ಶುಕ್ರವಾರ, ಸೆಪ್ಟೆಂಬರ್ 24, 2021
21 °C
ನಿಫಾ ವೈರಸ್‌, ಕೋವಿಡ್‌ ನಿಯಂತ್ರಣ ಸಂಬಂಧ ತಜ್ಞರ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್

ನಿಫಾ ವೈರಸ್: ಆತಂಕ ಬೇಡ, ಎಚ್ಚರಿಕೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನೆರೆಯ ಕೇರಳದಲ್ಲಿ ನಿಫಾ ವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇರಳದಿಂದ ಸಾರ್ವಜನಿಕರು ರಾಜ್ಯಕ್ಕೆ ಬರಲು ನಿರ್ಬಂಧವಿದೆ. ಆದರೂ, ಜಿಲ್ಲೆಯಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ಗುರುವಾರ ಕಚೇರಿ ಸಭಾಂಗಣದಲ್ಲಿ ನಿಫಾ ವೈರಸ್ ನಿಯಂತ್ರಣ ಹಾಗೂ ಜಿಲ್ಲಾ ಮಟ್ಟದ ಕೋವಿಡ್ ನಿಯಂತ್ರಣ ತಜ್ಞರ ಸಮಿತಿ ಸಭೆಯಲ್ಲಿ ಮಾತನಾಡಿ, ನಿಫಾ ವೈರಸ್‌ ಬಗ್ಗೆ ಸಾರ್ವಜನಿಕರು ಆತಂಕಪಡಬೇಕಿಲ್ಲ. ಜ್ವರ, ಕೀಲುನೋವು, ಆಯಾಸ, ತಲೆನೋವು, ತಲೆ ಸುತ್ತುವಿಕೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು, ನಿಫಾ ವೈರಾಣು ಜ್ವರದ ಲಕ್ಷಣಗಳಾಗಿದ್ದು, ಸಾರ್ವಜನಿಕರಿಗೆ ಇದರ ಬಗ್ಗೆ ಅರಿವಿರಬೇಕು ಎಂದರು.

ಸಾಮಾನ್ಯವಾಗಿ ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಅಥವಾ ಬಾವಲಿಗಳು ಸೇವಿಸಿದ ಹಣ್ಣುಗಳನ್ನು ಸೇವಿಸುವುದರಿಂದ ಇತರ ಪ್ರಾಣಿಗಳಿಗೂ ಸೋಂಕು ಹರಡುವ ಸಾದ್ಯತೆ ಇರುತ್ತದೆ. ನಿಫಾ ಸೋಂಕಿನ ಹರಡುವಿಕೆ ಮತ್ತು ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೇರಳದಿಂದ ಬರುವವರಿಗೆ ಕಡ್ಡಾಯ 72 ಗಂಟೆಯೊಳಗಿನ ಕೋವಿಡ್‌ ನೆಗೆಟಿವ್ ವರದಿ ಕಡ್ಡಾಯವಿದ್ದು, 7 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸಬೇಕು. ಬಳಿಕ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಕೊಲ್ಲುರು ದೇವಸ್ಥಾನ ಸೇರಿದಂತೆ ಮತ್ತಿತರ ಧಾರ್ಮಿಕ ಸ್ಥಳಗಳಿಗೆ ಬರುವಂಥವರಿಗೆ ಕೋವಿಡ್ ಪರೀಕ್ಷೆ ಮಾಡುವುದು ಸೂಕ್ತ ಎಂದರು.

ಜನರು ಹೆಚ್ಚು ಸೇರುವಂತಹ ಮಾರುಕಟ್ಟೆ, ಸಂತೆ, ಸಭೆ, ಸಮಾರಂಭಗಳಲ್ಲಿ ಸೋಂಕು ಹೆಚ್ಚು ಹರಡುವ ಸಾಧ್ಯತೆಗಳಿರುವುದರಿಂದ ಅಲ್ಲಿಯೂ ಕೋವಿಡ್ ಪರೀಕ್ಷೆಗಳನ್ನು ಮಾಡಬೇಕು. ವಿದೇಶ ಹಾಗೂ ಹೊರ ರಾಜ್ಯಗಳಿಂದ ವಿದಾಭ್ಯ್ಯಾಸಕ್ಕಾಗಿ ಬಂದು ವಿಧ್ಯಾರ್ಥಿ ನಿಲಯಗಳಲ್ಲಿ ತಂಗುವವರನ್ನು ನಿಯಮಿತವಾಗಿ ಕೋವಿಡ್ ಪರೀಕ್ಷೆಗೊಳಪಡಿಸಬೇಕು. ಕೋವಿಡ್ ದೃಢಪಟ್ಟರೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಅವರಿಗೂ ಕೋವಿಡ್ ಪರೀಕ್ಷೆ ಮಾಡಬೇಕು. ಹೊರ ರಾಜ್ಯಗಳಿಂದ ಗ್ರಾಮಗಳಿಗೆ ಬಂದರೆ ಅಂಥವರ ಮಾಹಿತಿಯನ್ನು ಗ್ರಾಮಸ್ಥರು ಟಾಸ್ಕ್ ಫೋರ್ಸ್‌ಗೆ ನೀಡಬೇಕು ಎಂದರು.‌

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ ಮಾತನಾಡಿ, ಪ್ರಾಣಿ, ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು, ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ, ನೀರಾ, ತಾಳೆ ಹಣ್ಣಿನ ರಸವನ್ನು ಸೇವಿಸಬಾರದು. ಹಣ್ಣು ಮತ್ತು ಒಣ ಖರ್ಜೂರವನ್ನು ಸೇವಿಸುವ ಮೊದಲು ಶುದ್ಧಗೊಳಿಸಬೇಕು ಎಂದರು.

ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು, ರಕ್ತ ಹಾಗೂ ನೇರ ಸಂಪರ್ಕದಿ‌ಂದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಬಾವಲಿಗಳು ವಾಸವಿರುವ ಬಾವಿಯ ನೀರನ್ನು ಕುದಿಸದೆ ಉಪಯೋಗಿಸಬಾರದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್‌ಒ ಡಾ.ನಾಗಭೂಷಣ್ ಉಡುಪ, ಜಿಲ್ಲಾ ಸರ್ಜನ್ ಮಧುಸೂಧನ್ ನಾಯಕ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಶಾಂತ್ ಭಟ್  ಇದ್ದರು.

 

 

 

 

 

 

 

 

 

 

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.