ಗುರುವಾರ , ಡಿಸೆಂಬರ್ 1, 2022
27 °C
ಗುತ್ತಿಗೆದಾರರ ಬಾಕಿ ಬಿಲ್‌ ಬಿಡುಗಡೆ ಮಾಡಿ: ಮುನಿಯಾಲು ಉದಯಕುಮಾರ ಶೆಟ್ಟಿ ಒತ್ತಾಯ

ಯಾವ ಪಕ್ಷವೂ 40 ಪರ್ಸೆಂಟ್ ಕಮಿಷನ್ ಕೇಳಿಲ್ಲ: ಗುತ್ತಿಗೆದಾರ ಮುನಿಯಾಲು ಉದಯಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ದಶಕಗಳಿಂದ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದು ಯಾವ ಪಕ್ಷದ ಜನಪ್ರತಿನಿಧಿಯೂ ಕಮಿಷನ್ ಕೊಡುವಂತೆ ಗುತ್ತಿಗೆದಾರರನ್ನು ಪೀಡಿಸಿಲ್ಲ ಎಂದು ಗುತ್ತಿಗೆದಾರ ಮುನಿಯಾಲು ಉದಯಕುಮಾರ ಶೆಟ್ಟಿ ಸ್ಪಷ್ಟನೆ ನೀಡಿದರು.

ಸೋಮವಾರ ಓಷಿಯನ್ ಪರ್ಲ್‌ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಶೇ 40ರಷ್ಟು ಕಮಿಷನ್‌ ವಿಚಾರ ಭಾರಿ ಸದ್ದು ಮಾಡುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಸಾರ್ವಜನಿಕರು ಬಹಿರಂಗವಾಗಿ ಗುತ್ತಿಗೆದಾರರನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಶೇ 40ರಷ್ಟು ಕಮಿಷನ್ ಕೊಟ್ಟು ಹೇಗೆ ಗುತ್ತಿಗೆ ಕಾಮಗಾರಿ ಮಾಡುತ್ತೀರಿ ಎಂದು ಕೇಳುತ್ತಿದ್ದಾರೆ. ಜನರ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸದಿದ್ದರೆ ಜಿಲ್ಲೆಯಲ್ಲಿರುವ ಗುತ್ತಿಗೆದಾರರು ಅಕ್ರಮದಲ್ಲಿ ಭಾಗಿದಾರರು ಎಂಬ ತಪ್ಪು ಸಂದೇಶ ಜನರಿಗೆ ರವಾನೆಯಾಗುತ್ತದೆ ಎಂದರು.

ಗುತ್ತಿಗೆ ಕೊಡುವಾಗ ಸರ್ಕಾರ ವಿಧಿಸುವ ನಿಯಮಗಳಿಗೆ ಬದ್ಧರಾಗಿ, ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಾಮಗಾರಿ ನಿರ್ವಹಿಸುತ್ತಿದ್ದೇವೆ. ಯಾರಿಗೂ ಕಮಿಷನ್ ಕೊಡುತ್ತಿಲ್ಲ, ಯಾರೂ ಕಮಿಷನ್ ಕೇಳಿಲ್ಲ ಎಂದು ಉದಯ ಕುಮಾರ್ ಶೆಟ್ಟಿ ಸ್ಪಷ್ಟಪಡಿಸಿದರು.

ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾದ್ಯ. ಕಮಿಷನ್‌ ವಿಚಾರವಾಗಿ ಸರ್ಕಾರ ಹಾಗೂ ಗುತ್ತಿಗೆದಾರರ ಮಧ್ಯೆ ತಿಕ್ಕಾಟದ ಪರಿಣಾಮ ಅಭಿವೃದ್ಧಿ ಕುಂಠಿತವಾಗುತ್ತದೆ. ಸರ್ಕಾರದಿಂದ ಕಾಮಗಾರಿಗಳ ಬಿಲ್‌ ಬಿಡುಗಡೆ ವಿಳಂಬವಾಗುತ್ತಿರುವ ಪರಿಣಾಮ ಜಿಲ್ಲೆಯಲ್ಲಿರುವ ಸಣ್ಣ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯ ಗುತ್ತಿಗೆದಾರರಿಗೆ ₹ 100 ಕೋಟಿಯಷ್ಟು ಬಿಲ್‌ ಬರಬೇಕಿದ್ದು, ಶೀಘ್ರ ಬಾಕಿ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಗುತ್ತಿಗೆದಾರರಿದ್ದು ಸಾವಿರಾರು ಕಾರ್ಮಿಕ ಕುಟುಂಬಗಳು ಗುತ್ತಿಗೆದಾರರ ಮೇಲೆ ಅವಲಂಬಿತವಾಗಿವೆ. ಗುತ್ತಿಗೆದಾರರು ನೆಮ್ಮದಿಯಿಂದ ಕೆಲಸ ನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರಾದ ಜೀವನ್‌ ಶೆಟ್ಟಿ ಬ್ರಹ್ಮಾವರ, ಜಯರಾಮ್, ವಾದಿರಾಜ ಶೆಟ್ಟಿ, ಪ್ರಶಾಂತ್ ಮರೋಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು