ಬುಧವಾರ, ಸೆಪ್ಟೆಂಬರ್ 22, 2021
22 °C
ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮೀನುಕೃಷಿಗೆ ಜಲಾಶಯ ಪ್ರದೇಶ ಸಮಗ್ರ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಜ್ಯದಲ್ಲಿ 5.7 ಲಕ್ಷ ಹೆಕ್ಟೇರ್ ಜಲಾಶಯ ಪ್ರದೇಶವಿದ್ದು, ಶೇ 12ರಷ್ಟು ಮಾತ್ರ ಮೀನು ಕೃಷಿಗೆ ಬಳಕೆಯಾಗುತ್ತಿದ್ದು, ಮುಂದೆ ಪೂರ್ತಿ ಪ್ರಮಾಣದಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಬಳಸಿಕೊಂಡು ರಾಜ್ಯವನ್ನು ಮೀನುಗಾರಿಕೆಯಲ್ಲಿ ಪ್ರಥಮ ಸ್ಥಾನಕ್ಕೇರಿಸುವ ಗುರಿ ಇದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳವಾರ ಪುರಭವನದಲ್ಲಿ ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಪಂಜರ ಮೀನು ಕೃಷಿ ತರಬೇತಿ ಕಾರ್ಯಗಾರದಲ್ಲಿ ಇಲಾಖೆಯ ಕಾರ್ಯಕ್ರಮಗಳ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿ, ‘ಪಂಜರ ಮೀನುಕೃಷಿಗೆ ಉತ್ತೇಜನ ನೀಡಿ 10,000ಕ್ಕೂ ಹೆಚ್ಚು ಜನರಿಗೆ ಸ್ವ ಉದ್ಯೋಗ ಕಲ್ಪಿಸಲು 30 ಜಿಲ್ಲೆಗಳಲ್ಲಿಯೂ ಪಂಜರ ಕೃಷಿ ಕಾರ್ಯಾಗಾರ ನಡೆಸಿ ತರಬೇತಿ ನೀಡಲಾಗುತ್ತಿದೆ ಎಂದರು.

ಪಂಜರ ಮೀನು ಕೃಷಿ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಪ್ರಧಾನಿ ನರೇಂದ್ರ ಮೋದಿ ಆತ್ಮ ನಿರ್ಭರ ಯೋಜನೆಯಡಿ ಕೊರೊನಾ ಸಂಕಷ್ಟಕ್ಕೆ ಒಳಗಾದವರಿಗೆ ಸ್ವಉದ್ಯೋಗ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ದೇಶದಾದ್ಯಂತ ಮೀನುಗಾರಿಕಾ ಚಟುವಟಿಕೆಗಳಿಗೆ ₹ 20 ಸಾವಿರ ಕೋಟಿ ವೆಚ್ಚದ ಯೋಜನೆ ಅನುಷ್ಠಾನವಾಗುತ್ತಿದೆ. ಇದರಲ್ಲಿ ರಾಜ್ಯಕ್ಕೆ ₹ 3,000 ಕೋಟಿ ಸಿಗಲಿದೆ ಎಂದರು.

ಕರಾವಳಿಯಲ್ಲಿ ಮೀನುಕೃಷಿ ಉದ್ಯಮವಾಗಿದ್ದು, ಜನರಿಗೆ ಪೌಷ್ಟಿಕ ಆಹಾರ ಒದಗಿಸುವುದರ ಜತೆಗೆ ಮೀನಿನ ರಫ್ತಿನಿಂದ ವಿದೇಶಿ ವಿನಿಮಯವೂ ಹೆಚ್ಚುತ್ತಿದೆ ಎಂದರು.

ಕಡಲ ಮೀನುಗಾರಿಕೆ ಜತೆ ಒಳನಾಡು ಮೀನುಗಾರಿಕೆಗೂ ಸರ್ಕಾರ ಉತ್ತೇಜನ ನೀಡುತ್ತಿದೆ. ಹಿಂದೆ ಪಂಜರ ಕೃಷಿಯಲ್ಲಿ ಸಿಗಡಿ ಕೃಷಿ ಮಾತ್ರ ಮಾಡಲಾಗುತ್ತಿತ್ತು, ಈಗ ಕುರುಡಿ, ಕಾಂಬೇರಿ, ಪೋಬಿಯಾ ಮೀನು ಸೇರಿದಂತೆ ಇತರ ಮೀನುಗಳ ಕೃಷಿ ಸಾಧ್ಯವಿದ್ದು, ಹೆಚ್ಚಿನ ಆದಾಯ ಪಡೆಯಬಹುದು ಎಂದರು.

ಪಂಜರ ಮೀನುಕೃಷಿ ತರಬೇತಿಗೆ 400ಕ್ಕೂ ಹೆಚ್ಚು ಜನ ಆಸಕ್ತಿ ತೋರಿಸಿದ್ದು, ಮೀನುಗಾರಿಕೆ ಇಲಾಖೆಯು ವೈಜ್ಞಾನಿಕ ಮೀನುಕೃಷಿಗೆ ನೀಡುವ ಸಲಹೆಗಳನ್ನು ಅರಿತು ಲಾಭ ಪಡೆಯಬೇಕು ಎಂದರು.

ಕೊರೊನಾ ಬಿಕ್ಕಟ್ಟಿನಿಂದಾಗಿ ಸಂಕಷ್ಟ ಎದುರಾಗಿದ್ದು ಕೆಲವು ದೇಶಗಳಲ್ಲಿ ಆಹಾರದ ಕೊರತೆ ಉಂಟಾಗಿದೆ. ಆದರೆ ನಮ್ಮ ದೇಶದಲ್ಲಿ ಆಹಾರದ ಕೊರತೆ ಇಲ್ಲ. ಕೃಷಿಕರು, ಮೀನುಗಾರರು, ನೇಕಾರರ ಶ್ರಮ ಇದಕ್ಕೆ ಕಾರಣ ಎಂದರು.

ಸಾರ್ವಜನಿಕರು ಸೋಂಕು ನಿರ್ಲಕ್ಷ್ಯಮಾಡಿ ಅನವಶ್ಯಕ ಓಡಾಡಬಾರದು, ಅಂತರ ಕಾಯ್ದುಕೊಳ್ಳಬೇಕು.  ರೋಗ ಲಕ್ಷಣ ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು. ರೋಗ ಉಲ್ಬಣಗೊಂಡಾಗ ಚಿಕಿತ್ಸೆ ಪಡೆಯಲು ಮುಂದಾಗಬಾರದು ಎಂದರು.

ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ದಿನೇಶ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕಾಮತ್, ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.