ಭಾನುವಾರ, ಸೆಪ್ಟೆಂಬರ್ 15, 2019
26 °C
ಚುನಾವಣೆಯಲ್ಲಿ ಬಿಜೆಪಿಗೆ 150 ಸೀಟು: ನಳೀನ್ ಕುಮಾರ್ ಕಟೀಲ್ ವಿಶ್ವಾಸ

ದೇಶ ಪರಿವರ್ತನೆಗೆ ಅಧಿಕಾರಕ್ಕೇರಿದ ಬಿಜೆಪಿ

Published:
Updated:
Prajavani

ಉಡುಪಿ: ಬಿಜೆಪಿ ಅಧಿಕಾರದ ಆಸೆಗೆ ಚುಕ್ಕಾಣಿ ಹಿಡಿದಿಲ್ಲ. ದೇಶವನ್ನು ಪರಿವರ್ತನೆ ಮಾಡಲು ಅಧಿಕಾರಕ್ಕೇರಿದೆ. ವಿಶ್ವದಲ್ಲಿ ಭಾರತವನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸುವುದು ಪಕ್ಷದ ಗುರಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್‌ ಹೇಳಿದರು.

ಕಿದಿಯೂರು ಹೋಟೆಲ್‌ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಆಧಾರದಲ್ಲಿ ಚುನಾವಣೆಯ ಮೂಲಕ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವ ವ್ಯವಸ್ಥೆ ಬಿಜೆಪಿಯಲ್ಲಿ ಮಾತ್ರ ಉಳಿದುಕೊಂಡಿದೆ ಎಂದರು.

ಕಾಂಗ್ರೆಸ್‌ನಲ್ಲಿ ಸೋನಿಯಾಗಾಂಧಿ ಅವರನ್ನು ಬಿಟ್ಟರೆ ಅಧ್ಯಕ್ಷ ಗಾದಿ ಬೇರೆಯವರಿಗೆ ದಕ್ಕುವುದಿಲ್ಲ. ಆದರೆ, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೂ ಅಧ್ಯಕ್ಷನಾಗಬಹುದು, ಪ್ರಧಾನಿ ಹುದ್ದೆಗೇರಬಹುದು ಎಂದರು.

ಹಿಂದೆ ಕಾಂಗ್ರೆಸ್‌ ನಾಯಕರು ಅಧಿಕಾರ ಸಿಕ್ಕರೆ ಭಾರತವನ್ನು ಅಮೇರಿಕಾ ಮಾಡುತ್ತೇವೆ, ಸಿಂಗಾಪುರ, ಜಪಾನ್‌ ಮಾಡುತ್ತೇವೆ ಎಂದು ಭರವಸೆ ನೀಡುತ್ತಿದ್ದರು. ಈಗ ಅಮೇರಿಕಾ ದೇಶವೇ ಮೋದಿ ಅವರಂತಹ ಆಡಳಿತ ನೀಡುವುದಾಗಿ ಹೇಳುತ್ತಿದೆ ಎಂದರು.

ಬಿಜೆಪಿ ಕಟ್ಟಿದ ಮುಖಂಡರ ಕನಸಿನಂತೆ ಕಾಶ್ಮೀರ ಸೇರಿದಂತೆ ಇಡೀ ದೇಶದಲ್ಲಿ ಏಕರೂಪದ ಧ್ವಜ ಹಾರಾಡುತ್ತಿದೆ. ತ್ರಿವಳಿ ತಲಾಕ್‌ ನಿಷೇಧ ಮಾಡಿ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ನೀಡಲಾಗಿದೆ. ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.

ಬಿಜೆಪಿ ಅಧ್ಯಕ್ಷ ಸ್ಥಾನದ ಸವಾಲುಗಳ ಅರಿವಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ 150 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ. ರಾಜ್ಯದಾದ್ಯಂತ ಪಕ್ಷವನ್ನು ಸಂಘಟಿಸಿ ಬಲಗೊಳಿಸಲಾಗುವುದು ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.

ನರೇಂದ್ರ ಮೋದಿ ಅವರಂತೆ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಿವೃದ್ಧಿ ಪರ್ವ ಆರಂಭಿಸಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ ಎಂದರು.

ಸಚಿವ ಕೋಟ ಜನಾರ್ಧನ ಪೂಜಾರಿ ಮಾತನಾಡಿ, ‘ಕಾಶ್ಮೀರದಲ್ಲಿ 370ನೇ ವಿಧಿ ರದ್ದಾಗುವ ವಿಶ್ವಾಸ ಜನರಲ್ಲಿ ಇರಲಿಲ್ಲ. ಆದರೆ, ಬಿಜೆಪಿ ಜನರ ವಿಶ್ವಾಸವನ್ನು ಉಳಿಸಿಕೊಂಡಿದೆ. ಒಂದು ದೇಶ, ಒಂದು ಧ್ವಜ ಕನಸನ್ನು ಸಾಕಾರಗೊಳಿಸಿದೆ’ ಎಂದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ನಳೀನ್ ಕುಮಾರ್ ಅವರ ಮುಂದೆ ಸವಾಲುಗಳು ಸಾಕಷ್ಟಿವೆ. ಬೂತ್ ಮಟ್ಟದ ಸಾಮಾನ್ಯ ಕಾರ್ಯಕರ್ತರ ನೋವುಗಳನ್ನು ಆಲಿಸಬೇಕಿದೆ. ಭಾವನೆಗಳಿಗೆ ಬೆಲೆ ಕೊಡಬೇಕಿದೆ ಎಂದು ಸಲಹೆ ನೀಡಿದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ಆಡಳಿತ ಪಕ್ಷ ಸರ್ಕಾರ ನಡೆಸುವಾಗ ಪಕ್ಷದ ಅಧ್ಯಕ್ಷನಾಗುವುದು ಬಹಳ ಕಷ್ಟ. ಶಾಸಕರು, ಕಾರ್ಯಕರ್ತರ ಮನಸ್ಸಿಗೆ ನೋವಾಗದಂತೆ, ಸಮಸ್ಯೆಗಳು ಉಲ್ಭಣವಾಗದಂತೆ ಎಚ್ಚರವಹಿಸಬೇಕು. ಈ ಜವಾಬ್ದಾರಿಯನ್ನು ನಳಿನ್ ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ಇದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಶಾಸಕ ಲಾಲಾಜಿ ಮೆಂಡನ್‌, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. 

‘ಪರೋಕ್ಷ ಚಾಟಿ’

’ಸಂಘದ ಪ್ರಚಾರಕನಾಗಿದ್ದ ನನಗೆ 2004ರಲ್ಲಿ ರಾಜಕೀಯ ಪ್ರವೇಶಿಸುವಂತೆ ಪ್ರಮುಖರು ಸೂಚನೆ ನೀಡಿದರು. ಉಗ್ರವಾಗಿ ಭಾಷಣ ಮಾಡುವ ಹುಚ್ಚಿದ್ದರಿಂದ ರಾಜಕೀಯ ಬೇಡ ಬಜರಂಗದಳದಲ್ಲಿ ಯಾವುದಾದರೂ ಹುದ್ದೆ ಕೊಡಿ ಎಂದು ಒತ್ತಾಯಿಸಿದೆ. ಕೇಳಿದ್ದನ್ನು ಕೊಡಲು ಸಾಧ್ಯವಿಲ್ಲ; ಕೊಟ್ಟಿದ್ದನು ಮಾಡಬೇಕು ಎಂದು ಪ್ರಮುಖರು ಸೂಚಿಸಿದರು. ಈ ಸೂಕ್ಷ್ಮವನ್ನು ಪಕ್ಷದಲ್ಲಿರುವ ಎಲ್ಲರೂ ಅರಿಯಬೇಕು’ ಎಂದು ಪರೋಕ್ಷವಾಗಿ ನಳಿನ್ ಕುಮಾರ್ ಕಟೀಲು ಅತೃಪ್ತರಿಗೆ ಚಾಟಿ ಬೀಸಿದರು.

ಪೂಜಾರಿಯನ್ನು ಹೊಗಳಿದ ಕಟೀಲ್‌

2009ರಲ್ಲಿ ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಪಕ್ಷ ಸೂಚಿಸಿತು. ಆಗ ಎದುರಾಳಿಯಾಗಿದ್ದು, ಭ್ರಷ್ಟಾಚಾರದ ಆರೋಪವಿಲ್ಲದ, ಸಾಲಮೇಳಗಳ ಹರಿಕಾರ ಎಂದು ಪ್ರಸಿದ್ಧರಾಗಿದ್ದ ಸಜ್ಜನ ರಾಜಕಾರಣಿ ಜನಾರ್ಧನ ಪೂಜಾರಿ. ವೈಯಕ್ತಿಕ ವರ್ಚಿಸ್ಸು ಇರಲಿಲ್ಲವಾದರೂ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಚಾರ ಮಾಡಿ ಗೆಲ್ಲಿಸಿದರು. ಜನಾರ್ಧನ ಪೂಜಾರಿ ಈಗಲೂ ನನಗೆ ಗುರುಗಳಿದ್ದಂತೆ. ಇಬ್ಬರ ನಡುವಿನ ಬಾಂಧವ್ಯ ಚೆನ್ನಾಗಿದೆ ಎಂದು ನಳೀನ್ ಕುಮಾರ್ ಕಟೀಲ್‌ ಪೂಜಾರಿ ಅವರನ್ನು ಹೊಗಳಿದರು.

Post Comments (+)