ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಸದಾ ಪ್ರೇರಣಾ ಶಕ್ತಿ ಕೇಂದ್ರ ಉಡುಪಿ: ನಳಿನ್ ಕುಮಾರ್ ಕಟೀಲ್

ರಾಜ್ಯ ಪದಾಧಿಕಾರಿಗಳ ಸಭೆ
Last Updated 10 ಮೇ 2022, 14:08 IST
ಅಕ್ಷರ ಗಾತ್ರ

ಉಡುಪಿ: ರಾಷ್ಟ್ರದಲ್ಲಿ ಮೊದಲ ಬಾರಿಗೆ ಜನಸಂಘದ ಅಭ್ಯರ್ಥಿ ಗೆದ್ದಿದ್ದು ಉಡುಪಿ ನಗರಸಭೆಯಲ್ಲಿ. ದಕ್ಷಿಣ ಭಾರತದಲ್ಲಿ ಜನಸಂಘದ ಮೊದಲ ಶಾಸಕ ಆರಿಸಿಬಂದಿದ್ದು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ. ಹೀಗೆ ಪಕ್ಷದ ಹಲವು ಮೊದಲುಗಳಿಗೆ ಕಾರಣವಾಗಿರುವ ಉಡುಪಿ ಜಿಲ್ಲೆ ಬಿಜೆಪಿ ಪಾಲಿಗೆ ಸದಾ ಪ್ರೇರಣಾ ಶಕ್ತಿಕೇಂದ್ರ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಶ್ಲಾಘಿಸಿದರು.

ನಗರದ ಕಿದಿಯೂರು ಹೋಟೆಲ್‌ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕಿಂಗ್, ಶಿಕ್ಷಣ ಹಾಗೂ ಆರೋಗ್ಯ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ದೇಶಕ್ಕೆ ಹಾಗೂ ಜಗತ್ತಿಗೆ ಕೊಡುಗೆ ನೀಡಿರುವ ಉಡುಪಿ ಈಗ ಹಿಜಾಬ್ ಸೇರಿದಂತೆ ಸಮಾಜದ ಶಾಂತಿಭಂಗದ ಕಾರ್ಯಗಳಿಗೆ ದೇಶದಾದ್ಯಂತ ಚರ್ಚೆಯಾಗುತ್ತಿರುವುದು ಬೇಸರದ ಸಂಗತಿ ಎಂದರು.

ಆಜಾನ್ ಇರಲಿ, ಹಿಜಾಬ್ ಇರಲಿ, ಸಮಾಜದ ಶಾಂತಿಗೆ ಭಂಗ ತರುವ ಶಕ್ತಿಗಳ ವಿರುದ್ಧ ಬಿಜೆಪಿ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಯಲ್ಲಿ ಆಡಳಿತ ನೀಡಲಿದೆ ಎಂದರು.

ಒಂದು ಕೋಮಿನ ತುಷ್ಟೀಕರಣ ರಾಜಕಾರಣ ಬಿಜೆಪಿಯಲ್ಲಿಲ್ಲ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಿಂದ ವಿದ್ಯುತ್ ಕಂಬ ನಿಂತರೂ ಗೆಲ್ಲುತ್ತದೆ ಎಂಬ ಪರಿಸ್ಥಿತಿ ಬದಲಾಗಿದ್ದು ಬಿಜೆಪಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ನಿಲ್ಲಲು ಭಯಪಡುವಂತಹ ಪರಿಸ್ಥಿತಿಯನ್ನು ಬಿಜೆಪಿ ನಿರ್ಮಾಣ ಮಾಡಿದೆ ಎಂದರು.‌

ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವುದು ಬಿಜೆಪಿಯ ಧ್ಯೇಯ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಪರಿಕಲ್ಪನೆ ಇದೆ. ಅನಿವಾಸಿ ಭಾರತೀಯರು ವಿದೇಶಗಳಲ್ಲಿ ಧೈರ್ಯವಾಗಿ ಭಾರತೀಯ ಎಂದು ಹೇಳಿಕೊಳ್ಳುವಂತಹ ಪರಿಸ್ಥಿತಿಯನ್ನು ಬಿಜೆಪಿ ನಿರ್ಮಾಣ ಮಾಡಿದೆ ಎಂದರು.

ಕಾಂಗ್ರೆಸ್‌ ಕಾಲದಲ್ಲಿ ದೇಶದಲ್ಲಿ ಗರೀಭಿ ಹಠಾವೋ ಆಗಿದ್ದು ಗಾಂಧಿ ಕುಟುಂಬದ್ದು ಮಾತ್ರ; ಬಡವರದಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೋಟ್ಯಂತರ ಜನರಿಗೆ ಉಚಿತ ಗ್ಯಾಸ್‌, ಮನೆಗಳ ನಿರ್ಮಾಣ, ವಿದ್ಯುತ್ ಸಂಪರ್ಕ, ಜನಧನ್ ಖಾತೆ, ಆಯುಷ್ಮಾನ್ ಯೋಜನೆ ನೀಡಿದೆ.

ಕಾಂಗ್ರೆಸ್‌ ಸರ್ಕಾರ ದೇಶಕ್ಕೆ ಮೂರು ಕೊಡುಗೆಗಳನ್ನು ನೀಡಿದ್ದು, ಭ್ರಷ್ಟಾಚಾರ, ಭಯೋತ್ಪಾದನೆ, ಪರಿವಾರವಾದ ಕೊಟ್ಟಿದೆ. ಕಾಂಗ್ರೆಸ್ ಅವಧಿಯಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದವು. ಮೋದಿ ಆಡಳಿತದಲ್ಲಿ ದೇಶದಲ್ಲಿ ಒಂದೂ ಭಯೋತ್ಪಾದನೆ ಚಟುವಟಿಕೆ ನಡೆದಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಮಾತನಾಡಿದರು, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್, ಕುಮಾರ್, ಮಂಗಳೂರು ವಿಭಾಗ ಪ್ರಭಾರಿ ಉದಯ್‌ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಕುಮಾರ್ ಕುಯಿಲಾಡಿ, ಉಡುಪಿ ಶಾಸಕ ರಘುಪತಿ ಭಟ್‌, ಕಾಪು ಶಾಸಕ ಲಾಲಾಜಿ ಮೆಂಡನ್ ಇದ್ದರು.

ಸಿದ್ದರಾಮಯ್ಯ ಜೈಲಿಗೆ: ಕಟೀಲ್‌
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ತನಿಖೆಯಾದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶಾಶ್ವತವಾಗಿ ಜೈಲು ಸೇರಲಿದ್ದಾರೆ. ರಾಜ್ಯ ಸರ್ಕಾರ ಶೀಘ್ರ ತನಿಖೆಗೆ ಆದೇಶಿಸಲಿದೆ. ಸಿದ್ದರಾಮಯ್ಯಗೆ ಬಿಜೆಪಿ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬ ಅರಿವು ಇರಲಿ ಎಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

‘ಅಧಿಕಾರಕ್ಕಾಗಿ ಅರಾಜಕತೆ ಸೃಷ್ಟಿ’
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಭಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿದ್ದು, ಅಧಿಕಾರ ಮರಳಿ ಪಡೆಯಲು ರಾಜ್ಯದಲ್ಲಿ ಗೊಂದಲ, ಅರಾಜಕತೆ ಸೃಷ್ಟಿಸಿ ಕೋಮುಗಲಭೆಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಡಿ.ಜಿ ಹಳ್ಳಿ, ಕೆ.ಜೆ ಹಳ್ಳಿ ಗಲಭೆ ಕಾಂಗ್ರೆಸ್ ಪ್ರಾಯೋಜಿತ. ದಲಿತ ಶಾಸಕ ಅಖಂಡ ಮನೆಗೆ ಬೆಂಕಿ ಹಾಕಿದ ಆರೋಪಿ ಸಂಪತ್‌ರಾಜ್ ವಿರುದ್ಧ ಕ್ರಮ ಜರುಗಿಸಿಲ್ಲ. ಹುಬ್ಬಳ್ಳಿ, ಶಿವಮೊಗ್ಗ ಗಲಭೆಯ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ. ಒಂದು ವರ್ಗದ ತುಷ್ಟೀಕರಣ ಮಾಡುತ್ತಿರುವ ಸಿದ್ದರಾಮಯ್ಯ ಸಾರ್ವಜನಿಕವಾಗಿ ಹಿಂದೂಗಳ ಮತ ಬೇಡ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT