ದೆಹಲಿಗೆ ಮೀನುಗಾರರ, ಜನಪ್ರತಿನಿಧಿಗಳ ನಿಯೋಗ: ಪ್ರಧಾನಿ ಭೇಟಿಗೆ ಸಿಗದ ಅವಕಾಶ

7
ಜೇಟ್ಲಿಗೆ ಮನವಿ ಸಲ್ಲಿಕೆ

ದೆಹಲಿಗೆ ಮೀನುಗಾರರ, ಜನಪ್ರತಿನಿಧಿಗಳ ನಿಯೋಗ: ಪ್ರಧಾನಿ ಭೇಟಿಗೆ ಸಿಗದ ಅವಕಾಶ

Published:
Updated:
Prajavani

ಉಡುಪಿ: ಮಲ್ಪೆಯಿಂದ ನಾಪತ್ತೆಯಾದ ಬೋಟ್ ಪತ್ತೆಗೆ ಪ್ರಧಾನಿ ಬಳಿ ನೆರವು ಕೋರಲು ದೆಹಲಿಗೆ ತೆರಳಿದ್ದ ಮೀನುಗಾರರ ಹಾಗೂ ಜನಪ್ರತಿನಿಧಿಗಳ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಸಾಧ್ಯವಾಗಿಲ್ಲ.

ಮಂಗಳವಾರ ಪ್ರಧಾನಿ ಭೇಟಿಗೆ ಅವಕಾಶ ಸಿಗುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ನಾರ್ವೆ ದೇಶದ ಪ್ರಧಾನಿ ಭೇಟಿ ಕಾರಣಕ್ಕೆ ಅವಕಾಶ ಸಿಗಲಿಲ್ಲ ಎಂದು ನಿಯೋಗದ ಜತೆಗೆ ತೆರಳಿದ್ದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.

ಪ್ರಧಾನಿ ಬಳಿ ಮೀನುಗಾರರ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನದ ನೆರವು ಕೋರಲು ಎಲ್ಲರೂ ಉತ್ಸುಕರಾಗಿದ್ದೆವು. ಕೊನೆಗೂ ಆಸೆ ಈಡೇರಲಿಲ್ಲ. ಜ.28ರ ನಂತರ ಪ್ರಧಾನಿ ಭೇಟಿಗೆ ಅವಕಾಶ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.

ಇದೇವೇಳೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿ ಮಾಡಿದ ನಿಯೋಗ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿತು.

ನಾಪತ್ತೆಯಾಗಿರುವ ಮೀನುಗಾರರ ರಕ್ಷಣೆಗೆ ತುರ್ತುಕ್ರಮ ತೆಗೆದುಕೊಳ್ಳಬೇಕು. ಡೀಸೆಲ್‌ ಮೇಲಿನ ರಸ್ತೆ ಸುಂಕವನ್ನು ರದ್ದು ಮಾಡಬೇಕು. ಮೀನುಗಾರಿಕಾ ಉಪಕರಣಗಳ ಮೇಲಿನ ಜಿಎಸ್‌ಟಿ ಕೈಬಿಡಬೇಕು. ಕೇಂದ್ರದಲ್ಲಿ ಮೀನುಗಾರಿಕಾ ಸಚಿವರನ್ನು ನೇಮಿಸಬೇಕು. ಹಿಂದಿನಂತೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ವಿತರಿಸಬೇಕು ಎಂಬ ಮನವಿಯನ್ನು ಜೇಟ್ಲಿ ಅವರಿಗೆ ಸಲ್ಲಿಸಲಾಯಿತು ಎಂದರು.

ನಿಯೋಗದಲ್ಲಿ ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಶಾಸಕ ರಘುಪತಿ ಭಟ್‌, ಅಖಿಲ ಭಾರತ ಮೀನುಗಾರರ ವೇದಿಕೆ ಅಧ್ಯಕ್ಷ ವೆಲ್ಜಿಬಾಯ್‌ ಮಸಾನಿ, ದಕ್ಷಿಣ ಕನ್ನಡ, ಉಡುಪಿ ಮೀನು ಮಾರಾಟಗಾರರ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ ಅವರೂ ಇದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !