ಬ್ರಹ್ಮಾವರ: ಜಿಲ್ಲೆಯ ಹಲವೆಡೆ ಅದರಲ್ಲೂ ಕಾಪು ತಾಲ್ಲೂಕಿನ ಅಲ್ಲಲ್ಲಿ ಭತ್ತದ ಕೃಷಿಯಲ್ಲಿ ಸೈನಿಕ ಹುಳುವಿನ ಬಾಧೆ ಪ್ರಾರಂಭವಾಗಿರುವುದು ಕಂಡುಬಂದಿದೆ.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ. ಧನಂಜಯ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಕಾಪು ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಅರುಣಕುಮಾರ್ ಅವರ ಸಹಾಯದೊಂದಿಗೆ ಬಡಾಗ್ರಾಮದ ಭಾಸ್ಕರ ಶೆಟ್ಟಿ ಅವರ ನೇಜಿ ಮಾಡುತ್ತಿರುವ ಗದ್ದೆಗೆ ಕೀಟಶಾಸ್ತ್ರ ವಿಜ್ಞಾನಿ ಡಾ.ರೇವಣ್ಣ ರೇವಣ್ಣವರರ್, ಮಣ್ಣು ವಿಜ್ಞಾನಿ ಡಾ.ಜಯಪ್ರಕಾಶ ಅವರ ತಂಡ ಭೇಟಿ ನೀಡಿ ಹುಳುವಿನ ಚಟುವಟಿಕೆ, ಬಾಧೆಯನ್ನು ಪರಿಶೀಲಿಸಿ ಹತೋಟಿ ಕ್ರಮಗಳನ್ನುತಿಳಿಸಿದ್ದಾರೆ.
ಸೈನಿಕಹುಳು ಗುಂಪು-ಗುಂಪಾಗಿ ರಾತ್ರಿ ಹೊತ್ತು ಹರಿದಾಡಿಕೊಂಡು ರೈತರ ಕಣ್ಣಿಗೆ ಕಾಣದಂತೆ ಭತ್ತದ ಸಸಿಗಳನ್ನು, ಎಲೆ, ಬುಡ ಕತ್ತರಿಸಿ ತಿನ್ನುತ್ತವೆ. ಈ ಹುಳು ಎಲ್ಲ ಕಡೆ ಇದ್ದರೂ ಕೆಲವೊಂದು ಸೂಕ್ತ ಪ್ರದೇಶಗಳಲ್ಲಿ ಮಾತ್ರ ಪೀಡೆಯಾಗಿ ಆರ್ಥಿಕ ನಷ್ಟ ಉಂಟುಮಾಡುತ್ತವೆ.
ಗುಂಪಾಗಿ ಬೆಳೆ ಹಾಳು ಮಾಡಲು ಕಾರಣಗಳೇನು?
ಈ ಹುಳುಗಳು ಭತ್ತ ಅಲ್ಲದೆ ನಾನಾ ತರಹದ ಬೆಳೆ ಹಾಗೂ ಕಳೆಗಳ ಮೇಲೆ ಕಡಿಮೆ ಸಂಖ್ಯೆಯಲ್ಲಿ ಜೀವಿಸುತ್ತಿರುತ್ತವೆ. ಆದರೆ ಇವುಗಳಿಗೆ ಸೂಕ್ತ ವಾತಾವರಣ ನಿರ್ಮಾಣವಾದರೆ ಮಾತ್ರ ಸೈನಿಕರಂತೆ ಯುದ್ದಸನ್ನದ್ದವಾದಂತೆ ಪ್ರಮುಖವಾಗಿ ಸಸಿ ಹಂತದಲ್ಲಿರುವ ಭತ್ತಕ್ಕೆ ಹೆಚ್ಚು ದಾಳಿ ಮಾಡಿ ರೈತರಿಗೆ ಆರ್ಥಿಕ ನಷ್ಟ ಉಂಟುಮಾಡುತ್ತವೆ. ಈ ಬಾರಿ ಭತ್ತದ ನೇರಬಿತ್ತನೆ, ತಡವಾಗಿ ಮಳೆ ಶುರು ಆಗಿರುವುದರಿಂದ ಇದರ ಹಾವಳಿ ಹೆಚ್ಚು ಕಂಡು ಬಂದಿದೆ.
ಶ್ರೀ ಪದ್ಧತಿ ಕೃಷಿ ಮಾಡಿದ ಭತ್ತದ ಗದ್ದೆಗಳಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬರುವ ಸಾಧ್ಯತೆ ಹೆಚ್ಚು. ಈ ಹುಳುವಿನ ಬಾಧೆ ಸಸಿ ಹಂತದಲ್ಲಿ ಪ್ರಾರಂಭವಾಗಿ ನಾಟಿ ಮಾಡಿದ 6–7 ವಾರಗಳವರೆಗೆ ಹೆಚ್ಚಿನ ದಾಳಿ ಮಾಡುತ್ತವೆ. ಜುಲೈ-ಸೆಪ್ಟೆಂಬರ್ ತಿಂಗಳವರೆಗೆ ಹಾನಿ ಮುಂದುವರೆಯಬಹುದು ಹಾಗೂ ಕೆಲವು ಸಂದರ್ಭಗಳಲ್ಲಿ ಭತ್ತ ತೆನೆ ಕಟ್ಟುವ ಹಂತದಲ್ಲಿಯೂ ಕೂಡ ಸೈನಿಕ ಹುಳು ಹಾನಿ ಮಾಡಿರುವ ನಿದರ್ಶನಗಳು ಸಾಕಷ್ಟಿವೆ.
ಸಮಗ್ರ ಹತೋಟಿ ಕ್ರಮಗಳು :
ಭತ್ತ ಕೊಯ್ಲು ಆದ ನಂತರ ಮಾಗಿ ಉಳುಮೆ, ಕಳೆಗಳ ನಿಯಂತ್ರಣ ಮಾಡಬೇಕು. ಭತ್ತದ ಗದ್ದೆಯಲ್ಲಿ ನೀರು ನಿಲ್ಲಿಸಲು ನೀರಿನ ಕೊರತೆಯಾಗಬಾರದು. ಸೈನಿಕ ಹುಳುವಿನ ಪ್ರೌಢ ಕೀಟಗಳನ್ನು ವಿದ್ಯುತ್ ದೀಪಕ್ಕೆ ಆಕರ್ಷಿಸಿ ನಾಶ ಮಾಡಬೇಕು. ಗದ್ದೆಯಲ್ಲಿ ಕೆಲಸ ಮಾಡುವಾಗ ಕಣ್ಣಿಗೆ ಕಂಡರೆ ಕೈಯಿಂದ ಹೆಕ್ಕಿ ನಾಶಮಾಡಬೇಕು. ತೆಂಗಿನ ನಾರಿನ ಹಗ್ಗ ಭತ್ತದ ಬೆಳೆಯ ಮೇಲೆ ಎಳೆದಾಡಿ ಹುಳುಗಳನ್ನುನೀರಿನಲ್ಲಿ ಬೀಳಿಸಬೇಕು. ಭತ್ತದ ಗದ್ದೆಯಲ್ಲಿ ಸೀಮೆಎಣ್ಣೆ ಅಥವಾ ಡೀಸೆಲ್ (ಎಕರೆಗೆ 1 ಲೀ.ರಷ್ಟು) ಬೂದಿಯೊಂದಿಗೆ ಮಿಶ್ರ ಮಾಡಿ ಭತ್ತದ ಗದ್ದೆಯಲ್ಲಿ ನಿಂತ ನೀರಿನ ಮೇಲೆ ಚೆಲ್ಲಬೇಕು.
ಇಷ್ಟೆಲ್ಲಾ ಮಾಡಿದರೂ ಹುಳುಗಳು ಕಡಿಮೆಯಾಗದೇ ಗದ್ದೆಯಲ್ಲಿ ಹೆಚ್ಚಾಗುತ್ತಿದ್ದರೆ 2ರಿಂದ 3 ಮಿ.ಲೀ. ಅಜಾಡಿರಕ್ಟಿನ್ (ಬೇವಿನಎಣ್ಣೆ) ಅಥವಾ 5 ಗ್ರಾಂ ಬ್ಯಾಸಿಲ ಸ್ಥೂರೆಂಜೆ ನೆಸಿಸ್ ಒಂದು ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಅಥವಾ ಒಂದು ಎಕರೆಗೆ 10 ಕಿ.ಗ್ರಾಂ. ಮೆಲಾಥಿಯಾನ್ 5 ಅಥವಾ 10 ಕಿ.ಗ್ರಾಂ. ಕ್ಲೋರ್‌ಪೈರಿಫಾಸ್ ಶೇ.1.5 ಧೂಳಿಕರಿಸಬೇಕು. ಅಥವಾ 2 ಮಿ.ಲೀ. ಕ್ಲೋರ್‌ಪೈರಿಫಾಸ್ 20 ಇ.ಸಿ ಅಥವಾ 2 ಮಿ.ಲೀ. ಕಿನಾಲ್‌ಫಾಸ್ 25 ಇ.ಸಿ. ಅಥವಾ 2 ಮಿ.ಲೀ. ಸೈಪರ್‌ಮೆಥ್ರಿನ್ ಒಂದು ಲೀ. ನೀರಿಗೆ ಬೆರೆಸಿ ಭತ್ತದ ಬೆಳೆಗೆ ಸಿಂಪಡಿಸಿದರೆ ಸೈನಿಕ ಹುಳುಗಳನ್ನು ಸಮಗ್ರವಾಗಿ ಹತೋಟಿ ಮಾಡಬಹುದು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಮಾಹಿತಿಗೆ ಡಾ.ರೇವಣ್ಣ ರೇವಣ್ಣವರ್(9480421791) ಕೀಟ ಶಾಸ್ತ್ರಜ್ಞ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಇವರನ್ನು ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.