ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಬದಿ ವ್ಯಾಪಾರ: ಪ್ರಾಣಕ್ಕೆ ಸಂಚಕಾರ

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಬದಿಯ ವಾರದ ಸಂತೆ
Last Updated 4 ನವೆಂಬರ್ 2019, 10:13 IST
ಅಕ್ಷರ ಗಾತ್ರ

ಉಡುಪಿ: ಪ್ರತಿ ಭಾನುವಾರ ಸಂತೆಕಟ್ಟೆ ಜಂಕ್ಷನ್‌ ಬಳಿಯರಾಷ್ಟ್ರೀಯ ಹೆದ್ದಾರಿ 66 ಮಾರುಕಟ್ಟೆಯಾಗಿ ಬದಲಾಗುತ್ತದೆ. ಸೂರ್ಯ ಉದಯಕ್ಕೂ ಮುನ್ನವೇ ಹೊರ ಜಿಲ್ಲೆಗಳಿಂದ ತರಕಾರಿ ಮೂಟೆಗಳನ್ನು ಹೊತ್ತು ಬರುವ ವಾಹನಗಳು ಚತುಷ್ಪಥ ರಸ್ತೆಯನ್ನು ಅತಿಕ್ರಮಿಸಿಕೊಳ್ಳುತ್ತವೆ. ಹೆದ್ದಾರಿಯ ಇಕ್ಕೆಲಗಳು ವ್ಯಾಪಾರಿಗಳಿಂದ ತುಂಬಿ ಹೋಗುತ್ತವೆ. ಪರಿಣಾಮ ಹೆದ್ದಾರಿ ಸಂಚಾರ ದುಸ್ಥರವಾಗಿದ್ದು, ಅಪಘಾತಗಳು ಹೆಚ್ಚಾಗುತ್ತಿವೆ.

ಸರ್ವೀಸ್‌ ರಸ್ತೆಯೇ ಮಾರುಕಟ್ಟೆ: ಕಡಿಮೆ ಬೆಲೆ ಹಾಗೂ ತಾಜಾ ತರಕಾರಿ ಸಿಗುತ್ತದೆ ಎಂಬ ಕಾರಣಕ್ಕೆ ಗೋಪಾಲಪುರ ವಾರ್ಡ್‌ ವ್ಯಾಪ್ತಿಯ ಸಂತೆಕಟ್ಟೆಯ ವಾರದ ಸಂತೆ ಹೆಚ್ಚು ಪ್ರಸಿದ್ಧಿ. ಉಡುಪಿ, ಬ್ರಹ್ಮಾವರ ಸೇರಿದಂತೆ ಹಲವು ಕಡೆಗಳಿಂದ ಇಲ್ಲಿಗೆ ಗ್ರಾಹಕರು ಬರುತ್ತಾರೆ. ಚಿಲ್ಲರೆ ವ್ಯಾಪಾರಿಗಳೂ ಇಲ್ಲಿಯೇ ಖರೀದಿಸುತ್ತಾರೆ. ವಾರದ ಸಂತೆಯ ಹೆದ್ದಾರಿ ಕಾಣದಷ್ಟು ಜನಜಂಗುಳಿ ಇರುತ್ತದೆ. ತರಕಾರಿ ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಇಲ್ಲವಾದ್ದರಿಂದ ವ್ಯಾಪಾರಿಗಳು ಹೆದ್ದಾರಿ ಬದಿಯ ಸರ್ವೀಸ್‌ ರಸ್ತೆಯಲ್ಲಿಯೇ ತರಕಾರಿ, ಹೂ, ಹಣ್ಣುಗಳನ್ನು ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ. ‌

ವಾರದ ಸಂತೆಯ ದಿನ ಅರ್ಧ ಕಿ.ಮೀ ಉದ್ದದವರೆಗಿನ ಸರ್ವೀಸ್‌ ರಸ್ತೆ ಮಾರುಕಟ್ಟೆಯಾಗಿ ವಿಸ್ತಾರಗೊಳ್ಳುತ್ತದೆ. ಪರಿಣಾಮ ಸೇವಾ ರಸ್ತೆಯಲ್ಲಿ ಸಂಚರಿಸಬೇಕಾದ ವಾಹನಗಳು ಅನಿವಾರ್ಯವಾಗಿ ಹೆದ್ದಾರಿ ಪ್ರವೇಶಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಾಮಾನ್ಯವಾಗಿವೆ.

ರಸ್ತೆ ಮೇಲೆ ಪಾರ್ಕಿಂಗ್‌: ಚಿಕ್ಕಮಗಳೂರು, ಬೆಳಗಾವಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಂದ ತರಕಾರಿ ತರುವ ವಾಹನಗಳು ಹೆದ್ದಾರಿಯಲ್ಲಿ ಮಾಲು ಇಳಿಸಿ ಅಲ್ಲಿಯೇ ನಿಲುಗಡೆಯಾಗುತ್ತವೆ. ತರಕಾರಿ ಖರೀದಿಗೆ ಬರುವ ಗ್ರಾಹಕರೂ ಕಾರು, ಬೈಕ್‌ಗಳನ್ನು ರಸ್ತೆ ಬದಿಯೇ ನಿಲ್ಲಿಸುತ್ತಾರೆ. ಇದರಿಂದ ಹೆದ್ದಾರಿಯ ಅರ್ಧಭಾಗ ವಾಹನಗಳಿಂದ ತುಂಬಿಹೋಗಿ, ತೀವ್ರ ಸಮಸ್ಯೆಯಾಗುತ್ತದೆ.‌

ಸಂತೆಕಟ್ಟೆ ಜಂಕ್ಷನ್‌ ಕೂಡು ರಸ್ತೆಗಳ ಸಂಗಮವಾಗಿರುವುದರಿಂದ ಕಲ್ಯಾಣಪುರ, ಕೊಡವೂರು, ಹೂಡೆ, ಮಲ್ಪೆ ಕಡೆಗಳಿಂದ ಬರುವ ವಾಹನಗಳು ಹೆದ್ದಾರಿ ದಾಟಿಯೇ ಸಾಗಬೇಕು. ಮೇಲ್ಸೇತುವೆ ವ್ಯವಸ್ಥೆ ಇಲ್ಲವಾದ್ದರಿಂದ ಮಂಗಳೂರು ಹಾಗೂ ಕುಂದಾಪುರದ ಕಡೆಗೆ ಸಾಗುವ ವಾಹನಗಳು ಜಂಕ್ಷನ್‌ ಹಾದುಹೋಗಬೇಕು. ಇದರ ಮಧ್ಯೆ ಇಲ್ಲಿಯೇ ವಾರದ ಸಂತೆ ಕೂಡ ನಡೆಯುತ್ತಿರುವುದರಿಂದ ಸಮಸ್ಯೆ ಗಂಭೀರವಾಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ದಯಾನಂದ್.

ಹೆಚ್ಚು ಜನದಟ್ಟಣೆಯ ಜಂಕ್ಷನ್‌ ಆಗಿದ್ದರೂ ಅಗತ್ಯ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಿಲ್ಲ. ಒಬ್ಬರೇ ಹೋಂ ಗಾರ್ಡ್‌ ಇದ್ದು, ಅವರ ಸೂಚನೆಯನ್ನು ಯಾರೂ ಪಾಲಿಸುವುದಿಲ್ಲ. ಕೆಲವೊಮ್ಮೆ ಭಾರಿ ವಾಹನಗಳು ರಸ್ತೆಯ ಮಧ್ಯೆಯೇ ಸಿಲುಕಿಕೊಂಡು ಟ್ರಾಫಿಕ್ ಜಾಮ್ ಆಗುತ್ತದೆ. ದೂರದ ಊರುಗಳಿಗೆ ಹೋಗಬೇಕಾದ ವಾಹನಗಳು ಹೆದ್ದಾರಿ ಮಧ್ಯೆ ಸಾಲುಗಟ್ಟಿ ನಿಲ್ಲುತ್ತವೆ ಎನ್ನುತ್ತಾರೆ ಸ್ಥಳೀಯರಾದ ಜಾನ್ ಪ್ಯಾಟ್ರಿಕ್‌ ಲೂಯಿಸ್‌.

ರಸ್ತೆ ದಾಟುವಾಗ ಅಪಘಾತ: ಹೆದ್ದಾರಿಯಲ್ಲಿ ವೇಗ ನಿಯಂತ್ರಕಗಳು ಇಲ್ಲವಾದ್ದರಿಂದ ವಾಹನಗಳು ವೇಗವಾಗಿ ಚಲಿಸುತ್ತವೆ. ಪಾದಚಾರಿಗಳು ಎರಡೂ ಕಡೆಯಿಂದ ನುಗ್ಗುವ ವಾಹನಗಳನ್ನು ನೋಡಿಕೊಂಡು ರಸ್ತೆ ದಾಟಬೇಕು. ಹೀಗೆ ದಾಟುವಾಗ ಹಲವು ಸಲ ಅಪಘಾತಗಳಾಗಿವೆ. ಇಷ್ಟಾದರೂ ಸಾರ್ವಜನಿಕರ ಸುರಕ್ಷತೆಗೆ ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

100 ಮೀಟರ್ ದೂರದಲ್ಲಿ ನೂತನ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದ್ದರೂ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರಿಸಿಲ್ಲ. ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳು ಕಳೆದರೂ ಉದ್ಘಾಟನೆಯಾಗಿಲ್ಲ ಎನ್ನುತ್ತಾರೆ ಸ್ಥಳೀಯರಾದ ರಾಜೇಶ್‌.

ನೂತನ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿದೆ. 50 ರಿಂದ 60 ವ್ಯಾಪಾರಿಗಳು ಕೂರುವಷ್ಟು ಜಾಗ ಇದೆ. ಇಲ್ಲಿ 200ಕ್ಕಿಂತ ಹೆಚ್ಚು ವ್ಯಾಪಾರಿಗಳಿದ್ದು, ಅಲ್ಲಿ ಜಾಗ ಸಿಗದವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸುತ್ತಾರೆ ಜಬ್ಬೀರ್‌.

100ಕ್ಕೂ ಹೆಚ್ಚು ಸರಕು ಸಾಗಣೆ ವಾಹನಗಳು ಮಾರುಕಟ್ಟೆಗೆ ಬರುತ್ತವೆ. ಜತೆಗೆ ಸಾರ್ವಜನಿಕರು ಬೈಕ್‌ ಹಾಗೂ ಕಾರುಗಳನ್ನು ತರುತ್ತಾರೆ. ಹೊಸ ಮಾರುಕಟ್ಟೆಯಲ್ಲಿ ವಾಹನಗಳನ್ನು ನಿಲ್ಲಿಸಲು ಜಾಗ ಇಲ್ಲ ಎಂದು ಸಮಸ್ಯೆಯನ್ನು ಬಿಚ್ಚಿಟ್ಟರು ರಜಾಕ್‌.

ವಿಶಾಲವಾದ ಮಾರುಕಟ್ಟೆ ನಿರ್ಮಿಸಿ, ಎಲ್ಲರಿಗೂ ವ್ಯಾಪಾರ ಮಾಡಲು ಅವಕಾಶ ಕೊಟ್ಟರೆ ಖಂಡಿತ ಹೋಗುತ್ತೇವೆ. ಹೆದ್ದಾರಿಯಲ್ಲಿ ವ್ಯಾಪಾರ ಅಪಾಯಕಾರಿ ಎಂಬುದು ಗೊತ್ತಿದ್ದರೂ, ಬೇರೆ ದಾರಿ ಇಲ್ಲದೆ ಮಾಡುತ್ತಿದ್ದೇವೆ ಎನ್ನುತ್ತಾರೆ ಮಹಿಳೆ ಸುಜಾತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT