ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ ಸಾಂಸ್ಕೃತಿಕ ಸೊಗಡು ಅನಾವರಣ

ಕಲಾವಿದ ಕೆ.ವಿ.ಶಂಕರ್ ಅವರ ನೈಜ ವ್ಯಕ್ತಿ ಚಿತ್ರಗಳ ಪ್ರದರ್ಶನ
Last Updated 19 ಅಕ್ಟೋಬರ್ 2019, 14:31 IST
ಅಕ್ಷರ ಗಾತ್ರ

ಉಡುಪಿ: ಉತ್ತರ ಕರ್ನಾಟಕ ಭಾಗದ ಸಾಂಸ್ಕೃತಿಕ ಶ್ರೀಮಂತಿಕೆ ಕರಾವಳಿಯಲ್ಲಿ ಅನಾವರಣಗೊಂಡಿದೆ. ಖ್ಯಾತ ಕಲಾವಿದ ಹುಬ್ಬಳ್ಳಿಯ ಕೆ.ವಿ.ಶಂಕರ್ ಅವರ ಕುಂಚದಲ್ಲಿ ಅರಳಿದ ಸುಂದರ ಕಲಾಕೃತಿಗಳು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಕಲಾ ಪ್ರದರ್ಶನ ನಗರದ ದೃಷ್ಟಿ ಕಲಾ ಗ್ಯಾಲರಿಯಲ್ಲಿ ಶನಿವಾರದಿಂದ ಆರಂಭವಾಗಿದ್ದು, ಕಲಾಸಕ್ತರು ಭೇಟಿ ನೀಡಬಹುದು.

ಉತ್ತರ ಕರ್ನಾಟಕದ ಗ್ರಾಮೀಣ ಚಿತ್ರಣವನ್ನು ಸುಂದರವಾಗಿ ಹಾಗೂ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದ್ದು, ಕಲಾ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸುಡುಗಾಡು ಸಿದ್ಧರ ವೇಷಧಾರಿಗಳು, ಬಹುರೂಪಿಗಳು, ಜೋಗತಿಯರು, ಮೊಹರಂ ವೇಷಧಾರಿಗಳು, ಜಾನಪದ ಕಲಾವಿದರ ಚಿತ್ರಗಳು ಪ್ರದರ್ಶನದಲ್ಲಿವೆ.

ಜತೆಗೆ, ಗ್ರಾಮೀಣ ಭಾಗದ ಬದುಕು, ಬವಣೆಯ ನೈಜ ಚಿತ್ರಗಳು ಗಮನ ಸೆಳೆಯುತ್ತಿವೆ. ಪ್ರದರ್ಶನದ ಕುರಿತು ಮಾತನಾಡಿದ ಕಲಾವಿದ ಕೆ.ವಿ.ಶಂಕರ್‌, ‘ಇದೊಂದು ಸಾಂಸ್ಕೃತಿಕ ವಿನಿಮಯವಿದ್ದಂತೆ. ಉತ್ತರ ಕರ್ನಾಟಕದ ಚಿತ್ರಣವನ್ನು ಕರಾವಳಿಗರಿಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ಅ.21ರವರೆಗೆ ಪ್ರದರ್ಶನ ನಡೆಯಲಿದೆ. ಕಲಾಕೃತಿಗಳು ಮಾರಾಟಕ್ಕೆ ಲಭ್ಯವಾಗಿದ್ದು, ಆಸಕ್ತರು ಖರೀದಿಸಬಹುದು. 20ರಂದು ಮಧ್ಯಾಹ್ನ 2ಕ್ಕೆ ಕಲಾ ಪ್ರಾತ್ಯಕ್ಷಿಕೆ ತೋರಿಸಲಾಗುವುದು. ಕಲಿಕೆಯ ಆಸಕ್ತಿ ಇರುವವರು ಭಾಗವಹಿಸಬಹುದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಪಿ ನಿಶಾ ಜೇಮ್ಸ್‌, ಮನಸ್ಸಿನ ಒತ್ತಡ ನಿವಾರಣೆಗೆ ಕಲೆ ಸಹಕಾರಿ. ಕಲೆಗೆ ಹಾಗೂ ಕಲಾವಿದರಿಗೆ ಅಗತ್ಯ ಪ್ರೋತ್ಸಾಹ ಸಿಗಬೇಕು ಎಂದರು.

ಆರ್ಟಿಸ್ಟ್‌ ಫೋರಂನ ಅಧ್ಯಕ್ಷ ರಮೇಶ್‌ ರಾವ್ ಮಾತನಾಡಿ, ಪ್ರತಿಭಾವಂತ ಹಾಗೂ ಉದಯೋನ್ಮುಖ ಕಲಾವಿದರನ್ನು ಗುರುತಿಸಿ ಅವರ ಚಿತ್ರಗಳಿಗೆ ವೇದಿಕೆಯನ್ನು ಕಲ್ಪಿಸುವ ಪ್ರಯತ್ನವನ್ನು ಸಂಸ್ಥೆ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯರಾದ ವಿಜಯೇಂದ್ರ ವಸಂತ್, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಕಾಶ್‌ ಚಂದ್ರ ಶೆಟ್ಟಿ, ಸಾಕು ಪಾಂಗಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT