ಜಾತಿ, ಧರ್ಮ ಮೀರಿ ಗೆದ್ದ ಆಸ್ಕರ್

ಶನಿವಾರ, ಮೇ 25, 2019
28 °C
ಉಡುಪಿ ಲೋಕಸಭಾ ಕ್ಷೇತ್ರದಿಂದ 5 ಬಾರಿ ಆಯ್ಕೆಯಾದ ಏಕೈಕ ಸಂಸದೀಯ ಪಟು

ಜಾತಿ, ಧರ್ಮ ಮೀರಿ ಗೆದ್ದ ಆಸ್ಕರ್

Published:
Updated:
Prajavani

ಉಡುಪಿ: ಉಡುಪಿ ಲೋಕಸಭಾ ಕ್ಷೇತ್ರದ ಹಿಂದಿನ ಚುನಾವಣೆಗಳನ್ನು ವಿಶ್ಲೇಷಿಸಿದರೆ ಕುತೂಹಲಗಳ ಕಣಜ ಗೋಚರಿಸುತ್ತದೆ. ಬಿಲ್ಲವರು, ಬಂಟರು, ಮೊಗವೀರ ಸಮುದಾಯದವರ ಪ್ರಾಬಲ್ಯವಿರುವ ಉಡುಪಿ ಲೋಕಸಭಾ ಕ್ಷೇತ್ರದಿಂದ ಅಲ್ಪಸಂಖ್ಯಾತ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದ ಆಸ್ಕರ್ ಫರ್ನಾಂಡಿಸ್‌ ಸತತವಾಗಿ 5 ಬಾರಿ ಗೆದ್ದಿರುವುದು ಕ್ಷೇತ್ರದ ವಿಶೇಷ.‌

ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ 1980ರಿಂದ 1996ರವರೆಗೆ ನಡೆದ ಉಡುಪಿ ಲೋಕಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಆಸ್ಕರ್ ನಿರಂತರ ಗೆಲುವು ಸಾಧಿಸಿದ್ದಾರೆ. ಅವರ ಗೆಲುವಿನ ದಾಖಲೆಯನ್ನು ಇದುವರೆಗೂ ಯಾರೂ ಸರಿಗಟ್ಟಲು ಸಾಧ್ಯವಾಗಿಲ್ಲ. ಜಾತಿ, ಧರ್ಮ ಮೀರಿ ಆಸ್ಕರ್‌ಗೆ ಮತದಾರರ ಒಲವು ಸಿಕ್ಕಿದ್ದು ಹೇಗೆ ಎಂಬ ಕುರಿತು ಅವರ ಒಡನಾಡಿಗಳು ಮಾತನಾಡಿದ್ದಾರೆ.

‘ಉಡುಪಿ ಜಿಲ್ಲೆಯಲ್ಲಿ ಕ್ರಿಶ್ಚಿಯನ್‌ ಸಮುದಾಯದವರ ಸಂಖ್ಯೆ ತೀರಾ ಕಡಿಮೆ. ಆದರೂ, ಜಾತಿ, ಧರ್ಮ ಆಸ್ಕರ್ ಗೆಲುವಿಗೆ ಅಡ್ಡಿಯಾಗಲಿಲ್ಲ. ಮತದಾರರು ಜಾತಿ, ಧರ್ಮ ಮೀರಿ ವೈಯಕ್ತಿಕ ವರ್ಚಸ್ಸು, ವೈಕ್ತಿತ್ವದ ಆಧಾರದ ಮೇಲೆ ಅವರನ್ನು ಗುರುತಿಸುತ್ತಿದ್ದರು’ ಎನ್ನುತ್ತಾರೆ ಆಸ್ಕರ್ ಒಡನಾಡಿ ಕೆ.ಕೃಷ್ಣರಾಜ ಸರಳಾಯ.

ಅಂದಿನ ಚುನಾವಣಾ ಪ್ರಚಾರ, ಬಹಿರಂಗ ಸಮಾವೇಶಗಳು ಇಂದಿನಂತೆ ದ್ವೇಷಪೂರಿತವಾಗಿರಲಿಲ್ಲ. ರಾಜಕೀಯ ಹೊರತಾಗಿ ವೈಯಕ್ತಿಕ ಟೀಕೆಗಳು ತೀರಾ ಕಡಿಮೆ ಎನ್ನಬಹುದು. ಆಸ್ಕರ್ ಚುನಾವಣಾ ಭಾಷಣವಂತೂ ಎಲ್ಲೆ ಮೀರಿದ್ದನ್ನು ಕಂಡಿಲ್ಲ. ವಿರೋಧ ಪಕ್ಷದವರೂ ಅವರನ್ನು ಗೌರವಿಸುತ್ತಿದ್ದರು. ಈ ಎಲ್ಲ ಕಾರಣಗಳಿಂದ ಸತತವಾಗಿ ಮತದಾರರ ಮನಸ್ಸನ್ನು ಗೆಲ್ಲುತ್ತಲೇ ಬಂದರು ಎನ್ನುತ್ತಾರೆ ಸರಳಾಯ.

ಹಿಂದೆಲ್ಲ ಕೋಮುವಾದ, ಜಾತಿ, ಧರ್ಮದ ವಿಚಾರಗಳು ಮುನ್ನಲೆಗೆ ಬರುತ್ತಿರಲಿಲ್ಲ. ಪಕ್ಷದ ಸಿದ್ಧಾಂತ, ವೈಯಕ್ತಿಕ ವರ್ಚಸ್ಸು, ಅಭಿವೃದ್ಧಿ ವಿಚಾರಗಳು ಮಾತ್ರ ಮಹತ್ವ ಪಡೆದುಕೊಳ್ಳುತ್ತಿದ್ದವು. ಹಾಗಾಗಿ, ಆಸ್ಕರ್ ಅವರಂತಹ ಜಾತ್ಯತೀತ ನಾಯಕರು ನಿರಂತರವಾಗಿ ಗೆಲ್ಲಲು ಸಾಧ್ಯವಾಯಿತು ಎನ್ನುತ್ತಾರೆ ಹಿರಿಯ ಕಾಂಗ್ರೆಸ್‌ ಮುಖಂಡರಾದ ಜನಾರ್ದನ ತೋನ್ಸೆ.

ಆಸ್ಕರ್ ಗೆಲುವಿನ ಹಾದಿ:

1980ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ (ಐ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಸ್ಕರ್ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದರು. ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ವೇದವ್ಯಾಸ ಶ್ರೀನಿವಾಸ ಆಚಾರ್ಯ (ವಿ.ಎಸ್‌.ಆಚಾರ್ಯ) ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿದ್ದರು.

1984ರಲ್ಲಿ ನಡೆದ ಚುನಾವಣೆಯಲ್ಲೂ ಬಿಜೆಪಿಯಿಂದ ಕಣಕ್ಕಿಳಿಸಿದ್ದ ಕೆ.ಎಸ್‌.ಹೆಗ್ಡೆ ವಿರುದ್ಧ ದೊಡ್ಡ ಅಂತರದ ಗೆಲುವು ಪಡೆದರು. ಚಲಾವಣೆಯಾದ ಒಟ್ಟಾರೆ ಮತಗಳ ಪೈಕಿ ಶೇ 62ರಷ್ಟು ಆಸ್ಕರ್ ಪಾಲಾಗಿತ್ತು.‌

1989ರ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಎಂ.ಸಂಜೀವ ಅವರ ವಿರುದ್ಧ, 1991ರಲ್ಲಿ ಬಿಜೆಪಿಯ ಎ.ರುಕ್ಮಯ್ಯ ಪೂಜಾರಿ ವಿರುದ್ಧ, 1996ರಲ್ಲಿ ಬಿಜೆಪಿಯ ಐ.ಎಂ.ಜಯರಾಮಶೆಟ್ಟಿ ವಿರುದ್ಧ ಆಸ್ಕರ್ ವಿಜಯ ಸಾಧಿಸಿದರು. ಬಳಿಕ 1998ರಲ್ಲಿ ಬಿಜೆಪಿಯ ಜಯರಾಮಶೆಟ್ಟಿ ಅವರ ವಿರುದ್ಧ ಸೋಲು ಅನುಭವಿಸಿದ ಬಳಿಕ ಆಸ್ಕರ್ ಲೋಕಸಭೆಗೆ ಸ್ಪರ್ಧಿಸಲಿಲ್ಲ. ಆದರೆ, ರಾಜ್ಯಸಭಾ ಸದಸ್ಯರಾಗಿ ಹಲವು ಸಲ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !