ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅವ್ಯವಸ್ಥೆ; ಅವೈಜ್ಞಾನಿಕ ಕಾಮಗಾರಿ ಪ್ರತಿಧ್ವನಿ

ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ: ಅಧಿಕಾರಿಗಳ ವಿರುದ್ಧ ಗರಂ
Last Updated 27 ಜೂನ್ 2022, 15:06 IST
ಅಕ್ಷರ ಗಾತ್ರ

ಉಡುಪಿ: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗಳ ಬಗ್ಗೆ ಸೋಮವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಯಿತು.

ಉಡುಪಿ ಹಾಗೂ ಮಣಿಪಾಲ ನಗರದೊಳಗೆ ಹಾದು ಹೋಗಿರುವ 169 ಎ ಹಾಗೂ 66 ವ್ಯಾಪ್ತಿಯ ಇಂದ್ರಾಳಿ, ಪರ್ಕಳ, ಅಂಬಾಗಿಲು, ಕಲ್ಸಂಕ ಹಾಗೂ ಪೆರಂಪಳ್ಳಿ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಸದಸ್ಯರು ಸಭೆಯಲ್ಲಿ ಧನಿ ಎತ್ತಿದರು.

ಆರೋಪ ಪ್ರತ್ಯಾರೋಪ:

ಮಣಿಪಾಲ ಸಮೀಪದ ಕೆಳ ಪರ್ಕಳ ರಸ್ತೆ ಕುಸಿತ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ವಾರಾಹಿ ಯೋಜನೆ ಅಧಿಕಾರಿಗಳು ಆರೋಪ ಪ್ರತ್ಯಾರೋಪ ಮಾಡಿದರು. ರಸ್ತೆ ಕುಸಿದಿರುವುದಕ್ಕೆ ವಾರಾಹಿ ಪೈಪ್‌ಲೈನ್ ಕಾಮಗಾರಿ ಕಾರಣ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ದೂರಿದರೆ, ರಸ್ತೆ ಕುಸಿತವಾಗಿರುವ ಜಾಗದಲ್ಲಿ ಕಾಮಗಾರಿಯನ್ನೇ ನಿರ್ವಹಿಸಿಲ್ಲ ಎಂದು ವಾರಾಹಿ ಯೋಜನೆ ಎಂಜಿನಿಯರ್ ರಾಜಶೇಖರ್ ಸ್ಪಷ್ಟನೆ ನೀಡಿದರು.

ವಾದ ಪ್ರತಿವಾದಗಳ ಬಳಿಕ ಸಭೆಯ ಬಳಿಕ ಜಂಟಿ ಸ್ಥಳ ಪರಿಶೀಲನೆ ನಡೆಸಲು ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಘೋಷಿಸಿ ವಿವಾದಕ್ಕೆ ತೆರೆ ಎಳೆದರು.

ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಮಾತನಾಡಿ, ಕುಸಿದಿರುವ ಪರ್ಕಳ ರಸ್ತೆ ದುರಸ್ತಿಗೆ ತುರ್ತು ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿದರು. ಅದರಂತೆ ತುರ್ತು ರಸ್ತೆ ದುರಸ್ತಿಗೆ, ಚರಂಡಿ ಕಾಮಗಾರಿ ನಡೆಸಲು ಅಧ್ಯಕ್ಷೆ ಸುಮಿತ್ರಾ ನಾಯಕ್‌ ಹಾಗೂ ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದ್ರಾಳಿ ರಸ್ತೆ ಅವ್ಯವಸ್ಥೆ, ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ಕುರಿತು ನಗರಸಭೆ ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಹೆದ್ದಾರಿ ಇಲಾಖೆಯ ಎಂಜಿನಿಯರ್ ಮಂಜುನಾಥ್‌, ರೈಲ್ವೆ ಸೇತುವೆ ನಿರ್ಮಾಣ ವಿನ್ಯಾಸ ಬದಲಾಯಿಸಿ ಅನುಮೋದನೆಗೆ ಕಳುಹಿಸಲಾಗಿದ್ದು, ಮಂಜೂರಾತಿ ಸಿಕ್ಕ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಮೇಲೆ ಮಳೆ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸದಸ್ಯರಾದ ಅಶೋಕ್ ನಾಯಕ್‌ ಮಂಚಿ ಹಾಗೂ ಗಿರೀಶ್ ಅಂಚನ್ ಒತ್ತಾಯಿಸಿದರು.

ಅವೈಜ್ಞಾನಿಕ ಕಾಮಗಾರಿಯಿಂದ ಲಕ್ಷ್ಮೀಂದ್ರ ನಗರ, ಎಂಜಿಎಂ ಕಾಲೇಜು ಬಳಿ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆೆ ಮೇಲೆ ನಿಲ್ಲುತ್ತಿದೆ. ಕರಾವಳಿ ಬೈಪಾಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ನಿಲ್ಲುತ್ತಿದ್ದು ಸವಾರರು ಹಾಗೂ ಪಾದಚಾರಿಗಳು ತೊಂದರೆ ಎದುರಿಸುವಂತಾಗಿದೆ ಎಂದು ಸದಸ್ತೆ ಸವಿತಾ ಹರೀಶ್ ರಾಮ್ ಸಭೆಯ ಗಮನಕ್ಕೆ ತಂದರು.

ಅಂಬಾಗಿಲು ಪೆರಂಪಳ್ಳಿ ರಸ್ತೆ ಹೊಂಡ ಬೀಳಲು ಕಾರಣ ನೀಡಬೇಕು ಎಂದು ಸದಸ್ಯರಾದ ಪ್ರಭಾಕರ್ ಪೂಜಾರಿ, ಗಿರಿಧರ್ ಆಚಾರ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿದ್ಯುತ್ ಕಂಬಗಳಿಗೆ ನಿಯಮ ಉಲ್ಲಂಘಿಸಿ ಕೇಬಲ್‌ಗಳನ್ನು ನೇತುಬಿಡಲಾಗುತ್ತಿದ್ದು ಸಾರ್ಜವನಿಕರಿಗೆ ತೊಂದರೆಯಾಗಿದೆ ಎಂದು ಸದಸ್ಯ ರಮೇಶ್ ಕಾಂಚನ್ ವಿಷಯ ಪ್ರಸ್ತಾಪಿಸಿದರು. ಮೆಸ್ಕಾಂ ಅಧಿಕಾರಿ ಗುರುರಾಜ್ ಭಟ್ ನಿಯಮ ಉಲ್ಲಂಘಿಸಿದವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT