ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಮದ್ಯ ಉದ್ಯಮದ ಲಾಭದ ‘ನಶೆ’ ಇಳಿಕೆ

ಬಾರ್ ಅಂಡ್ ರೆಸ್ಟೊರೆಂಟ್‌ಗಳಲ್ಲಿ ವ್ಯಾಪಾರ ಇಳಿಮುಖ; ಮಾಲೀಕರು ಕಂಗಾಲು
Last Updated 25 ಆಗಸ್ಟ್ 2020, 20:30 IST
ಅಕ್ಷರ ಗಾತ್ರ

ಉಡುಪಿ: ‘ಲಾಭದ ಉದ್ಯಮ’ ಎಂದು ಕರೆಸಿಕೊಳ್ಳುತ್ತಿದ್ದ ಬಾರ್ ಅಂಡ್‌ ರೆಸ್ಟೊರೆಂಟ್‌ ವ್ಯವಹಾರ ಲಾಕ್‌ಡೌನ್‌ ಹೊಡೆತಕ್ಕೆ ಸಿಕ್ಕು ನಷ್ಟದ ಹಾದಿ ಹಿಡಿದಿದೆ. ಮದ್ಯಪ್ರಿಯರು ಬಾರ್‌ಗಳಲ್ಲಿ ಕುಳಿತು ಮದ್ಯಸೇವಿಸಲು ಅನುಮತಿ ಇಲ್ಲದ ಕಾರಣ ಉದ್ಯಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಜಿಲ್ಲೆಯಲ್ಲಿ116 ವೈನ್‌ಶಾಪ್‌ ಹಾಗೂ ಎಂಆರ್‌ಪಿ ಮಳಿಗೆಗಳಿದ್ದು, 283 ಬಾರ್ ಅಂಡ್‌ ರೆಸ್ಟೊರೆಂಟ್‌ಗಳಿವೆ. ಲಾಕ್‌ಡೌನ್ ನಿಯಮ ಸಡಿಲಿಕೆಯಾದ ಬಳಿಕ ಹಂತ ಹಂತವಾಗಿ ಮದ್ಯ ಮಾರಾಟಕ್ಕೆ ಹಾಗೂ ಆಹಾರ ಪಾರ್ಸೆಲ್‌ ಕೊಂಡುಹೋಗಲು ಸರ್ಕಾರ ಗ್ರೀನ್‌ ಸಿಗ್ನಲ್ ಕೊಟ್ಟರೂ, ಬಾರ್ ಅಂಡ್ ರೆಸ್ಟೊರೆಂಟ್‌ಗಳಲ್ಲಿ ಕುಳಿತು ಆಹಾರ ಸಹಿತ ಮದ್ಯ ಸೇವನೆಗೆ ಅವಕಾಶ ನೀಡಿಲ್ಲ.

ಪರಿಣಾಮ, ರೆಸ್ಟೊರೆಂಟ್‌ಗಳ ಆದಾಯದ ಮೂಲಕ್ಕೆ ಪೆಟ್ಟುಬಿದ್ದಿದ್ದು, ಮಾಲೀಕರು ಕಂಗಾಲಾಗಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ಗಿಜಿಗುಡುತ್ತಿದ್ದ ಬಾರ್‌ಗಳು ಗ್ರಾಹಕರಿಲ್ಲದೆ ಭಣಗುಡುತ್ತಿವೆ. ನಿರ್ವಹಣಾ ವೆಚ್ ಭರಿಸಲಾಗದೆ, ಬಹುತೇಕ ಬಾರ್ ಅಂಡ್‌ ರೆಸ್ಟೊರೆಂಟ್‌ಗಳು ಎಂಆರ್‌ಪಿ ಕೇಂದ್ರಗಳಾಗಿ ಬದಲಾಗಿವೆ.

ಬಾರ್ ಅಂಡ್‌ ರೆಸ್ಟೊರೆಂಟ್‌ಗಳಲ್ಲಿ ಕುಳಿತು ಆಹಾರ ಸಹಿತ ಮದ್ಯ ಸೇವನೆಗೆ ಅನುಮತಿ ಇಲ್ಲದ ಕಾರಣ ಗ್ರಾಹಕರು ಹೆಚ್ಚು ಬರುತ್ತಿಲ್ಲ. ಇದರಿಂದ ಆದಾಯ ಖೋತಾ ಆಗಿದ್ದು, ಮಳಿಗೆಯ ಬಾಡಿಗೆ, ವಿದ್ಯುತ್ ಶುಲ್ಕ, ವಾರ್ಷಿಕ ಲೈಸೆನ್ಸ್ ಶುಲ್ಕ, ಕೆಲಸಗಾರರ ವೇತನ ಪಾವತಿ ಕಷ್ಟವಾಗಿದೆ ಎನ್ನುತ್ತಾರೆ ಮಾಲೀಕರು.

ಲಾಕ್‌ಡೌನ್‌ಗೂ ಮುನ್ನ ಬಾರ್ ಅಂಡ್ ರೆಸ್ಟೊರೆಂಟ್‌ ವ್ಯವಹಾರದಲ್ಲಿ ಶೇ 25ರವರೆಗೂ ಲಾಭಾಂಶ ಸಿಗುತ್ತಿತ್ತು. ಖರ್ಚು ಶೇ 15 ತೆಗೆದರೂ ಕನಿಷ್ಠ ಶೇ 10 ಆದಾಯ ಉಳಿಯುತ್ತಿತ್ತು. ಈಗ ಲಾಭಾಂಶ ದೂರದ ಮಾತು, ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಜಿಲ್ಲಾ ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ.

ಎಂಆರ್‌ಪಿ ಕೇಂದ್ರಗಳಲ್ಲಿ 5 ರಿಂದ 10 ಮಂದಿ ಕೆಲಸ ಮಾಡಿದರೆ, ಬಾರ್ ಅಂಡ್‌ ರೆಸ್ಟೊರೆಂಟ್‌ಗಳಲ್ಲಿ ಅಡುಗೆ, ಕ್ಲೀನಿಂಗ್, ಮದ್ಯ ಪೂರೈಕೆ ಮಾಡುವವರು, ಬಿಲ್‌ ಪಡೆಯುವವರು ಸೇರಿ ಕನಿಷ್ಠ 25 ರಿಂದ 40 ಮಂದಿ ದುಡಿಯುತ್ತಾರೆ.

ಜಿಲ್ಲೆಯ 283 ರೆಸ್ಟೊರೆಂಟ್‌ಗಳಲ್ಲಿ 5,500ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಲಾಕ್‌ಡೌನ್ ಬಳಿಕ ಉದ್ಯಮ ಸಂಕಷ್ಟಕ್ಕೆ ಸಿಲುಕಿದ ಬಳಿಕ 5 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ವಿವರ ನೀಡಿದರು ಗೋವಿಂದರಾಜ ಹೆಗ್ಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT