ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಅಂತ್ಯೋದಯ ಪರಿಕಲ್ಪನೆ ಅನುಷ್ಠಾನ: ನಳಿನ್ ಕುಮಾರ್ ಕಟೀಲ್

ಎಸ್‌ಸಿ, ಎಸ್‌ಟಿ ಸಮಾವೇಶ
Last Updated 10 ಮೇ 2022, 15:45 IST
ಅಕ್ಷರ ಗಾತ್ರ

ಉಡುಪಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಹಕ್ಕು ಮತ್ತು ನ್ಯಾಯ ಸಿಗಬೇಕು, ಸ್ವಾಭಿಮಾನಿಯಾಗಿ ಬದುಕಬೇಕು ಎಂಬ ದೀನ್‌ ದಯಾಳ್ ಉಪಾಧ್ಯಾಯರ ಅಂತ್ಯೋದಯ ಪರಿಕಲ್ಪನೆಯಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಅನುಷ್ಠಾನಗೊಳಿಸುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಉಡುಪಿ ನಗರ ಮತ್ತು ಗ್ರಾಮಾಂತರ ಬಿಜೆಪಿ ಜಂಟಿ ಆಶ್ರಯದಲ್ಲಿ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಉಜ್ವಲ ಯೋಜನೆಯಡಿ ಉಚಿತವಾಗಿ ಅಡುಗೆ ಅನಿಲ ವಿತರಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಪಂಗಡಗಳ ಮಕ್ಕಳಿಗೆ ಶಿಕ್ಷಣದಲ್ಲಿ ಸೌಲಭ್ಯ, ಆರ್ಥಿಕ ನೆರವು, ಉದ್ಯಮ ಶೀಲತೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ ಎಂದರು.

ಕರಾವಳಿ ಕರ್ನಾಕಟದ ಭಾಗದ ಕುದ್ಮುಲ್ ರಂಗರಾವ್ ಜೀವನದ ಸುಖ ಭೋಗಗಳನ್ನು ತ್ಯಜಿಸಿ ಪರಿಶಿಷ್ಟ ಹಾಗೂ ಪರಿಶಿಷ್ಟ ಜನಾಂಗದ ಉದ್ಧಾರಕ್ಕೆ ಜೀವನವನ್ನೇ ಮೀಸಲಿಟ್ಟವರು. ರಾಷ್ಟ್ರದಲ್ಲಿ ಮೊದಲ ಬಾರಿಗೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ ಜಿಲ್ಲೆಯ ವಿ.ಎಸ್‌.ಆಚಾರ್ಯರು ಉಡುಪಿ ನಗರದ ಅಭಿವೃದ್ಧಿಯ ಜತೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೂ ನೆರವು ನೀಡಿದವರು ಎಂದು ಸ್ಮರಿಸಿದರು.

ಅಂಬೇಡ್ಕರ್ ಅವರ ಶವಸಂಸ್ಕಾರಕ್ಕೂ ಜಾಗ ಕೊಡದ ಕಾಂಗ್ರೆಸ್ ಅಂಬೇಡ್ಕರ್ ಹೆಸರಿನಲ್ಲಿ ಚುನಾವಣೆಗಳನ್ನು ಎದುರಿಸುತ್ತಿದೆ. ಅಂಬೇಡ್ಕರ್ ಅವಮಾನದ ಶಾಪ ಕಾಂಗ್ರೆಸ್‌ಗೆ ತಟ್ಟಿದ್ದು ನಿರ್ನಾಮ ವಾಗುತ್ತಿದೆ ಎಂದರು.

ಹಿಂದೆ, ಗೋವು ಕಾಂಗ್ರೆಸ್‌ ಚಿಹ್ನೆಯಾಗಿತ್ತು. ಆದರೂ ಗೋಹತ್ಯೆ ನಿಷೇಧಕ್ಕೆ ಕಾಂಗ್ರೆಸ್‌ ಪ್ರಯತ್ನಿಸದ ಪರಿಣಾಮ ಗೋಶಾಪ ತಟ್ಟಿದೆ. ಗಾಂಧೀಜಿ ಹೆಸರಿನಲ್ಲಿ ರಾಮರಾಜ್ಯ, ಗ್ರಾಮ ಸ್ವರಾಜ್ಯ ಕಟ್ಟುವುದಾಗಿ ಸುಳ್ಳುಹೇಳಿದ ಕಾಂಗ್ರೆಸ್‌ಗೆ ಗಾಂಧೀಜಿ ಶಾಪವೂ ತಟ್ಟಿದೆ ಎಂದು ಲೇವಡಿ ಮಾಡಿದರು.

ಮೋದಿ ಸರ್ಕಾರ ಆದರ್ಶ ಗ್ರಾಮಗಳನ್ನು ಕಟ್ಟುವ ಮೂಲಕ ಗಾಂಧೀಜಿ ರಾಮರಾಜ್ಯದ ಕನಸಗಳನ್ನು ನನಸು ಮಾಡುತ್ತಿದೆ. ಎಲೆಮರೆಯ ಸಾಧಕರನ್ನು ಗುರುತಿಸಿ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡುತ್ತಿದೆ ಎಂದರು.

ಸಮಾವೇಶದಲ್ಲಿ ಪರಿಶಿಷ್ಟ ಜಾತಿಯವರು ಆರಾಧಿಸುವ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರರನ್ನು ಹಾಗೂ ಪರಿಶಿಷ್ಟ ಪಂಗಡದ ಹತ್ತರಕಟ್ಟೆ ಗುರಿಕಾರರನ್ನು, ಕೊರಗ ಸಮುದಾಯದ ಗುರಿಕಾರರನ್ನು ಅಭಿನಂದಿಸಲಾಯಿತು.

ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಉದಯ್‌ಕುಮಾರ್ ಶೆಟ್ಟಿ, ಮುಖಂಡ ಪ್ರಮೋದ್ ಮಧ್ವರಾಜ್, ರಾಜ್ಯ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಬಿಜೆಪಿ ನಗರ ಘಟಕದ ಅಧ್ಯಕ್ಷ ಮಹೇಶ್ ಠಾಕೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT