ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ನಲ್ಲಿ ಕರಾವಳಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

ಹಲವು ವರ್ಷಗಳಿಂದ ನಡೆಯುತ್ತಿದ್ದ ಕಾಮಗಾರಿ: ಅಂತಿಮ ಹಂತ ತಲುಪಿದ ರಸ್ತೆ ನಿರ್ಮಾಣ
Last Updated 19 ಅಕ್ಟೋಬರ್ 2018, 13:50 IST
ಅಕ್ಷರ ಗಾತ್ರ

ಉಡುಪಿ: ಮೂರು ವರ್ಷಗಳಿಂದ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದ್ದ ಕರಾವಳಿ ಬೈಪಾಸ್‌ ಜಂಕ್ಷನ್‌ ಮೇಲ್ಸೇತುವೆ ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದ್ದು, ವಿದ್ಯುತ್‌ ದೀಪ ಹಾಗೂ ಡಾಂಬರೀಕರಣ ಕೆಲಸ ಭರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನವೆಂಬರ್‌ ಮೊದಲವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.

ರಾಷ್ಟ್ರೀಯ ಹೆದ್ದಾರಿಯ ಕರಾವಳಿ ಜಂಕ್ಷನ್‌ ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದರಿಂದ ಮಲ್ಪೆ ಕಡೆಗೆ ಸಾಗುವ ವಾಹನ ಸವಾರರಿಗೆ ತೊಂದರೆ ಎದುರಾಗಿತ್ತು. ಕಿರಿದಾದ ಸರ್ವಿಸ್‌ ರಸ್ತೆಯಲ್ಲೇ ಎಲ್ಲ ವಾಹನಗಳೂ ಸಾಗಬೇಕಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ರಾಷ್ಟ್ರೀಯ ಹೆದ್ದಾರಿ ಮೇಲೆ ಸಾಗುವ ಎಲ್ಲ ವಾಹನಗಳೂ ಸೇವಾ ರಸ್ತೆಯಲ್ಲೇ ಸಾಗಬೇಕಿದ್ದರಿಂದ ಅಪಘಾತಳು ಸರ್ವೇ ಸಾಮಾನ್ಯವಾಗಿದ್ದವು.

ಪರಿಣಾಮ ವಾಹನ ಸವಾರರು ಕಿರಿಕಿರಿ ಅನುಭವಿಸಬೇಕಿತ್ತು. ಈಗ ಕಾಮಗಾರಿ ಶೇ 90ರಷ್ಟು ಮುಕ್ತಾಯವಾಗಿದ್ದು ಶೀಘ್ರವೇ ವಾಹನ ಸಂಚಾರಕ್ಕೆ ಮೇಲ್ಸೇತುವೆ ಮುಕ್ತವಾಗಲಿದ್ದು, ಸವಾರರಲ್ಲಿ ನೆಮ್ಮದಿ ಮೂಡಿದಿದೆ.

ಮಲ್ಪೆ, ಉಡುಪಿ ನಗರ, ಮಂಗಳೂರು, ಕುಂದಾಪುರ ಕಡೆ ಸಾಗುವ ಎಲ್ಲ ವಾಹನಗಳು ಕರಾವಳಿ ಜಂಕ್ಷನ್ ಮೂಲಕವೇ ಹಾದುಹೋಗಬೇಕು. ಪ್ರಮುಖ ಸಂಪರ್ಕ ಕೇಂದ್ರವಾದ ಕರಾವಳಿ ಬೈಪಾಸ್‌ನಲ್ಲಿ ಮೇಲ್ಸೇತುವೆ ಕಾಮಗಾರಿ 2015ರಲ್ಲಿ ಆರಂಭಗೊಂಡಿತ್ತು. ಮೂರು ವರ್ಷಗಳು ಕಳೆದರೂ ಸಂಚಾರಕ್ಕೆ ಮುಕ್ತವಾಗಿರಲಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಹಲವು ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸಿದ್ದವು. ಇದೀಗ ಫ್ಲೈಓವರ್‌ ಕಾಮಗಾರಿ ಕೊನೆಯ ಹಂತಕ್ಕೆ ಬಂದು ನಿಂತಿದೆ.

ಬೈಪಾಸ್‌ ಪ್ರದೇಶದಲ್ಲಿ ಒಟ್ಟು 400 ಮೀಟರ್‌ ನಷ್ಟು ರಸ್ತೆ ಕಾಮಗಾರಿಗಾಗಿ ಬಳಸಿಕೊಂಡಿದ್ದು ಅದರಲ್ಲಿ 300 ಮೀಟರ್‌ ಅಳತೆಯಲ್ಲಿ ಫ್ಲೈಓವರ್‌ ನಿರ್ಮಾಣವಾಗುತ್ತಿದೆ. ಫ್ಲೈಓವರ್‌ ನಿರ್ಮಾಣಕ್ಕೆ ಕಾಂಕ್ರೀಟ್‌ ತುಂಬಿಸಲಾಗಿದೆ. ವಾಹನಗಳು ವ್ಯವಸ್ಥಿತವಾಗಿ ಸಾಗಲು ಡಿವೈಡರ್ ನಿರ್ಮಿಸಲಾಗಿದೆ. ಉಡುಪಿಯಿಂದ ಮಲ್ಪೆಕಡೆಗೆ ಸಾಗುವ ವಾಹನಗಳಿಗೆ ಅಂಡರ್‌ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ನವಯುಗ ಸಂಸ್ಥೆ ಎಂಜಿನಿಯರ್‌ ತಿಳಿಸಿದ್ದಾರೆ.

ಮೇಲ್ಸೇತುವೆ ಕಾಮಗಾರಿಯಿಂದಾಗಿ ಉಡುಪಿ ಹಾಗೂ ಮಲ್ಪೆ ನೇರ ಸಂಪರ್ಕ ರಸ್ತೆ ಬಂದ್ ಆಗಿತ್ತು. ಉಡುಪಿ ಕಡೆಯಿಂದ ಮಲ್ಪೆ ಕಡೆಗೆ ಸಾಗಬೇಕಿದ್ದ ವಾಹನ ಚಾಲಕರು ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ 200 ಮೀಟರ್‌ ಸಾಗಿ ಪೆಟ್ರೊಲ್‌ ಬಂಕ್‌ ಸಮೀಪ ಬಲಕ್ಕೆ ತಿರುಗಿ ಮಲ್ಪೆಗೆ ಸಾಗಬೇಕಾಗಿತ್ತು.

ಅದೇ ರೀತಿ ಮಲ್ಪೆಯಿಂದ ಉಡುಪಿ ಕಡೆಗೆ ಸಾಗಬೇಕಿದ್ದಲ್ಲಿ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ 200 ಮೀಟರ್‌ ಸಾಗಿ ಶಾರದಾ ಹೊಟೇಲ್‌ ಬಳಿ ಬಲಕ್ಕೆ ತಿರುವು ಪಡೆದು ಉಡುಪಿ ಕಡೆಗೆ ಸಾಗಬೇಕಾಗಿತ್ತು. ಫ್ಲೈ ಓವರ್ ಸಂಚಾರ ಮುಕ್ತವಾದ ನಂತರ ವಾಹನಗಳು ಸುತ್ತಿಬಳಸಿ ಹೋಗಬೇಕಾದ ಅವಶ್ಯಕತೆ ಇಲ್ಲ ಎನ್ನುತ್ತಾರೆ ವಾಹನ ಸವಾರ ಅಶೋಕ ರಾವ್‌ ತಿಳಿಸಿದರು.

ಕರಾವಳಿ ಜಂಕ್ಷನ್‌ನಲ್ಲಿ ಕಿರಿದಾದ ಸೇವಾ ರಸ್ತೆಯಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಸಣ್ಣ ಮಳೆಗೂ ಸೇವಾ ರಸ್ತೆ ನೀರಿನಿಂದ ಆವೃತ್ತವಾಗುತ್ತಿತ್ತು. ಪರಿಣಾಮ ಸವಾರರು ಮಳೆಗಾಲದಲ್ಲಿ ಕಿರಿಕಿರಿ ಅನುಭವಿಸುತ್ತಿದ್ದರು. ವಾಹನಗಳ ಸಂಚಾರ ಹೆಚ್ಚಾಗಿದ್ದ ಕಾರಣ ಸೇವಾ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದವು. ಒಟ್ಟಾರೆ ಮೇಲ್ಸೇತುವೆ ಕಾಮಗಾರಿ ಪೂರ್ಣವಾಗುತ್ತಿರುವುದು ನೆಮ್ಮದಿ ತಂದಿದೆ ಎನ್ನುತ್ತಾರೆ ಸ್ಥಳೀಯರಾದ ರಾಜೇಶ್ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT