ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರೂರಿನಲ್ಲಿ ಶುಲ್ಕ ಸಂಗ್ರಹಕ್ಕೆ ಕ್ಷಣ ಗಣನೆ

ಕುಂದಾಪುರ-ಗೋವಾ ಚತುಷ್ಪಥ ಹೆದ್ದಾರಿ
Last Updated 22 ಅಕ್ಟೋಬರ್ 2019, 11:13 IST
ಅಕ್ಷರ ಗಾತ್ರ

ಬೈಂದೂರು: ಆರು ವರ್ಷಗಳ ಹಿಂದೆ ಆರಂಭವಾದ ಕುಂದಾಪುರ-ಗೋವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕುಂದಾಪುರ-ಶಿರೂರು ಭಾಗ ಮುಕ್ತಾಯ ಹಂತ ತಲಪಿದೆ.

ಶಿರೂರಿನಲ್ಲಿ ನಿರ್ಮಿಸಿರುವ ಟೋಲ್‌ಗೇಟ್‌ನಲ್ಲಿ ಶುಲ್ಕ ಸಂಗ್ರಹಕ್ಕೆ ಕ್ಷಣಗಣನೆ ಆರಂಭವಾಗಿದೆ.ಈ ಬೆಳವಣಿಗೆ ಶಿರೂರು ಪರಿಸರದಲ್ಲಿ ಸಂಚಲನ ಮೂಡಿಸಿದೆ. ವಿವಿಧ ಕಾರಣಗಳಿಗಾಗಿ ಶಿರೂರಿನಲ್ಲಿ ಸಾರ್ವಜನಿಕರ ಅಸಮಾಧಾನದ ಗಟ್ಟಿಧ್ವನಿ ಕೇಳಿಬರುತ್ತಿದೆ.

ಉಡುಪಿ ಜಿಲ್ಲೆಯ ಉತ್ತರ ತುದಿಯ ಶಿರೂರು ಭೌಗೋಳಿಕವಾಗಿ, ಜನಸಂಖ್ಯೆ ಮತ್ತು ವಾಣಿಜ್ಯ ವ್ಯವಹಾರ ಸೇರಿದಂತೆ ವಿವಿಧ ಚಟುವಟಿಕೆಗಳ ದೃಷ್ಟಿಯಿಂದ ದೊಡ್ಡ ಗ್ರಾಮ. ಗ್ರಾಮದೊಳಗಿನ ಹೆದ್ದಾರಿಯ ಉದ್ದ 6 ಕಿ.ಮೀ. ವಾಣಿಜ್ಯ ಮಳಿಗೆಗಳು, ಬ್ಯಾಂಕ್‌ಗಳು, ಶಾಲೆಗಳು, ಸಂಘ ಸಂಸ್ಥೆಗಳು ಇಲ್ಲಿವೆ. ಇದೇ ಕಾರಣದಿಂದ 10 ಕಿ.ಮೀ. ಅಂತರದಲ್ಲಿರುವ ಭಟ್ಕಳದೊಂದಿಗೆ ಸಂಪರ್ಕ. ಹೀಗಾಗಿ ಈ ವ್ಯಾಪ್ತಿಯಲ್ಲಿರುವ ಹತ್ತಾರು ಹಳ್ಳಿಗಳ ಜನರ ದೈನಂದಿನ ಒಳ, ಹೊರ ಹರಿವು ನಿರಂತರ ನಡೆಯುತ್ತದೆ. ಇವರಲ್ಲಿ ಸ್ವಂತ ವಾಹನ ಬಳಸುವವರು ಶುಲ್ಕ ಪಾವತಿಯ ಬಿಸಿ ಎದುರಿಸಲಿದ್ದಾರೆ.

ಹೋರಾಟಕ್ಕೆ ಚಿಂತನೆ: ಸಾಸ್ತಾನ, ಹೆಜಮಾಡಿ, ಸುರತ್ಕಲ್‌ಗಳಲ್ಲಿ ಸ್ಥಳೀಯರಿಂದ ಟೋಲ್ ಸಂಗ್ರಹ ವಿರುದ್ಧ ನಡೆದ ಹೋರಾಟದ ಅರಿವು ಇರುವ ಸ್ಥಳೀಯ ಸಂಚಾರಿಗಳು ಹೆದ್ದಾರಿ ಹೋರಾಟ ಸಮಿತಿಯ ಮೂಲಕ ಅಂತಹ ಒತ್ತಾಯ ಹೇರುವ ಚಿಂತನೆ ನಡೆಸಿದ್ದಾರೆ. ಸಮಿತಿ ಈಗಾಗಲೇ 10 ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ರಿಯಾಯಿತಿ ನೀಡಬೇಕೆಂದು ಹೆದ್ದಾರಿ ಅಧಿಕಾರಿಗಳಿಗೆ ಮನವಿ ನೀಡಿತ್ತು. ಸಂಸದರ ಜನಸಂಪರ್ಕ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿತ್ತು.

‘ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸದೆ ಟೋಲ್ ಆರಂಭಿಸಬಾರದು’ ಎಂದು ಸಂಸದರು ಕಂಪನಿ ಹಾಗೂ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಿದ್ದರು. ಆ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಬದಲಾಗಿ ಟೋಲ್ ಪ್ಲಾಜಾಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಒಂದು ವಾರದಿಂದ ಅದರ ಮೂಲಕ ಪ್ರಾಯೋಗಿಕ ವಾಹನ ಸಂಚಾರ ನಡೆಯುತ್ತಿದೆ.

‘ಈ ಭಾಗದ ಕಾಮಗಾರಿ ಮುಗಿದಿರುವುದರಿಂದ ಸ್ವಲ್ಪ ಸಮಯದಲ್ಲಿ ಶುಲ್ಕ ಸಂಗ್ರಹ ಆರಂಭವಾಗಲಿದೆ’ ಎಂದು ಗುತ್ತಿಗೆದಾರ ಕಂಪನಿಯ ಯೋಜನಾ ವ್ಯವಸ್ಥಾಪಕ ಯೋಗೇಂದ್ರಪ್ಪ ಹೇಳಿದ್ದಾರೆ. ‘ಅನುಮತಿ ಕೋರಿ ಕಂಪನಿ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ’ ಎಂದು ಪ್ರಾಧಿಕಾರದ ಕನ್ಸಲ್ಟಂಟ್ ಚೆನ್ನಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT