿತ್ತು. ಅಷ್ಟರಲ್ಲಿ ಫೆಬ್ರುವರಿ 16ರಂದು ಪತಿ ಮೃತಪಟ್ಟ ಸುದ್ದಿ ಬಂತು ಎಂದು ಕಣ್ಣೀರಾದರು.

ಸಾವಿನ ನಂತರವೂ ವೇದನೆ:ಪತಿ ಶವವನ್ನು ಭಾರತಕ್ಕೆ ಕಳುಹಿಸಲು ₹ 1.75 ಲಕ್ಷ ಕೇಳಿದರು. ಸಂಕಷ್ಟದಲ್ಲಿದ್ದರಿಂದ ಹಣ ಕೊಡಲಾಗಲಿಲ್ಲ. ಕೊನೆಗೆಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ನೆರವಿನಿಂದ ನಿರಂತರ ಸಂವಹನ ನಡೆಸಿದ್ದರ ಫಲವಾಗಿ ಪತಿ ಮೃತಪಟ್ಟ ಆರು ತಿಂಗಳ ಬಳಿಕ ನ.27ರಂದು ಶವ ಭಾರತಕ್ಕೆ ಬಂತು ಎಂದು ಪತ್ನಿ ಅಮೀನಾ ಗೋಳಾಡಿದರು.

‘ಅಪ್ಪನ ಬಂಧನದಿಂದ ಇಡೀ ಕುಟುಂಬ ಬೀದಿಗೆ ಬೀಳಬೇಕಾಯಿತು. ಆರ್ಥಿಕ ಸಂಕಷ್ಟದಿಂದ ನಾಲ್ಕು ವರ್ಷ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ತಾಯಿ ಕೂಲಿ ಮಾಡಬೇಕಾಯಿತು.ಅಪ್ಪ ಬದುಕಿದ್ದಾಗ ನ್ಯಾಯ ಸಿಗಲಿಲ್ಲ. ಸತ್ತ ಮೇಲಾದರೂ ನ್ಯಾಯ ಸಿಗಬೇಕು’ ಎಂದು ಪುತ್ರಿ ಕರಿ‌ಷ್ಮಾ ಒತ್ತಾಯಿಸಿದರು.

ಈ ಸಂದರ್ಭ ವಕೀಲರಾದ ಶಾಂತರಾಮ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT