ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎನ್‌ಎ ಆಧಾರಿತ ಎನ್‌ಆರ್‌ಸಿ ಜಾರಿಯಾಗಲಿ: ವಾಮನ್‌ ಮೇಶ್ರಾಮ್‌

ಬಹುಜನ ಕ್ರಾಂತಿ ಮೋರ್ಚಾ ಪರಿವರ್ತನಾ ಯಾತ್ರೆ
Last Updated 4 ಫೆಬ್ರುವರಿ 2020, 14:32 IST
ಅಕ್ಷರ ಗಾತ್ರ

ಉಡುಪಿ: ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್‌ಗಿಂತಲೂ ಎವಿಎಂಗಳು ಬಹಳ ಅಪಾಯಕಾರಿ. ಇವಿಎಂ ವಿರುದ್ಧ ದೇಶದಾದ್ಯಂತ ಜಾಗೃತಿ ಮೂಡಿಸಲು ಪರಿವರ್ತನಾ ಯಾತ್ರೆ ನಡೆಸಲಾಗುತ್ತಿದೆ ಎಂದು ಬಹುಜನ ಕ್ರಾಂತಿ ಮೋರ್ಚಾ ರಾಷ್ಟ್ರೀಯ ಸಂಯೋಜಕರಾದ ವಾಮನ್‌ ಮೇಶ್ರಾಮ್‌ ಹೇಳಿದರು.

ನಗರದ ಪುರಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದಅವರು,ಕಾಂಗ್ರೆಸ್‌ ಹಾಗೂ ಬಿಜೆಪಿ ಅಧಿಕಾರದ ಆಸೆಗೆ ಒಳ ಒಪ್ಪಂದ ಮಾಡಿಕೊಂಡು ಇವಿಎಂ ಮೆಷಿನ್‌ಗಳನ್ನು ತಿರುಚಿ ಫಲಿತಾಂಶವನ್ನು ಪರವಾಗಿ ಮಾಡಿಕೊಂಡಿವೆ. ಅಕ್ರಮ ಚುನಾವಣೆಗಳು ನಿಲ್ಲಬೇಕಾದರೆ ಇವಿಎಂ ಬಳಕೆ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟರು.

ಸಂವಿಧಾನದ ಆಶಯಗಳಿಗೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ಬಿಜೆಪಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಹೊರಟಿದೆ. ಕಾಯ್ದೆ ಜಾರಿ ಹಿಂದೆ ಆರ್‌ಎಸ್‌ಎಸ್‌, ಬ್ರಾಹ್ಮಣ್ಯವಾದದ ಕುತಂತ್ರವಿದೆ. ದೇಶದಲ್ಲಿ ಡಿಎನ್‌ಎ ಆಧಾರಿತ ಎನ್‌ಆರ್‌ಸಿ ಜಾರಿಯಾಗಲಿ ಎಂದು ಒತ್ತಾಯಿಸಿದರು.

‘ವೇದ, ಪುರಾಣ, ಮನುಸ್ಮೃತಿ, ಸಂಸ್ಕೃತ, ರಾಮಾಯಣ, ಭಗವದ್ಗೀತೆಯಲ್ಲಿ ಹಿಂದೂ ಶಬ್ದದ ಉಲ್ಲೇಖವಿಲ್ಲ. ಹಿಂದೂ ಶಬ್ಧ ಭಾರತ ಮೂಲದ್ದಲ್ಲ; ಪರ್ಶಿಯನ್ ಭಾಷೆಯಿಂದ ಬಂದಿದ್ದು. ಹಿಂದೂ ಎಂದರೆ ಗುಲಾಮಗಿರಿ ಎಂಬ ಅರ್ಥವಿದೆ’ ಎಂದು ವಾಮನ್ ಮೇಶ್ರಾಮ್‌ ಟೀಕಿಸಿದರು.

ರಾಷ್ಟ್ರೀಯ ಮುಸ್ಲಿಂ ಮೋರ್ಚಾ ಅಧ್ಯಕ್ಷ ಅಬ್ದುಲ್‌ ಹಮೀದ್ ಅಝ್ಹರಿ ಮಾತನಾಡಿ, ಎನ್‌ಆರ್‌ಸಿ, ಎನ್‌ಪಿಎಆರ್‌, ಸಿಎಎ ವಿರುದ್ಧ ಮಾತ್ರ ಹೋರಾಟವಲ್ಲ; ಆರ್‌ಎಸ್‌ಎಸ್‌ ಸಿದ್ಧಾಂತಗಳ ವಿರುದ್ಧವೂ ಹೋರಾಡಬೇಕಿದೆ ಎಂದು ಕರೆ ನೀಡಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನವಿರೋಧಿ ನೀತಿ, ಕಾನೂನುಗಳನ್ನು ಜಾರಿಗೊಳಿಸಿತು. ಆದರೆ, ಜನರು ಬೀದಿಗಿಳಿಯಲಿಲ್ಲ. ಈಗ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಮುಸ್ಲಿಮರು, ದಲಿತರು, ಹಿಂದುಳಿದವರ್ಗದವರು ಬೀದಿಗಿಳಿದಿದ್ದು, ಸರ್ಕಾರದ ನಿದ್ದೆಯನ್ನು ಗೆಡಿಸಿದೆ ಎಂದರು.

ಕದಸಂಸ (ಭೀಮಘರ್ಜನೆ) ರಾಜ್ಯ ಸಂಚಾಲಕ ಉದಯಕುಮಾರ್ ತಲ್ಲೂರು ಮಾತನಾಡಿ, ದಲಿತರು ಬ್ರಾಹ್ಮಣರ ಗುಲಾಮರಾಗಿ ಬದುಕುವುದನ್ನು ನಿಲ್ಲಿಸಿ, ಸ್ವಾವಲಂಬಿಗಳಾಗಬೇಕು. ಸಂವಿಧಾನವನ್ನು ಮನು ಸಂವಿಧಾನವಾಗಿ ಬದಲಿಸಲು ಹೊರಟಿರುವ ಬಿಜೆಪಿಯು ಎನ್‌ಆರ್‌ಸಿ ಜಾರಿಗೆ ಮುಂದಾಗಿದೆ. ಸಂವಿಧಾನ ಒಪ್ಪದವರು ದೇಶಬಿಟ್ಟು ಹೋಗಲಿ ಎಂದು ವಾಗ್ದಾಳಿ ನಡೆಸಿದರು.

ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಆರ್‌ಎಸ್‌ಎಸ್‌, ಬಿಜೆಪಿ ದೇಶವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದು, ನಾವೆಲ್ಲರೂ ದೇಶ ಕಟ್ಟುವ ಕೆಲಸ ಮಾಡೋಣ ಎಂದರು.

ಎನ್‌ಆರ್‌ಸಿ ಮುಸ್ಲಿಮರಿಗೆ ಮಾತ್ರವಲ್ಲ; ದಾಖಲೆ ತೋರಿಸದ ಎಲ್ಲರಿಗೂ ಸಮಸ್ಯೆ ಉಂಟು ಮಾಡಲಿದೆ. ಈಗಾಗಲೇ ಅಸ್ಸಾಂನಲ್ಲಿ 19 ಲಕ್ಷ ಮಂದಿ ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿದ್ದಾರೆ. ದೇಶದಲ್ಲಿ ಮತ್ತೆ ಚಾತುರ್ವರ್ಣ ವ್ಯವಸ್ಥೆ ಜಾರಿಗೊಳಿಸುವುದು ಬಿಜೆಪಿ, ಆರ್‌ಎಸ್‌ಎಸ್‌ ಗುರಿ ಎಂದು ಆರೋಪಿಸಿದರು.

ರಾಷ್ಟ್ರೀಯ ಮೂಲನಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ನಿಶಾ ಮೇಶ್ರಾಮ್ ಮಾತನಾಡಿ, ಪೌರತ್ವ ನೀಡಲು ಕಾಗದವನ್ನು ಕೇಳುತ್ತಿರುವ ಬಿಜೆಪಿಗೆ, ಪ್ರಾಣ ಕೊಡಲು ನಾವೆಲ್ಲ ಸಿದ್ಧರಾಗಬೇಕು ಎಂದರು.

ಸಮಾವೇಶದಲ್ಲಿ ನಸೀಮಾ ಫಾತಿಮಾ, ಅಬ್ದುಲ್ ಅಜೀಜ್ ಉದ್ಯಾವರ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT