ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಜ್‌ಶೀಟ್ ಸಲ್ಲಿಸಲು ಸಿಸಿಬಿ ಮೀನಮೇಷ

ದಿ.ಆದಿಕೇಶವಲು ಮೊಮ್ಮಗ ಗೀತಾವಿಷ್ಣು ವಿರುದ್ಧದ ಅಪಘಾತ ಪ್ರಕರಣ
Last Updated 30 ಮಾರ್ಚ್ 2018, 20:13 IST
ಅಕ್ಷರ ಗಾತ್ರ

ಬೆಂಗಳೂರು:‌ ಅಪಘಾತ ಹಾಗೂ ಎನ್‌ಡಿಪಿಎಸ್ (ಮಾದಕವಸ್ತು ನಿಯಂತ್ರಣ ಕಾಯ್ದೆ) ಪ್ರಕರಣಗಳಲ್ಲಿ ಆರೋಪಿಯಾಗಿರುವ ಆಂಧ್ರಪ್ರದೇಶದ ರಾಜಕಾರಣಿ ದಿ.ಆದಿಕೇಶವಲು ಅವರ ಮೊಮ್ಮಗ ಗೀತಾವಿಷ್ಣು ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಸಿಬಿ ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ.

2017ರ ಸೆ.27ರ ರಾತ್ರಿ ಪಾನಮತ್ತರಾಗಿ ಅಡ್ಡಾದಿಡ್ಡಿಯಾಗಿ ಬೆನ್ಜ್‌ ಎಸ್‌ಯುವಿ ಚಲಾಯಿಸಿಕೊಂಡು ಬಂದಿದ್ದ ಗೀತಾವಿಷ್ಣು, ಜಯನಗರದ ಸೌತ್‌ ಎಂಡ್‌ ವೃತ್ತದಲ್ಲಿ ಓಮಿನಿ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದರು. ಅಪಘಾತದಲ್ಲಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿ ಗಾಯಗೊಂಡಿದ್ದರು.

ಇದರಿಂದ ಕೆರಳಿದ್ದ ಸ್ಥಳೀಯರು, ಗೀತಾವಿಷ್ಣುನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಆರೋಪಿಯ ಕಾರಿನಲ್ಲಿ 110 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಥಳಿತದಿಂದ ಗಾಯಗೊಂಡಿದ್ದ ಆರೋಪಿಯನ್ನು ಅವರ ಪೋಷಕರ ಒಡೆತನದ ಮಲ್ಯ ಆಸ್ಪತ್ರೆಗೇ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ಆರೋಪಿ ಆಸ್ಪತ್ರೆಯಿಂದಲೂ ಪರಾರಿಯಾಗಿದ್ದ.

ಈ ಘಟನೆಗಳಿಗೆ ಸಂಬಂಧಿಸಿದಂತೆ ಗೀತಾವಿಷ್ಣು ವಿರುದ್ಧ ಮೂರು ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿದ್ದವು. ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರು ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿದ್ದರು.

10 ವರ್ಷಕ್ಕಿಂತ ಕಡಿಮೆ ಶಿಕ್ಷೆ ಇರುವಂಥ ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ಆರೋಪಪಟ್ಟಿ ಸಲ್ಲಿಕೆಯಾಗಬೇಕು. ಗಂಭೀರ ಪ್ರಕರಣಗಳಾದರೆ, 90 ದಿನಗಳೊಳಗೆ ಚಾರ್ಜ್‌ಶೀಟ್ ಸಲ್ಲಿಸಬೇಕು. ಆದರೆ, ಪೊಲೀಸರು 180 ದಿನಗಳಾದರೂ ಕ್ರಮಕ್ಕೆ ಮುಂದಾಗಿಲ್ಲ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಕಮಿಷನರ್ ಸುನೀಲ್ ಕುಮಾರ್, ‘ಕಾರಿನಲ್ಲಿ ಸಿಕ್ಕಿದ್ದ ಮಾದಕ ವಸ್ತುವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಅಲ್ಲಿಂದ ಇನ್ನೂ ವರದಿ ಬಂದಂತಿಲ್ಲ. ತನಿಖಾ ಪ್ರಗತಿ ಬಗ್ಗೆ ತನಿಖಾಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಆದಷ್ಟು ಬೇಗ ಚಾರ್ಜ್‌ಶೀಟ್ ಸಲ್ಲಿಸುವಂತೆ ಸೂಚಿಸುತ್ತೇನೆ’ ಎಂದರು.

‘ಚಾರ್ಜ್‌ಶೀಟ್ ಸಲ್ಲಿಸದ ಹೊರತು, ನ್ಯಾಯಾಲಯದ ವಿಚಾರಣೆ ಆರಂಭವಾಗುವುದಿಲ್ಲ. ಪೊಲೀಸರು ಆರೋಪಿಯ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ಚುನಾವಣೆ ಪ್ರಾರಂಭವಾಗಲಿದ್ದು, ಎಲ್ಲ ಪೊಲೀಸರು ಬಂದೋಬಸ್ತ್ ಕಾರ್ಯಗಳಲ್ಲಿ ನಿರತರಾಗುತ್ತಾರೆ. ಹೀಗಿರುವಾಗ ಪ್ರಕರಣದ ಬಗ್ಗೆ ಅವರು ಇನ್ನೆಲ್ಲಿ ಆಸಕ್ತಿ ತೋರುತ್ತಾರೆ’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್‌ವೊಬ್ಬರು ಹೇಳಿದರು.

ಪೊಲೀಸ್ ವೈಫಲ್ಯಗಳು
* ಅಪಘಾತ ಸಂಭವಿಸಿದ ತಕ್ಷಣ ಪೊಲೀಸರು ಗೀತಾವಿಷ್ಣುನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರಲಿಲ್ಲ.
* ಕಾರಿನಲ್ಲಿ ಮಾದಕ ವಸ್ತು ಸಿಕ್ಕರೂ, ಎನ್‌ಡಿಪಿಎಸ್ ಪ್ರಕರಣದಲ್ಲಿ ಆತನನ್ನು ಬಂಧಿಸಿರಲಿಲ್ಲ.
* ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಬದಲು, ಆರೋಪಿಯ ಪೋಷಕರ ಒಡೆತನದ ಆಸ್ಪತ್ರೆಗೇ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT