ಶುಕ್ರವಾರ, ಡಿಸೆಂಬರ್ 3, 2021
20 °C
ಸಾರ್ವಜನಿಕರು ರಸ್ತೆಗಳಲ್ಲಿ ಜೀವ ಕೈಲಿಡಿದು ಓಡಾಡಬೇಕಾದ ಅನಿವಾರ್ಯತೆ

ಉಡುಪಿ: ಪಾದಚಾರಿ ಮಾರ್ಗ ಅತಿಕ್ರಮಣ; ರಸ್ತೆಗಳೇ ಕಾಲುದಾರಿ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಉಡುಪಿ ನಗರ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಬೇಕಿದ್ದ ವಾಹನಗಳು ಪಾದಚಾರಿ ಮಾರ್ಗಗಳಲ್ಲಿ ನಿಲ್ಲುತ್ತಿವೆ. ಪಾದಚಾರಿ ಮಾರ್ಗಗಳಲ್ಲಿ ಸಂಚರಿಸಬೇಕಿದ್ದ ಸಾರ್ವಜನಿಕರು ರಸ್ತೆಗಳ ಮೇಲೆ ನಡೆಯುತ್ತಿದ್ದಾರೆ. ಇಂಥ ಪರಿಸ್ಥಿತಿಗೆ ಕಾರಣ, ಪಾದಚಾರಿ ಮಾರ್ಗಗಳ ಅತಿಕ್ರಮಣ.

ನಗರದಲ್ಲಿರುವ ರಸ್ತೆಗಳು ಇರುವುದು ವಾಹನಗಳು ಸಂಚರಿಸುವುದಕ್ಕೊ ಅಥವಾ ಸಾರ್ವಜನಿಕರು ಓಡಾಡುವುದಕ್ಕೊ ಎಂಬ ಅನುಮಾನ ಜನಸಾಮಾನ್ಯರನ್ನು ಕಾಡುತ್ತಿದೆ. ದಶಕಗಳ ಈ ಸಮಸ್ಯೆಗೆ ನಗರಾಡಳಿತ ಯಾವಾಗ ಮುಕ್ತಿ ನೀಡುತ್ತದೆ ಎನ್ನುತ್ತಲೇ ಪ್ರತಿನಿತ್ಯ ಜೀವ ಕೈಲಿಡಿದುಕೊಂಡು ಓಡಾಡುತ್ತಿದ್ದಾರೆ ಸಾರ್ವಜನಿಕರು.

ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಉಡುಪಿಯೂ ಒಂದು ಎಂಬ ಹೆಗ್ಗಳಿಕೆ ಒಂದೆಡೆಯಾದರೆ, ಬೆಳೆಯುತ್ತಿರುವ ನಗರಕ್ಕೆ ಅಗತ್ಯ ಮೂಲಸೌಕರ್ಯಗಳಿಲ್ಲ ಎಂಬ ನಿರಾಶೆ ಮತ್ತೊಂದೆಡೆ ಇದೆ. ಮಾದರಿ ನಗರ ಎನಿಸಿಕೊಳ್ಳಲು ಇರಬೇಕಾದ ಸೌಲಭ್ಯಗಳಿಲ್ಲ ಎಂಬ ಕೊರಗು ಕಾಡುತ್ತಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉಡುಪಿ ಹಾಗೂ ಮಲ್ಪೆ ನಗರಗಳಲ್ಲಿ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್‌ ವ್ಯವಸ್ಥೆ ಸರಿಯಾಗಿ ಇಲ್ಲ. ಪರಿಣಾಮ, ಸವಾರರು ಅನಿವಾರ್ಯವಾಗಿ ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಪಾದಚಾರಿಗಳು ಜೀವ ಪಣಕ್ಕಿಟ್ಟು ರಸ್ತೆಗಳ ಮೇಲೆ ನಡೆಯಬೇಕಾಗಿದೆ. ಹೀಗೆ ನಡೆಯುವಾಗ, ಅಪಘಾತಗಳು ಸಂಭವಿಸಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ, ಹಲವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ.

ಪಾದಚಾರಿ ಮಾರ್ಗ ವ್ಯಾಪಾರಿಗಳಿಂದಲೂ ಅತಿಕ್ರಮಣವಾಗಿದ್ದು, ಜಾಹೀರಾತು ಫಲಕಗಳನ್ನು ಮಾರ್ಗದಲ್ಲಿ ತಂದಿಡಲಾಗುತ್ತಿದೆ. ಇದರಿಂದ ಓಡಾಡಲು ಅಡ್ಡಿಯಾಗಿದ್ದು, ಈ ಬಗ್ಗೆ ಪ್ರಶ್ನಿಸಿದರೆ ದಾರಿಹೋಕರ ಮೇಲೆಯೇ ವ್ಯಾಪಾರಿಗಳು ಮುಗಿಬೀಳುತ್ತಾರೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಹಿರಿಯ ನಾಗರಿಕರಾದ ಸತ್ಯನಾರಾಯಣ ರಾವ್‌.

ಮಲ್ಪೆಯಿಂದ ಉಡುಪಿಯ ಕರಾವಳಿ ಜಂಕ್ಷನ್‌ವರೆಗಿನ ಮುಖ್ಯ ರಸ್ತೆಯಲ್ಲಿ ನಡೆಯುವುದು ‘ಸಾವಿನ ಜತೆಗಿನ ನಡಿಗೆ’ಯಾಗಿದ್ದು, ಒಂದಾದ ಮೇಲೊಂದರಂತೆ ವೇಗವಾಗಿ ಬರುವ ವಾಹನಗಳು ಮೈಮೇಲೆ ಬಂದಂತೆ ಅನುಭವವಾಗುತ್ತದೆ ಎನ್ನುತ್ತಾರೆ ಆದಿ ಉಡುಪಿಯ ರಫೀಕ್‌.

ಮಲ್ಪೆ ಮುಖ್ಯ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಪ್ರವಾಸಿಗರ ವಾಹನಗಳು ಓಡಾಡುತ್ತವೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಮೀನು ಸಾಗಿಸುವ ಕಂಟೈನರ್‌ಗಳು ಕೂಡ ನಿರಂತರವಾಗಿ ಸಂಚರಿಸುತ್ತವೆ. ಇವುಗಳ ಮಧ್ಯೆ, ಮಲ್ಪೆ ಹಾಗೂ ಉಡುಪಿ ನಡುವೆ ಸಂಚರಿಸುವವರು ಓಡಾಡುವುದು ಹೇಗೆ, ನಡೆಯಲು ಜಾಗ ಎಲ್ಲಿದೆ ಎಂದು ಪ್ರಶ್ನಿಸುತ್ತಾರೆ ಅವರು. 

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾಗುತ್ತಿದ್ದು, ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಾರೆ. ಕಾಮಗಾರಿ ಆರಂಭ ಯಾವಾಗ, ಸುಸಜ್ಜಿತ ರಸ್ತೆ, ಪಾದಚಾರಿ ಮಾರ್ಗ ನಿರ್ಮಾಣವಾಗುವುದು ಯಾವಾಗ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಒಟ್ಟಾರೆ, ಜೀವ ಕೈಲಿಡಿದು ನಡೆಯುವುದೊಂದೇ ಸದ್ಯಕ್ಕಿರುವ ದಾರಿ ಎಂದು ಅಸಹಾಯಕತೆ ಹೊರಹಾಕುತ್ತಾರೆ ಸ್ಥಳೀಯರಾದ ವಸಂತ್ ಸಾಲಿಯಾನ್.

ಉಡುಪಿ–ಮಣಿಪಾಲದವರೆಗಿನ ವಿಶಾಲವಾದ ರಾಷ್ಟ್ರೀಯ ಹೆದ್ದಾರಿ 169 ‘ಎ’ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಕರಾವಳಿ ಜಂಕ್ಷನ್‌ನಿಂದ ಕಲ್ಸಂಕದವರೆಗಿನ ಪಾದಚಾರಿ ಮಾರ್ಗದ ಮಧ್ಯೆಯೇ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಮೊಬೈಲ್ ನೋಡುತ್ತಾ, ಹಾಡು ಕೇಳುತ್ತಾ ಇಲ್ಲಿ ನಡೆದುಕೊಂಡು ಹೋದರೆ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುವುದು ಖಚಿತ. ಕಣ್ಣಿದ್ದವರಿಗೇ ಓಡಾಡಲು ಕಷ್ಟವಿರುವ ಈ ಪಾದಚಾರಿ ಮಾರ್ಗದಲ್ಲಿ ದೃಷ್ಟಿಹೀನರಂತೂ ಓಡಾಡಲು ಸಾಧ್ಯವೇ ಇಲ್ಲ.

ಜತೆಗೆ, ರಸ್ತೆಯ ಬದಿಯಲ್ಲಿರುವ ವ್ಯಾಪಾರಿಗಳು ಪಾದಚಾರಿ ಮಾರ್ಗದಲ್ಲಿ ಜಾಹೀರಾತು ಫಲಕ ಹಾಗೂ ಸರಕುಗಳನ್ನು ತಂಡು ಅಡ್ಡಲಾಗಿ ಇಡುತ್ತಾರೆ. ಕೆಲವರು ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ಸಣ್ಣ ವ್ಯಾಪಾರಿಗಳು ಮೊಬೈಲ್ ಕ್ಯಾಂಟೀನ್‌ ಇಟ್ಟುಕೊಂಡಿದ್ದಾರೆ. ತರಕಾರಿ ವ್ಯಾಪಾರಿಗಳು, ಪ್ಲಾಸ್ಟಿಕ್ ಚೇರ್‌, ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡುವವರು ಕೂಡ ಪಾದಚಾರಿ ಮಾರ್ಗಕ್ಕೆ ಬಂದು ಕೂತಿದ್ದಾರೆ. ಇದರಿಂದ ಓಡಾಡುವುದೇ ಕಷ್ಟವಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ನಗರದದೊಳಗಿರುವ ಸಿಟಿ ಬಸ್‌ ನಿಲ್ದಾಣ, ಸರ್ವೀಸ್‌ ಬಸ್ ನಿಲ್ದಾಣ, ಕೆಸ್‌ಆರ್‌ಟಿಸಿ ನಿಲ್ದಾಣದ ಎದುರಿಗಿರುವ ರಸ್ತೆ, ಸಿಟಿ ಶಾಪಿಂಗ್ ಕಾಂಪ್ಲೆಕ್ಸ್‌, ಮಾರುತಿ ವಿಥಿಕಾ ರಸ್ತೆ, ಕೆ.ಎಂ ಮಾರ್ಗ, ಚಿತ್ತರಂಜನ್ ಸರ್ಕಲ್‌ ಸೇರಿದಂತೆ ಹಲವೆಡೆಗಳಲ್ಲಿ ಪಾದಚಾರಿ ಮಾರ್ಗದ ಕುರುಹುಗಳು ಕಾಣದಂತೆ ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಈ ರಸ್ತೆಗಳಲ್ಲಿ ನಿತ್ಯ ಕಚೇರಿಗೆ ತೆರಳುವವರು, ಮಾರುಕಟ್ಟೆಗೆ ಖರೀದಿಗೆ ಬರುವವರು, ಕೃಷ್ಣಮಠಕ್ಕೆ ಹೋಗುವವರು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪ್ರಯಾಸದಿಂದ ನಡೆದಾಡಬೇಕು.

ನಡೆದಾಡುವವರ ಕಷ್ಟಕ್ಕೆ ಮುಂದಾದರೂ ನಗರಾಡಳಿತ ಸ್ಪಂದಿಸಲಿದೆಯೇ ಎಂಬುದು ನಾಗರಿಕರ ನಿರೀಕ್ಷೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು