ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಪೆ ಬೀಚ್‌ಗಿಳಿಯಲು ಪ್ರವಾಸಿಗರಿಗೆ ನಿಷೇಧ

ಸಮುದ್ರದ 1 ಕಿ.ಮೀ ತೀರದಲ್ಲಿ ನೆಟ್ ಅಳವಡಿಕೆ; ಎಚ್ಚರಿಕೆಯ ಸಂದೇಶದ ಬಾವುಟಗಳ ಪ್ರದರ್ಶನ
Last Updated 15 ಜೂನ್ 2019, 14:10 IST
ಅಕ್ಷರ ಗಾತ್ರ

ಉಡುಪಿ: ಅರಬ್ಬೀ ಸಮುದ್ರದಲ್ಲಿ ‘ವಾಯು’ ಚಂಡಮಾರುತದ ಪ್ರಭಾವದಿಂದ ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಮಲ್ಪೆ ಬೀಚ್‌ನಲ್ಲಿ ದೈತ್ಯ ಅಲೆಗಳು ತೀರಕ್ಕೆ ಬಡಿಯುತ್ತಿವೆ. ಅಲೆಗಳ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಬೀಚ್‌ಗೆ ಇಳಿಯದಂತೆ ನಿಷೇಧ ಹೇರಲಾಗಿದ್ದು, ಬೀಚ್‌ನ ಸುತ್ತಲೂ ತಡೆ ಬೇಲಿ ಹಾಕಲಾಗಿದೆ.

ನೆಟ್‌ ಅಳವಡಿಕೆ:

ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಪ್ರವಾಸಿಗರು ನೀರಿಗಿಳಿಯದಂತೆ ತಡೆಯಲು ಬೀಚ್‌ನ ಸುತ್ತಲೂ 7ಅಡಿ ಎತ್ತರದ ನೆಟ್‌ ಅಳವಡಿಸಿದೆ. ನೆಟ್‌ ದಾಟಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಗಳನ್ನು ನೀಡಲಾಗುತ್ತಿದೆ. ಜತೆಗೆ, ಅಪಾಯದ ಮುನ್ಸೂಚನೆ ಸಾರುವ ಕೆಂಪು ಬಾವುಟಗಳನ್ನು ಎಲ್ಲೆಡೆ ಹಾಕಲಾಗಿದೆ. ಜತೆಗೆ ಧ್ವನಿವರ್ಧಕಗಳ ಮೂಲಕವೇ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ ಕಾರ್ಯ ನಿರ್ವಾಹಕ ಸುದೇಶ್ ಶೆಟ್ಟಿ.

ಪ್ರವಾಸಿಗರಿಗಿಲ್ಲ ಮೋಜು:

ಮಲ್ಪೆ ಬೀಚ್‌ನ ಬಳಿ ಸದಾ ಪ್ರವಾಸಿಗರ ದಂಡು ತುಂಬಿರುತ್ತದೆ. ಮಳೆಗಾಲದಲ್ಲಿಲೈಫ್‌ಗಾರ್ಡ್‌ ಸಿಬ್ಬಂದಿ ಎಚ್ಚರಿಕೆಯನ್ನೂ ಲೆಕ್ಕಿಸದೆ ನೀರಿಗಿಳಿದು ಖುಷಿಪಡುತ್ತಾರೆ. ಕಡಲು ಪ್ರಕ್ಷುಬ್ಧಗೊಂಡಾಗ ಅದರ ರೌದ್ರತೆಯ ಅರಿವು ಅವರಿಗಿರುವುದಿಲ್ಲ. ಹಾಗಾಗಿ, ಆಳದವರೆಗೂ ಹೋಗಿ ಸೆಳೆತಕ್ಕೆ ಸಿಲುಕುತ್ತಾರೆ. ಇಂತಹ ಸಂದರ್ಭಗಳಲ್ಲಿ ಪ್ರಾಣಾಪಾಯ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗಾಗಿ ನೆಟ್‌ ಅಳವಡಿಸಲಾಗಿದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಮಳೆಗಾಲದಲ್ಲಿ ಸಮುದ್ರ ತನ್ನೊಳಗಿನ ಕಲ್ಮಶವನ್ನೆಲ್ಲ ತೀರಕ್ಕೆ ಎಸೆಯುತ್ತದೆ. ನೀರಿಗಿಳಿದರೆ ಚರ್ಚಕ್ಕೆ ಸೋಂಕು ತಗುಲುವ ಅಪಾಯವೂ ಇರುತ್ತದೆ. ಪ್ರವಾಸಿಗರು ದೂರದಿಂದಲೇ ಮಳೆಗಾಲದ ಕಡಲಿನ ರೌದ್ರತೆ ಹಾಗೂ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರವಾಸಿಗರು ಬಿಸಿಲಿನಿಂದ ರಕ್ಷಣೆ ಪಡೆಯಲು ತೀರದಲ್ಲಿ ಹಾಕಲಾಗಿದ್ದ 8 ನೆಟ್‌ಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ. ಆಗಸ್ಟ್‌ ನಂತರ ಮತ್ತೆ ಹಟ್‌ಗಳನ್ನು ಹಾಕಲಾಗುವುದು ಎಂದು ಸುದೇಶ್ ತಿಳಿಸಿದರು.

1 ಕಿ.ಮೀ ಉದ್ದಕ್ಕೂ ಅಳವಡಿಸಿರುವ ನೆಟ್‌ ಅನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ತೆಗೆಯಲಾಗುತ್ತದೆ. ಸಮುದ್ರ ಶಾಂತವಾಗಿದ್ದರೆ ಹಳದಿ ಬಾವುಟ ಅಳವಡಿಸಲಾಗುವುದು. ಸಧ್ಯ ಬೀಚ್‌ನಲ್ಲಿ 8 ಜೀವ ರಕ್ಷಕರು ಹಾಗೂ 6 ಹೋಂ ಗಾರ್ಡ್ಸ್‌ಗಳನ್ನು ನಿಯೋಜಿಸಲಾಗಿದೆ. ರಕ್ಷಣಾ ಪರಿಕರಗಳನ್ನು ವಿತರಿಸಲಾಗಿದೆ.ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸುದೇಶ್ ಶೆಟ್ಟಿ ತಿಳಿಸಿದರು.

‘ಈಗ ಬೀಚ್‌ಗಿಳಿಯುವುದು ಸುರಕ್ಷಿತವಲ್ಲ’

ಕೆಲ ದಿನಗಳ ಹಿಂದೆ ಭದ್ರಾವತಿ ಮೂಲದ ಯುವಕರ ತಂಡ ಬೀಚ್‌ಗೆ ಬಂದಿತ್ತು. ಕಡಲಿಗಿಳಿಯದಂತೆ ಸೂಚನೆ ನೀಡಿದರೂ ಕೇಳದೆ ನೀರಿನಲ್ಲಿ ಆಡಲು ಹೋಗಿ ಒಬ್ಬ ವ್ಯಕ್ತಿ ಸೆಳೆತಕ್ಕೆ ಸಿಕ್ಕು ಸಮುದ್ರ ಪಾಲಾಗುವ ಹಂತದಲ್ಲಿದ್ದರು. ತಕ್ಷಣ ಲೈಫ್ ಗಾರ್ಡ್‌ ಸಿಬ್ಬಂದಿ ರಕ್ಷಣೆಗೆ ಧಾವಿಸಿದರು. ಸೆಳೆತ ಹೆಚ್ಚಾಗಿದ್ದರಿಂದ ಆ ವ್ಯಕ್ತಿಯನ್ನು ಹೊರಗೆಳೆಯಲು 45 ನಿಮಿಷಗಳು ಬೇಕಾಯಿತು. ಹಾಗಾಗಿ ಕಡಲಿಗಿಳಿಯದಿರುವುದು ಒಳಿತು ಎಂದು ಸುದೇಶ್ ಶೆಟ್ಟಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT