ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 2ರಿಂದ ನ್ಯಾಷನಲ್‌ ರ‍್ಯಾಂಕಿಂಗ್ ಟೂರ್ನಿ

2ದಿನಗಳ ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ಗೆ ಚಾಲನೆ
Last Updated 25 ಮೇ 2019, 14:08 IST
ಅಕ್ಷರ ಗಾತ್ರ

ಉಡುಪಿ: ನಿರಂತರ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಜಿಲ್ಲೆಯ ಕ್ರೀಡಾಪುಟುಗಳಿಗೆ ನೆರವು ನೀಡಬೇಕು. ಕ್ರೀಡಾಕೂಟಗಳ ಆಯೋಜನೆ ಹೊಣೆಯನ್ನು ಸಂಘಟನೆಗಳು ಹೊತ್ತುಕೊಳ್ಳಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್‌ ಸಲಹೆ ನೀಡಿದರು.

ಬ್ಯಾಡ್ಮಿಂಟನ್‌ ಸ್ಪೋರ್ಟ್ಸ್‌ ಕ್ಲಬ್‌ ಉಡುಪಿ–ಮಣಿಪಾಲ ಹಾಗೂ ಜಿಲ್ಲಾ ಬ್ಯಾಡ್ಮಿಂಟನ್‌ ಅಸೋಸಿಯೇಷನ್ ಆಶ್ರಯದಲ್ಲಿ ಶನಿವಾರಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾದ 18ನೇ ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿ ಮಾತನಾಡಿದರು.

2012ರಿಂದ ಜಿಲ್ಲಾ ಕ್ರೀಡಾ ಸಮಿತಿ ಸಹಯೋಗದಲ್ಲಿ ಜಿಲ್ಲಾ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಸಂಸ್ಥೆಯು ಸ್ಥಳೀಯ ಆಟಗಾರರಿಗೆ ತರಬೇತಿ ನೀಡುತ್ತಿದೆ. ಇಲ್ಲಿ ತರಬೇತಿ ಪಡೆದ ಜಿಲ್ಲೆಯ ಸಮಂತ್ ಕಿದಿಯೂರು ರಾಜ್ಯದ ನಂಬರ್ ಒನ್ ಆಟಗಾರನಾಗಿರುವುದು ಹೆಮ್ಮೆಯ ವಿಚಾರ ಎಂದರು.

ಜಿಲ್ಲೆಯಲ್ಲಿ ನಿಯಮಿತವಾಗಿ ಟೂರ್ನಿಗಳು ನಡೆಯದ ಪರಿಣಾಮ, ಇಲ್ಲಿನ ಪ್ರತಿಭಾನ್ವಿತ ಕ್ರೀಡಾಪುಟಗಳು ಬೇರೆಡೆಗೆ ವಲಸೆ ಹೋಗಬೇಕಾಗಿದೆ. ಬೆಂಗಳೂರು, ಮೈಸೂರಿನಲ್ಲಿ ಹೆಚ್ಚಾಗಿ ನಡೆಯುವ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಿರಂತರವಾಗಿ ರಾಜ್ಯಮಟ್ಟದ, ರಾಷ್ಟ್ರಮಟ್ಟದ ರ‍್ಯಾಂಕಿಂಗ್ ಟೂರ್ನಿಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷ ಅಶೋಕ್ ಪಣಿಯಾಡಿ ನೇತೃತ್ವದಲ್ಲಿ ಉಡುಪಿ ಹಾಗೂ ಮಣಿಪಾಲ ಬ್ಯಾಡ್ಮಿಂಟನ್ ಸ್ಫೋರ್ಟ್ಸ್‌ ಕ್ಲಬ್‌ ಕಳೆದ 18 ವರ್ಷಗಳಿಂದ ಟೂರ್ನಿಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಸಂಸ್ಥೆಯ ಕಾರ್ಯ ನಿರಂತರವಾಗಿರಲಿ. ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡುವ ಮೂಲಕ ಕ್ರೀಡಾ ಚಟುವಟಿಕೆಗಳ ಬೆಳವಣಿಗೆಗೆ ಪ್ರೋತ್ಸಾಹಿಸಬೇಕಿದೆ ಎಂದರು.

ಜಿಲ್ಲಾ ಒಳಾಂಗಣ ಕ್ರೀಡಾಂಗಣ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿಂದ ಕೂಡಿದ್ದು, ರಾಷ್ಟ್ರಮಟ್ಟದ ಟೂರ್ನಿ ಆಯೋಜಿಸಲು ಸೂಕ್ತವಾಗಿದೆ. ಹಿಂದೆ, ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಅವರು ಕ್ರೀಡಾಂಗಣಕ್ಕೆ ಹವಾನಿಯಂತ್ರಿತ ವ್ಯವಸ್ಥೆ ಹಾಕಿಸಲು ಶ್ರಮಿಸಿದ್ದರು. ಈಗ ಕ್ರೀಡಾಂಗಣ ಉಪಯೋಗವಾಗುತ್ತಿದೆ ಎಂದರು.

ಕ್ರೀಡಾ ಅಂಗಳಗಳ ಜತೆಗೆ, ನುರಿತ ತರಬೇತುದಾರರಿದ್ದರೆ ಅತ್ಯುತ್ತಮ ಕ್ರೀಡಾಪಟುಗಳನ್ನು ತಯಾರು ಮಾಡಬಹುದು. ನೀತಿ ಸಂಹಿತೆ ಮುಗಿದ ಬಳಿಕ ಅಧಿಕಾರಿಗಳ ಸಭೆ ನಡೆಸಿ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿ ಚರ್ಚಿಸಲಾಗುವುದು. ಕ್ರೀಡಾಪುಟಗಳ ನೆರವಿಗೆಕೋಚಿಂಗ್ ಕ್ಯಾಂಪ್‌ಗಳನ್ನು ಆಯೋಜಿಸಲಾಗುವುದು ಎಂದರು.

ಪ್ರತಿಭಾವಂತ ಕ್ರೀಡಾಪಟುಗಳಿಗೆ ಕ್ರೀಡಾ ವಸತಿ ನಿಲಯದ ಸೌಲಭ್ಯ ಹಾಗೂ ಉತ್ತಮ ತರಬೇತಿ ನೀಡಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ನೆರವು ನೀಡಲಾಗುವುದು ಎಂದರು.

ಲಯನ್ಸ್‌ ಜಿಲ್ಲಾ ಗವರ್ನರ್ ತಲ್ಲೂರು ಶಿವರಾಮಶೆಟ್ಟಿ, ಉಡುಪಿ ಮಣಿಪಾಲ ಬ್ಯಾಡ್ಮಿಂಟನ್‌ ಸ್ಫೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ಅಶೋಕ್ ಪಣಿಯಾಡಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಸಿಂಡಿಕೇಟ್ ಬ್ಯಾಂಕ್ ಸ್ಟಾಫ್‌ ಕೋಆಪರೇಟಿವ್‌ ಸೊಸೈಟಿ ಅಧ್ಯಕ್ಷ ಕೆ.ಬಾಲಗಂಗಾಧರ್ ರಾವ್‌, ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಸೊಹೈಲ್ ಅಮೀನ್, ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ, ಹರೀಶ್ ಶೆಟ್ಟಿ, ಟೆರೆನ್ಸ್ ಸುವಾರಿಸ್, ಕೋಚ್ ವಿವೇಕ್ ಜಾನ್ಸ್‌, ಶಶಿಧರ್ ಶೆಟ್ಟಿ ಅವರೂ ಇದ್ದರು.

ನ್ಯಾಷನಲ್‌ ರ‍್ಯಾಂಕಿಂಗ್ ಟೂರ್ನಿ

ಜುಲೈ 2ರಿಂದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ 13ವರ್ಷದೊಳಗಿನವರ ಸಬ್‌ ಜೂನಿಯರ್ ನ್ಯಾಷನಲ್‌ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾನ್ವಿತ ಆಟಗಾರರಿಗೆ ರಾಷ್ಟ್ರಮಟ್ಟದ ಆಟಗಾರರೊಂದಿಗೆ ಆಡಲು ಅವಕಾಶವಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ರಘುಪತಿ ಭಟ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT