ಶನಿವಾರ, ಸೆಪ್ಟೆಂಬರ್ 18, 2021
28 °C
ನೆರವಿಗೆ ಧಾವಿಸದ ಸರ್ಕಾರ: ಡಾ.ಪಿ.ವಿ. ಭಂಡಾರಿ

ವೇತನವಿಲ್ಲದೆ ಸಂಕಷ್ಟ; ಖಿನ್ನತೆಗೆ ಜಾರುತ್ತಿರುವ ಅತಿಥಿ ಉಪನ್ಯಾಸಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೊರೊನ ಸಂಕಷ್ಟಕ್ಕೆ ಒಳಗಾದ ಬಡವರಿಗೆ, ಶ್ರಮಿಕರಿಗೆ, ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿವೆ. ಆದರೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅತಿಥಿ ಉಪನ್ಯಾಸಕರಿಗೆ ಮಾತ್ರ ಯಾವ ನೆರವೂ ನೀಡದಿರುವುದು ನೋವಿನ ಸಂಗತಿ ಎಂದು ಮನೋವೈದ್ಯ ಡಾ.ಪಿ.ವಿ. ಭಂಡಾರಿ ವಿಷಾದ ವ್ಯಕ್ತಪಡಿಸಿದರು. 

ಹೋಟೆಲ್ ಸ್ವದೇಶ್ ಸಭಾಂಗಣದಲ್ಲಿ ಸೋಮವಾರ ಉಡುಪಿಯ ಮಂತ್ರಾಲಯ ರಾಘವೇಂದ್ರ ಶಾಖಾಮಠ, ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಆಶ್ರಯದಲ್ಲಿ ಅತಿಥಿ ಉಪನ್ಯಾಸಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳಿಂದ ಕೆಲಸವಿಲ್ಲ, ವೇತನವಿಲ್ಲ. ಸರ್ಕಾರದಿಂದ ನೆರವು ಸಿಕ್ಕಿಲ್ಲ. ಪರಿಣಾಮ, ಆರ್ಥಿಕ ಸಮಸ್ಯೆಯಿಂದ ಜೀವನ ನಡೆಸಲು ಸಾಧ್ಯವಾಗದೆ ಮಾನಸಿಕ ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆಯತ್ತ ಪ್ರಚೋದಿತರಾಗುತ್ತಿದ್ದಾರೆ. ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಖಂಡನೀಯ ಎಂದರು.

ನಾಗರಿಕ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಮಾತನಾಡಿ ‘ಕೊರೊನ ಲಾಕ್‌ಡೌನ್ ಸಂಕಷ್ಟದ ದಿನಗಳಲ್ಲಿ ಸಮಾಜದ ವಿವಿಧ ವರ್ಗದವರ ನೋವಿಗೆ ಸ್ಪಂದಿಸಿದ ಸರ್ಕಾರ, ಅತಿಥಿ ಉಪನ್ಯಾಸಕರನ್ನು ಮರೆತಿದ್ದು ಅಮಾನವೀಯ. ಕನಿಷ್ಠ ಪ್ರೋತ್ಸಾಹ ಧನ ನೀಡದೆ ಬದುಕಿನ ಹಕ್ಕನ್ನು ಕಸಿದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಡಿಮೆ ವೇತನಕ್ಕೆ ದುಡಿಯುತ್ತಿರುವ ಅತಿಥಿ ಉಪನ್ಯಾಸಕರಿಗೆ ಕೊರೊನ ಕಾರಣದಿಂದ ತಿಂಗಳ ಮೊದಲೇ ರಜೆ ನೀಡಲಾಗಿದೆ. ವೇತನವೂ ಪಾವತಿಸಿಲ್ಲ. ಬದಲಾಗಿ ಖಾಯಂ ನೌಕರರಿಗೆ, ಇತರೆ ಇಲಾಖೆಯಲ್ಲಿ ದುಡಿಯುವವರಿಗೆ ಪೂರ್ಣ ವೇತನ ನೀಡಿ ತಾರತಮ್ಯ ನೀತಿ ಅನುಸರಿಸಿದೆ ಎಂದರು.

ನಿಟ್ಟೆ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶ್ರೀನಿವಾಸ ಶೆಟ್ಟಿ, ಡಾ.ಬಿ.ಆರ್‌. ಶ್ರೀನಿವಾಸ ರಾವ್, ಉದ್ಯಮಿ ಜೆರ್ರಿ ವಿನ್ಸೆಂಟ್ ಡಯಾಸ್‌, ಶ್ರೀನಿವಾಸ ಉಪಾಧ್ಯ, ಸುಶೀಲ ರಾವ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಉದ್ಯಮಿ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಫೀಕ್ ಖಾನ್ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಎಂ.ಸಿ. ನರಹರಿ ಪ್ರಾರ್ಥಿಸಿದರು. ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್, ಸಮನ್ವಯ ಸಮಿತಿ ಜಂಟಿ ಕಾರ್ಯದರ್ಶಿ ಮಂಜಪ್ಪ ಗೋಣಿ, ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷೆ ಡಾ.ಶಾಹಿದಾ ಜಹಾನ್ ಕೋಟ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು