ಕಾರ್ಕಳ: ತಾಲ್ಲೂಕಿನ ನೀರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಸ್ಪರ್ಧೆಯ ವಿಚಾರದಲ್ಲಿ ನಾಲ್ವರು ಬಿಜೆಪಿ ಬೆಂಬಲಿತ ಸದಸ್ಯರು ಸೇರಿದಂತೆ ಬಿಜೆಪಿ ಪಕ್ಷದ ವಿವಿಧ ಹುದ್ದೆಗಳ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಸೃಷ್ಟಿಯಾಗಿದ್ದ ಭಿನ್ನಮತ ಇದೀಗ ಮತ್ತೆ ಕಾಣಿಸಿಕೊಂಡಿದೆ.
ನೀರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ರಾಜೇಂದ್ರ ಶೆಟ್ಟಿ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಂಡಾಯ ಅಭ್ಯರ್ಥಿಯ ವಿರುದ್ಧ ಸೋತಿದ್ದರು. ಇದರಿಂದ ಬಿಜೆಪಿ ಬೆಂಬಲಿತ ಅಧಿಕೃತ ಅಭ್ಯರ್ಥಿ ರಾಜೇಂದ್ರ ಶೆಟ್ಟಿ ಪಕ್ಷ ವಿರೋಧಿಗಳನ್ನು ಪಕ್ಷದಿಂದ ಹೊರಹಾಕಬೇಕು ಎಂದು ಬಿಗಿಪಟ್ಟು ಹಿಡಿದಿದ್ದರು. ಆದರೆ ರಾಜೇಂದ್ರ ಶೆಟ್ಟಿ ವಿರೋಧಿ ಪಾಳಯ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದರಿಂದ ಸಿಟ್ಟಿಗೆದ್ದ ನಾಲ್ವರು ಪಂಚಾಯಿತಿ ಸದಸ್ಯರಾದ ರಾಜೇಂದ್ರ ಶೆಟ್ಟಿ, ಮಹೇಶ್ ಸಫಲಿಗ, ಲಿಲಾವತಿ ಪೂಜಾರಿ ಹಾಗೂ ಪದ್ಮಾ ಎನ್ನುವವರು ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದಲ್ಲದೇ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಾದ ಸಚಿನ್ ಪೂಜಾರಿ, ಶರತ್ ಶೆಟ್ಟಿ, ಸಂದೇಶ್ ಶೆಟ್ಟಿ, ಸಂತೋಷ್, ಜಿತೇಶ್ ಪೂಜಾರಿ, ಸುಜಿತ್ ನಾಯಕ್, ದೀಪಕ್ ಪೂಜಾರಿ ಸೇರಿದಂತೆ ನೀರೆ ಗ್ರಾಮದ ಮೂರು ವಾರ್ಡಿನ ಎಲ್ಲಾ ಸದಸ್ಯರು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
15 ಮಂದಿ ಸದಸ್ಯ ಬಲದ ನೀರೆ ಪಂಚಾಯಿತಿಯಲ್ಲಿ 13 ಜನ ಬಿಜೆಪಿ ಬೆಂಬಲಿತ ಹಾಗೂ ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು ಇತ್ತೀಚೆಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಧಿಕೃತ ಅಭ್ಯರ್ಥಿಯಾಗಿ ರಾಜೇಂದ್ರ ಶೆಟ್ಟಿಯವರನ್ನು ಕಣಕ್ಕೆ ಇಳಿಸಲಾಗಿತ್ತು. ಆದರೆ ರಾಜೇಂದ್ರ ಶೆಟ್ಟಿ ಆಯ್ಕೆಯನ್ನು ಬಿಜೆಪಿಯ ಇನ್ನೊಂದು ಬಣ ವಿರೋಧಿಸಿತ್ತು. ಈ ವಿರೋಧಕ್ಕೆ ಬಿಜೆಪಿ ನಾಯಕರು ಸೊಪ್ಪು ಹಾಕದ ಹಿನ್ನಲೆಯಲ್ಲಿ ವಿರೋಧಿ ಬಣ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸಚ್ಚಿದಾನಂದ ಪ್ರಭು ಅವರನ್ನು ಕಣಕ್ಕಿಳಿಸಿತ್ತು. ಆದರೆ ಈ ಬಿಕ್ಕಟ್ಟು ಪಕ್ಷದ ಪ್ರಮುಖರ ವೇದಿಕೆಯಲ್ಲಿ ಬಗೆಹರಿಯದ ಕಾರಣದಿಂದ ಚುನಾವಣೆ ನಡೆದು ಅಂತಿಮವಾಗಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ರಾಜೇಂದ್ರ ಶೆಟ್ಟಿ 6 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಬಂಡಾಯ ಅಭ್ಯರ್ಥಿ ಸಚ್ಚಿದಾನಂದ ಪ್ರಭು 9 ಮತಗಳನ್ನು ಪಡೆದು ಮೂರು ಮತಗಳ ಅಂತರದಲ್ಲಿ ಜಯಶಾಲಿಯಾಗಿದ್ದರು.
ತಾಲ್ಲೂಕಿನ ಬೈಲೂರು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಬಿಜೆಪಿಯಲ್ಲಿ ಎರಡು ಬಣ ಸೃಷ್ಟಿಯಾಗಿದೆ. ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಎರಡು ಬಣಗಳಿಂದ ಬಿಜೆಪಿಯ ಒಳಜಗಳ ಬೂದಿಮುಚ್ಚಿದ ಕೆಂಡದಂತಿತ್ತು. ಪಕ್ಷದ ಹಾಗೂ ಪಂಚಾಯಿತಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಎರಡೂ ಬಣಗಳ ನಡುವೆ ತಿಕ್ಕಾಟವಿತ್ತು. ಇದೀಗ ಎರಡು ಬಣಗಳ ನಡುವಿನ ಒಳಜಗಳ ಬಿಜೆಪಿ ಪ್ರಮುಖರಿಗೆ ತಲೆನೋವಾಗಿ ಪರಿಣಮಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.