ಉಡುಗೊರೆ ಆಮಿಷ: ಹಣ ವಂಚಕರ ವಶ

ಉಡುಪಿ: ತಂತ್ರಜ್ಞಾನ ಬೆಳೆದಂತೆ ಅಪರಾಧ ಹಾಗೂ ವಂಚನೆಯ ಸ್ವರೂಪಗಳು ಕೂಡ ಬದಲಾಗುತ್ತಿವೆ. ಕಳ್ಳರು ಮನೆಗೆ ಕನ್ನಹಾಕಿ ನಗದು ಚಿನ್ನಾಭರಣ ದೋಚಬೇಕು ಅಂತಿಲ್ಲ. ಅಜ್ಞಾತ ಸ್ಥಳದಲ್ಲಿ ಕುಳಿತು ನೀವು ಕೂಡಿಟ್ಟ ಸಂಪತ್ತನ್ನು ಕಬಳಿಸಬಲ್ಲರು. ಇಂತಹ ಆನ್‌ಲೈನ್ ವಂಚನೆ ಪ್ರಕರಣಗಳು ಈಚೆಗೆ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಸಾರ್ವಜನಿಕರು ಎಚ್ಚರವಾಗಿರಬೇಕು.
ಉಡುಗೊರೆ ಆಮಿಷ: ಮೊಬೈಲ್ ಒಟಿಪಿ, ಬ್ಯಾಂಕ್ ಖಾತೆಯ ವಿವರ, ಡೆಬಿಟ್, ಕ್ರೆಡಿಟ್ ಕಾರ್ಡ್ ನಂಬರ್ ಹಾಗೂ ಪಿನ್ ಪಡೆದು ಖಾತೆಯಿಂದ ಹಣ ದೋಚುತ್ತಿದ್ದ ವಂಚಕರು ಈಗ ವರಸೆ ಬದಲಿಸಿದ್ದಾರೆ. ಫೇಸ್‌ಬುಕ್ ಮೂಲಕ ಸ್ನೇಹ ಬೆಳೆಸಿ, ನಯವಾಗಿ ವಂಚನೆ ಎಸಗುತ್ತಿದ್ದಾರೆ.
ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಹಬ್ಬ–ಹರಿದಿನ ಹೀಗೆ ಯಾವುದಾದರೂ ವಿಶೇಷ ಸಂದರ್ಭ ಮುಂದಿಟ್ಟುಕೊಂಡು ದುಬಾರಿ ಉಡುಗೊರೆ ನೀಡುವುದಾಗಿ ನಂಬಿಸಿ ವಿಶ್ವಾಸದ್ರೋಹ ಎಸಗುತ್ತಿದ್ದಾರೆ.
ವಂಚನೆ ಹೇಗೆ: ‘ಮೊದಲು ನಿಮ್ಮ ಫೇಸ್‌ಬುಕ್ ಖಾತೆಗೆ ವಂಚಕರು ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾರೆ. ಸ್ನೇಹಿತರಾಗಲು ನೀವು ಒಪ್ಪಿಗೆ ಕೊಟ್ಟ ಬಳಿಕ, ಮೆಸೆಂಜರ್‌ನಲ್ಲಿ ಚಾಟ್ ಮಾಡುತ್ತಾರೆ. ಆತ್ಮೀಯವಾಗಿ ಸಂವಹನ ನಡೆಸುತ್ತಾ ಬಹುಬೇಗ ವಿಶ್ವಾಸ ಗಿಟ್ಟಿಸಿ ಬಳಿಕ ಮೋಸದ ಜಾಲ ಬೀಸುತ್ತಾರೆ.
ಹುಟ್ಟುಹಬ್ಬಕ್ಕೆ ವಿದೇಶದಿಂದ ದುಬಾರಿ ಉಡುಗೊರೆ ಕಳುಹಿಸಿದ್ದೇನೆ. ಒಂದೆರಡು ದಿನಗಳಲ್ಲಿ ಕೈಸೇರಲಿದೆ ಎಂದು ಆಸೆ ಹುಟ್ಟಿಸುತ್ತಾರೆ. ಕೆಲವೇ ದಿನಗಳಲ್ಲಿ ಏರ್‌ಪೋರ್ಟ್ ಅಧಿಕಾರಿ ಹೆಸರಿನಲ್ಲಿ ಕರೆ ಮಾಡುವ ವಂಚಕರು, ಪಾರ್ಸೆಲ್‌ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಡಾಲರ್ಸ್‌ಗಳಿದ್ದು, ಬೇಕಾದರೆ ಸ್ವಲ್ಪ ಹಣ ಪಾವತಿಸಬೇಕು ಎಂದು ಬ್ಯಾಂಕ್ ಖಾತೆಯ ವಿವರ ನೀಡುತ್ತಾರೆ.
ಲಕ್ಷ ಸಿಗುವಾಗ ಸಾವಿರಾರು ರೂಪಾಯಿ ಕೊಡುವುದು ಕಷ್ಟವಲ್ಲ ಎಂದು ನಂಬುವ ಸಾರ್ವಜನಿಕರು ವಂಚಕರ ಖಾತೆಗೆ ಹಣ ಹಾಕುತ್ತಾರೆ. ಬಳಿಕ ಮತ್ತೆ ಕರೆ ಮಾಡಿ ತೆರಿಗೆ, ಸಾಗಣೆ ವೆಚ್ಚವಾಗಿ ಹಂತಹಂತವಾಗಿ ಹಣ ಸುಲಿಗೆ ಮಾಡುತ್ತಾರೆ. ನಿಮಗೆ ಮೋಸಹೋಗುತ್ತಿರುವ ಅನುಮಾನ ಬರುವ ಹೊತ್ತಿಗೆ ಮೊಬೈಲ್ ಸ್ವಿಚ್ ಆಫ್ ಆಗುತ್ತದೆ. ಫೇಸ್‌ಬುಕ್ ಫ್ರೆಂಡ್ ಖಾತೆಯೂ ಡಿಲೀಟ್ ಆಗಿರುತ್ತದೆ.
ಎರಡು ಪ್ರಕರಣಗಳು: ಆಗಸ್ಟ್‌ನಲ್ಲಿ ಪಡುಬಿದ್ರಿಯ ನಾಡ್ಸಾಲ್ ಗ್ರಾಮದ ಡೇವಿಡ್ ಪೌಲ್ ಕುಮಾರ್ ಅವರಿಗೆ ಫೇಸ್‌ಬುಕ್‌ನಲ್ಲಿ ಪರಿಚಿತಳಾದ ಜೊನ್ ಶೆರಿ ಮಾಕ್ಸ್‌ವೆಲ್ ಎಂಬಾಕೆ ₹ 3.53 ಲಕ್ಷ ವಂಚಿಸಿದ್ದಾಳೆ. ಕಾರ್ಕಳ ತಾಲ್ಲೂಕು ಅಜೆಕಾರಿನ ಪೂರ್ಣಿಮಾ ಅವರಿಂದ ಡಾ.ಲೀವಿಸ್ ಎಂಬಾಕೆ ₹ 3.90 ಲಕ್ಷ ಹಣ ದೋಚಿದ್ದಾಳೆ.
ಎಚ್ಚರವೇ ಮದ್ದು: ಫೇಸ್‌ಬುಕ್ ಬಳಕೆದಾರರು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸುವಾಗ ಎಚ್ಚರವಾಗಿರಬೇಕು. ವಿದೇಶದಿಂದ ಹಣವನ್ನು ಪಾರ್ಸೆಲ್‌ನಲ್ಲಿ ಕಳುಹಿಸಲು ಸಾಧ್ಯವಿಲ್ಲ. ಉಡುಗೊರೆ ಆಮಿಷಕ್ಕೆ ಬಲಿಯಾಗಿ ಕಷ್ಟಪಟ್ಟು ದುಡಿದ ಹಣ ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳುತ್ತಾರೆ ಸೆನ್ ಅಪರಾಧ ಠಾಣೆಯ ಪೊಲೀಸರು.
‘ಓಎಲ್‌ಎಕ್ಸ್ ಮೋಸ’
ಈಚೆಗೆ ಓಎಲ್‌ಎಕ್ಸ್ ಬಳಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಆಗಸ್ಟ್‌ನಲ್ಲಿ ಇಬ್ಬರು ಹಣ ಕಳೆದುಕೊಂಡಿದ್ದಾರೆ. ಸೇನೆಯ ಅಧಿಕಾರಿ ಹೆಸರಿನಲ್ಲಿ ಓಎಲ್‌ಎಕ್ಸ್‌ನಲ್ಲಿ ಖಾತೆ ತೆರೆದು, ಬೈಕ್ ಅಥವಾ ಕಾರು ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿ, ಅತಿ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರುವುದಾಗಿ ನಂಬಿಸಿ, ಖಾತೆಗೆ ಹಣ ಹಾಕಿಸಿಕೊಂಡು ಮೋಸ ಮಾಡುತ್ತಿದ್ದಾರೆ. ವಂಚನೆ ಎಸಗಿದ ಬಳಿಕ ಓಎಲ್‌ಎಕ್ಸ್ ಖಾತೆ ರದ್ದು ಮಾಡುವುದರಿಂದ ವಂಚಕರ ಸುಳಿವು ಪತ್ತೆ ಸಾಧ್ಯವಿಲ್ಲ. ಮೋಸ ಹೋದವರು ತಡವಾಗಿ ದೂರು ನೀಡಲು ಬರುವುದರಿಂದ ಸಾಕ್ಷ್ಯಗಳ ಕೊರತೆಯಿಂದ, ತಾಂತ್ರಿಕ ಸಮಸ್ಯೆಗಳಿಂದ ಪ್ರಕರಣ ಕೂಡ ದಾಖಲಿಸಲಾಗುವುದಿಲ್ಲ ಎನ್ನುತ್ತಾರೆ ಪೊಲೀಸರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.