ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರ ಪಂಚಮಿ: ತನು ಎರೆದು ಭಕ್ತಿ ಸಮರ್ಪಣೆ

ನಾಗಬನ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ
Last Updated 5 ಆಗಸ್ಟ್ 2019, 16:29 IST
ಅಕ್ಷರ ಗಾತ್ರ

ಉಡುಪಿ: ನಗರದ ಪ್ರಮುಖ ನೈಸರ್ಗಿಕ ನಾಗಬನ ಹಾಗೂ ನಾಗನ ದೇವಸ್ಥಾನಗಳಲ್ಲಿ ಸೋಮವಾರ ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿಯನ್ನು ಆಚರಿಸಲಾಯಿತು.

ಬೆಳಿಗ್ಗಿನಿಂದಲೇ ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಕೆಲವರು ನೈಸರ್ಗಿಕ ನಾಗಬನಗಳಿಗೆ ತೆರಳಿ ತನು ಸಮರ್ಪಿಸಿದರು.

ಬೆಳಗಿನ ಜಾವ ಅರ್ಚಕರು ನಾಗನ ಮೂರ್ತಿಗಳನ್ನು ಸ್ವಚ್ಛಗೊಳಿಸಿ, ಬಗೆಬಗೆಯ ಹೂಗಳಿಂದ ಅಲಂಕಾರ ಮಾಡಿದ್ದರು. ಅಡಿಕೆಯ ಹಿಂಗಾರ, ಕೇದಗೆಯನ್ನು ಮುಡಿಸಿ ಸಿಂಗರಿಸಿದ್ದರು. ಬಳಿಕ ಭಕ್ತರು ಅರ್ಪಿಸಿದ ಸಿಯಾಳ ಹಾಗೂ ಹಾಲಿನ ಅಭಿಷೇಕ ಮಾಡಲಾಯಿತು.

ಮಂಗಳಾರತಿ ಪೂಜೆಯ ಬಳಿಕ ಹಿಂಗಾರದ ಪ್ರಸಾದ ವಿತರಿಸಲಾಯಿತು. ಕೆಲವರು ಕುಟುಂಬದ ಮೂಲನಾಗನ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಮಧ್ಯಾಹ್ನ ಮನೆಯಲ್ಲಿ ಹಬ್ಬದಡುಗೆಯ ಸವಿ ಸವಿಯಲಾಯಿತು.

ಶ್ರೀಕೃಷ್ಣ ಮಠದಲ್ಲಿ ಸೋದೆ ವಾದಿರಾಜ ಸ್ವಾಮೀಜಿ ಅವರಿಂದ ಪ್ರತಿಷ್ಠಾಪಿತವಾದ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ವಿಶೇಷ ಪೂಜೆ ನಡೆಯಿತು. ಪರ್ಯಾಯ ಪಲಿಮಾರು ವಿದ್ಯಾಧೀಶತೀರ್ಥರು ನಾಗದೇವರಿಗೆ ಪೂಜೆ ನೆರವೇರಿಸಿದರು. ಸಾವಿರಾರು ಭಕ್ತರು ಸೇವೆ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ದೊಡ್ಡಣಗುಡ್ಡೆಯ ಸಗ್ರಿ ನೈಸರ್ಗಿಕ ನಾಗಬನ, ಕಿದಿಯೂರು ಹೋಟೆಲ್‌ ಪಕ್ಕದ ನಾಗ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

ತಾಂಗೋಡು, ಮಾಂಗೋಡು, ಮುಚ್ಲುಕೋಡು, ಅರಿತೋಡು ನಾಗಸನ್ನಿಧಿ, ಕಡೆಕಾರು ಲಕ್ಷ್ಮೀನಾರಾಯಣ ಮಠದ ಶ್ರೀನಾಗ ದೇವರ ಗುಡಿ, ಮಣಿಪಾಲದ ಮಂಚಿಕರೆ ನಾಗಬನ, ಮಹತೋಬಾರ ಕೊಡವೂರು ಶಂಕರನಾರಾಯಣ ದೇವಸ್ಥಾನ, ಕಕ್ಕುಂಜೆ ಇಷ್ಟಸಿದ್ದಿ ವಿನಾಯಕ ದೇವಸ್ಥಾನ, ಇಂದ್ರಾಳಿಯ ನಾಗಬನ,ಮಣಿಪಾಲದ ಸರಳೆಬೆಟ್ಟು ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು.

ಜಿಟಿ ಜಿಟಿ ಮಳೆಯ ನಡುವೆಯೂ ಭಕ್ತರು ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT