ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಮಲ್ಪೆಯಲ್ಲಿ ಮತ್ತೆ ತೇಲುವ ಸೇತುವೆ!

ರಾಜ್ಯದ ಮೊದಲ ತೇಲುವ ಸೇತುವೆ ಶೀಘ್ರ ಪ್ರವಾಸಿಗರಿಗೆ ಮುಕ್ತ
Last Updated 16 ಡಿಸೆಂಬರ್ 2022, 5:08 IST
ಅಕ್ಷರ ಗಾತ್ರ

ಉಡುಪಿ: ಮಲ್ಪೆಯ ಕಡಲ ಕಿನಾರೆಯಲ್ಲಿ ಮತ್ತೆ ತೇಲುವ ಸೇತುವೆ (ಫ್ಲೋಟಿಂಗ್ ಬ್ರಿಡ್ಜ್‌) ನಿರ್ಮಾಣವಾಗುತ್ತಿದ್ದು ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಮುಕ್ತವಾಗಲಿದೆ.

ಕಳೆದ ಬಾರಿಯ ಅವಘಡ ಮತ್ತೊಮ್ಮೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಈ ಬಾರಿ ಹೊರ ರಾಜ್ಯ ಹಾಗೂ ರಾಜ್ಯದ ಕಡಲ ತಜ್ಞರ ತಂಡಗಳು ತೇಲುವ ಸೇತುವೆಯ ಸಾಮರ್ಥ್ಯ, ಕಾರ್ಯಕ್ಷಮತೆಯನ್ನು ಪರೀಕ್ಷೆಗೊಳಪಡಿಸಿ ದೃಢೀಕರಿಸಿವೆ.

ತೇಲುವ ಸೇತುವೆ ಚಂಡಮಾರುತದಂತಹ ಪ್ರತಿಕೂಲ ವಾತಾವರಣವನ್ನು ತಡೆದುಕೊಳ್ಳಬಹುದೇ? ದೈತ್ಯ ಅಲೆಗಳು ಅಪ್ಪಳಿಸಿದರೆ ತಾಳಿಕೊಳ್ಳುವುದೇ ಎಂಬುದನ್ನು ವೈಜ್ಞಾನಿಕವಾಗಿ ಪರೀಕ್ಷೆ ಗೊಳಪಡಿಸಿದೆ.

ಜತೆಗೆ, ಅಲೆಗಳ ಏರಿಳಿತ, ಪ್ರತಿಕೂಲ ವಾತಾವರಣ ಹಾಗೂ ಸೇತುವೆ ಅಳವಡಿಸುವ ಜಾಗವನ್ನು ಪರಿಶೀಲಿಸಿರುವ ತಂಡ ಶೀಘ್ರ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕ ಬಳಿಕ ತೇಲುವೆ ಸೇತುವೆ ಪ್ರವಾಸಿಗರ ಬಳಕೆಗೆ ಲಭ್ಯವಾಗಲಿದೆ.

ಗುಣಮಟ್ಟದ ಸೇತುವೆ:

ಕಳೆದ ಮೇನಲ್ಲಿ ಅಳವಡಿಸಲಾಗಿದ್ದ ತೇಲುವ ಸೇತುವೆ ಹಾಳಾಗಲು ಹಲವು ಕಾರಣಗಳಿವೆ. ಸೇತುವೆ ಅಳವಡಿಸಿದ ಕೂಡಲೇ ಚಂಡಮಾರುತ ಬೀಸಿದ್ದರಿಂದ ದೈತ್ಯ ಅಲೆಗಳು ಅಪ್ಪಳಿಸಿ ಸೇತುವೆಗೆ ಹಾನಿಯಾಯಿತು. ಸೇತುವೆಗೆ ಅಳವಡಿಸಿದ್ದ ಫಾಂಟೂನ್ಸ್‌ಗಳು ಕಿತ್ತುಬಂದಿದ್ದವು.

ಕಳೆದ ಬಾರಿಯ ತಪ್ಪು ಮತ್ತೊಮ್ಮೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಅತ್ಯುತ್ತಮ ಗುಣಮಟ್ಟದ ತೇಲುವ ಸೇತುವೆಯನ್ನು ಹೊರಗಗಿನಿಂದ ಆಮದು ಮಾಡಿಕೊಂಡು ಅಳವಡಿಸಲಾಗಿದೆ ಎನ್ನುತ್ತಾರೆ ಮಲ್ಪೆ ಬೀಚ್‌ನ ಕಾರ್ಯ ನಿರ್ವಾಹಕ ಸುದೇಶ್ ಶೆಟ್ಟಿ.

ಗರಿಷ್ಠ ಸುರಕ್ಷತೆ:

ಸೇತುವೆ ಅಳವಡಿಸಿರುವ ಜಾಗದಲ್ಲಿ 2.5 ಮೀಟರ್‌ ಆಳ ಮಾತ್ರ ಇದ್ದು, ಪ್ರಾಣಾಪಾಯವಾಗುವ ಸಾಧ್ಯತೆಗಳು ತೀರಾ ಕಡಿಮೆ. ಆದರೂ ಪ್ರವಾಸಿಗರ ಸುರಕ್ಷತೆಗೆ ಗರಿಷ್ಠ ಒತ್ತು ನೀಡಲಾಗಿದೆ. 20 ಮಂದಿ ಲೈಫ್‌ಗಾರ್ಡ್‌ಗಳನ್ನು ನಿಯೋಜಿಸಲಾಗುವುದು. ಸೇತುವೆ ಹತ್ತುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್ ಜಾಕೆಟ್‌ ಧರಿಸಬೇಕು.

ಸೇತುವೆಯ ಮೇಲೆ ಏಕಕಾಲಕ್ಕೆ 100ಕ್ಕೂ ಹೆಚ್ಚು ಮಂದಿ ನಡೆಯಬಹುದು. ಅಲೆಗಳ ಏರಿಳಿತಕ್ಕೆ ತಕ್ಕಂತೆ ಸೇತುವೆ ತೇಲಾಡುವಾಗ ರೋಚಕ ಅನುಭವ ದೊರೆಯಲಿದೆ. ಸೇತುವೆಯ ಕೊನೆಯಲ್ಲಿ ನಿಂತು ಸಮುದ್ರದ ಅಲೆಗಳ ಸೌಂದರ್ಯವನ್ನು ಹತ್ತಿರದಿಂದ ಆಸ್ವಾದಿಸಬಹುದು. ಅಲೆಗಳೊಟ್ಟಿಗೆ ಹೆಜ್ಜೆ ಹಾಕಬಹುದು ಎನ್ನುತ್ತಾರೆ ಸುದೇಶ್‌ ಶೆಟ್ಟಿ.

‘ರಾಜ್ಯದ ಮೊದಲ ತೇಲುವ ಸೇತುವೆ’

ಮಲ್ಪೆಯ ತೇಲುವ ಸೇತುವೆಯು ಸಮುದ್ರ ತೀರದಲ್ಲಿ ಅಳವಡಿಸಿರುವ ರಾಜ್ಯದ ಮೊದಲ ತೇಲುವ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಲಿದೆ. ಪ್ರವಾಸಿಗರಿಗೆ ತೇಲುವ ಸೇತುವೆ ನಿಜಕ್ಕೂ ಹೊಸ ಅನುಭವ ನೀಡಲಿದೆ.

- ಸುದೇಶ್ ಶೆಟ್ಟಿ, ಬೀಚ್ ನಿರ್ವಾಹಕ

****

ಸಾಮಾಜಿಕ ಜಾಲತಾಣದಲ್ಲಿ ವೈರಲ್‌

2022, ಮೇ 6ರಂದು ಮಲ್ಪೆಯಲ್ಲಿ ರಾಜ್ಯದ ಮೊದಲ ತೇಲುವ ಸೇತುವೆಯನ್ನು ನಿರ್ಮಿಸಲಾಗಿತ್ತು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರಸಭೆ ಸಹಕಾರದಲ್ಲಿ ಮಲ್ಪೆ ಬೀಚ್‌ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯ ಸಂಘಟನೆಗಳು ಖಾಸಗಿಯಾಗಿ ₹ 80 ಲಕ್ಷ ವೆಚ್ಚದಲ್ಲಿ ತೇಲುವ ಸೇತುವೆ ನಿರ್ಮಿಸಿದ್ದವು. ಮೂರೇ ದಿನಗಳಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಸೇತುವೆ ಹಾಳಾಗಿತ್ತು. ಸೇತುವೆ ಹಾಳಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT