ಕಡಲ ಮಕ್ಕಳ ಮೇಲೆ ಪ್ರಕೃತಿ ಮುನಿಸು

7
ಹವಾಮಾನ ವೈಪರೀತ್ಯ: ಪೂರ್ಣಪ್ರಮಾಣದಲ್ಲಿ ಆರಂಭವಾಗದ ಮೀನುಗಾರಿಕೆ

ಕಡಲ ಮಕ್ಕಳ ಮೇಲೆ ಪ್ರಕೃತಿ ಮುನಿಸು

Published:
Updated:
Deccan Herald

ಉಡುಪಿ: ಹವಾಮಾನ ವೈಪರೀತ್ಯದಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಸಮುದ್ರಕ್ಕಿಳಿಯಲು ಜಿಲ್ಲೆಯ ಮೀನುಗಾರರು ಹಿಂದೇಟು ಹಾಕುತ್ತಿದ್ದಾರೆ. ಯಾಂತ್ರೀಕೃತ ಮೀನುಗಾರಿಕೆ ಮೇಲಿನ ನಿಷೇಧ ತೆರವಾಗಿ 14 ದಿನಗಳಾದರೂ ಪೂರ್ಣಪ್ರಮಾಣದಲ್ಲಿ ಬೋಟ್‌ಗಳು ಸಮುದ್ರಕ್ಕಿಳಿದಿಲ್ಲ. ಪ್ರಕೃತಿಯ ಮುನಿಸು ಕಡಲಮಕ್ಕಳನ್ನು ಸಂಕಷ್ಟಕ್ಕೆ ದೂಡಿದೆ.

‘ಪ್ರತಿವರ್ಷ ಮೀನುಗಾರರಿಗೆ ಸಮಸ್ಯೆಗಳು ತಪ್ಪಿದ್ದಲ್ಲ. ಡೀಸೆಲ್‌ ಬೆಲೆ ಹಾಗೂ ಮಂಜುಗಡ್ಡೆ ಬೆಲೆ ಏರಿಕೆಯ ಹೊಡೆತ ಒಂದೆಡೆಯಾದರೆ, ಹವಾಮಾನ ವೈಪರೀತ್ಯ ಮತ್ತೊಂದೆಡೆ ಕಾಡುತ್ತದೆ. ಈ ಬಾರಿ ಕಡಲು ಪ್ರಕ್ಷುಬ್ಧಗೊಂಡಿರುವುದನ್ನು ನೋಡಿದರೆ ನಾಲ್ಕೈದು ದಿನ ಸಮುದ್ರಕ್ಕಿಳಿಯಲು ಸಾಧ್ಯವಾಗುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಮಲ್ಪೆ ಮೀನುಗಾರಿಕಾ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌.

ಕಳೆದ ವರ್ಷ ಆ.9ಕ್ಕೆ ಮೀನುಗಾರಿಕೆ ಆರಂಭವಾಗಿತ್ತು. ತಡವಾದರೂ ಕಡಲು ಶಾಂತವಾಗಿದ್ದರಿಂದ ಮೀನುಗಾರಿಕೆಗೆ ಅಡ್ಡಿಯಾಗಿರಲಿಲ್ಲ. ಈ ವೇಳೆಗೆ ಸುಮಾರು ಒಂದು ಲಕ್ಷ ಟನ್‌ನಷ್ಟು ರಾಣಿ ಮೀನು ಸಿಕ್ಕಿತ್ತು. ಈ ಬಾರಿ ಒಂದು ದಿನ ಮುಂಚಿತವಾಗಿ ಮೀನುಗಾರಿಕೆ ಆರಂಬಿಸಿದ್ದರೂ ಕಡಲಿನ ರೌದ್ರತೆಯಿಂದಾಗಿ ನಿರೀಕ್ಷಿತ ಮೀನು ಸಿಕ್ಕಿಲ್ಲ ಎನ್ನುತ್ತಾರೆ ಕುಂದರ್‌.

ಮಲ್ಪೆ ಬಂದರಿನಲ್ಲಿ ಈ ಬಾರಿ ಶೇ 90ರಷ್ಟು ಯಾಂತ್ರೀಕೃತ ಬೋಟ್‌ಗಳು ಇನ್ನೂ ಸಮುದ್ರಕ್ಕಿಳಿದಿಲ್ಲ. ಭಾರಿಗಾತ್ರದ ಅಲೆಗಳು ಎದ್ದಿರುವುದರಿಂದ ಮೀನುಗಾರಿಕೆಗೆ ತೆರಳಿದ್ದ ಬೆರಳೆಣಿಕೆಯ ಬೋಟ್‌ಗಳೂ ಬಂದರಿಗೆ ವಾಪಾಸಾಗುತ್ತಿವೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿಕೊಂಡು ಕಡಲಿಗಿಳಿದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ಅವರು.

ಈ ವರ್ಷ ನಿಷೇಧದ ಅವಧಿಯಲ್ಲಿ ಭಾರಿ ಮಳೆ ಸುರಿದಿತ್ತು. ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಯೂ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ಜೂನ್, ಜುಲೈನಲ್ಲಿ ವಾರವೂ ಕಡಲಿಗಿಳಿದಿರಲಿಲ್ಲ ಎನ್ನುತ್ತಾರೆ ಮೀನುಗಾರ ಪ್ರಶಾಂತ್‌ ಪೂಜಾರಿ.

ದೊಡ್ಡ ಬೋಟ್‌ಗಳು ಕಡಲಿಳಿದರೆ ಕನಿಷ್ಠ 4 ರಿಂದ 6 ಸಾವಿರ ಲೀಟರ್‌ ಡೀಸೆಲ್‌ ಕೊಂಡೊಯ್ಯಬೇಕಾಗುತ್ತದೆ. ಇಂಧನಕ್ಕೆ ಬರೋಬ್ಬರಿ ₹ 3 ಲಕ್ಷ ಬೇಕಾಗುತ್ತದೆ. ಮಂಜುಗಡ್ಡೆ, ಬಾಡಿಗೆ, ಕೂಲಿ ಸೇರಿದರೆ ₹ 5 ಲಕ್ಷ ಖರ್ಚಾಗುತ್ತದೆ. ಈ ಬಾರಿ ಸಮುದ್ರಕ್ಕಿಳಿದಿರುವ ಬೋಟ್‌ಗಳು ಮೀನುಗಾರಿಕೆಗೆ ಮಾಡಲಾಗದೆ ವಾಪಾಸಾಗುತ್ತಿರುವುದರಿಂದ ದೊಡ್ಡ ನಷ್ಟವಾಗಿದೆ ಎನ್ನುತ್ತಾರೆ ಸತೀಶ್ ಕುಂದರ್.

ಕಳೆದ ವರ್ಷವೂ ಮೀನುಗಾರರು ನಷ್ಟ ಅನುಭವಿಸಿದ್ದರು. ಬ್ಯಾಂಕ್‌ ಸಾಲ ಕೂಡ ಕಟ್ಟಲಾಗಿರಲಿಲ್ಲ. ನಿರೀಕ್ಷಿತ ಮೀನಿನ ಇಳುವರಿಯೂ ಸಿಕ್ಕಿರಲಿಲ್ಲ. ಈ ಬಾರಿ ನಷ್ಟವಾದರೆ, ಮೀನುಗಾರರು ದೊಡ್ಡ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅವರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !