ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಂಕಷ್ಟದ ನಡುವೆ ಶುಲ್ಕದ ಬರೆ: ಎನ್‌ಎಸ್‌ಯುಐ ಪ್ರತಿಭಟನೆ

Last Updated 20 ಜುಲೈ 2021, 13:07 IST
ಅಕ್ಷರ ಗಾತ್ರ

ಉಡುಪಿ: ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕರು ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭದಲ್ಲಿ ಖಾಸಗಿ ಶಾಲಾ ಕಾಲೇಜುಗಳ ಮುಖ್ಯಸ್ಥರು ಶುಲ್ಕ ಪಾವತಿಸುವಂತೆ ಒತ್ತಾಯ ಹೇರುತ್ತಿರುವುದು ಖಂಡನೀಯ ಎಂದು ಎನ್‌ಎಸ್‌ಯುಐ ಕಾರ್ಯಕರ್ತರು ಮಂಗಳವಾರ ಮಣಿಪಾಲದ ಟೈಗರ್ ಸರ್ಕಲ್‌ ಬಳಿ ಪ್ರತಿಭಟನೆ ನಡೆಸಿದರು.

ಎನ್‌ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ಸೌರಭ್ ಬಲ್ಲಾಳ್ ಮಾತನಾಡಿ, ಆನ್‌ಲೈನ್ ಕ್ಲಾಸ್ ಹೆಸರಿನಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತಿರುವುದು ಖಂಡನೀಯ. ಲಾಕ್‌ಡೌನ್‌ನಿಂದ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ, ಉದ್ಯಮದಲ್ಲಿ ನಷ್ಟ ಅನುಭವಿಸಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಾರ್ವಜನಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದು ಎಂದರು.

ವಿದ್ಯಾರ್ಥಿಗಳು ಕೋವಿಡ್‌ ಮೊದಲ ಡೋಸ್ ಲಸಿಕೆ ಪಡೆದು ಕಾಲೇಜಿಗೆ ಬರಬಹುದು ಎಂದಾದರೆ, 2ನೇ ಡೋಸ್ ಹಾಕುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದ ಸೌರಭ್‌, ಎಲ್ಲ ವಿದ್ಯಾರ್ಥಿಗಳಿಗೂ 2 ಡೋಸ್‌ ಕೋವಿಡ್ ಲಸಿಕೆ ಹಾಕಬೇಕು. ಈ ಬಗ್ಗೆ ಕಾಲೇಜು ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಇಂತಹ ಧೋರಣೆ ಮುಂದುವರಿದರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸಂಕಷ್ಟದ ಮಧ್ಯೆ ಖಾಸಗಿ ಬಸ್‌ಗಳಲ್ಲಿ ಟಿಕೆಟ್ ದರವನ್ನು ಶೇ 25ರಷ್ಟು ಹೆಚ್ಚಿಸಲಾಗಿದೆ. ತೈಲ ಬೆಲೆ ಏರಿಕೆ ವಿರುದ್ಧ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾಗಿರುವ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಕುಯಿಲಾಡಿ ಸುರೇಶ್ ನಾಯಕ್ ಅವರು ಸರ್ಕಾರವನ್ನು ಪ್ರಶ್ನಿಸಬೇಕು. ತೈಲ ಬೆಲೆ ಏರಿಕೆ ನಷ್ಟವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಮೇಲೆ ಹಾಕುವುದು ಸರಿಯಲ್ಲ ಎಂದರು.

ಶಾಲಾ ಕಾಲೇಜು ಶುಲ್ಕದಲ್ಲಿ ರಿಯಾಯಿತಿ ನೀಡಬೇಕು, ವಿದ್ಯಾರ್ಥಿಗಳಿಗೆ 2 ಡೋಸ್ ಲಸಿಕೆ ಹಾಕಿದ ಬಳಿಕವಷ್ಟೆ ಕಾಲೇಜುಗಳನ್ನು ಆರಂಭಿಸಬೇಕು. ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT