ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾಪುರ ಪರ್ಯಾಯಕ್ಕೆ ಸಿಂಗಾರಗೊಂಡ ಕೃಷ್ಣನೂರು

ಕೋವಿಡ್‌ ಹಿನ್ನೆಲೆಯ್ಲಲಿ ಸರಳ ಸಂಪ್ರದಾಯಬದ್ಧ ಉತ್ಸವ: ವಿದ್ಯುತ್ ದೀಪಾಲಂಕಾರಗಳಿಂದ ಸಿಂಗಾರಗೊಂಡಿದೆ ಉಡುಪಿ
Last Updated 15 ಜನವರಿ 2022, 16:23 IST
ಅಕ್ಷರ ಗಾತ್ರ

ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವಕ್ಕೆ ಕೃಷ್ಣನೂರು ಸಿಂಗಾರಗೊಂಡಿದೆ. ಪರ್ಯಾಯ ಉತ್ಸವದ ಮೇಲೆ ಕೋವಿಡ್‌–19 ಕರಿನೆರಳು ಆವರಿಸಿದ್ದರೂ ಸಂಪ್ರದಾಯಬದ್ಧ ಹಾಗೂ ಸರಳ ಪರ್ಯಾಯಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ವಿದ್ಯುತ್ ದೀಪಾಲಂಕಾರ:

ಕೃಷ್ಣಾಪುರ ಪರ್ಯಾಯ ಮಹೋತ್ಸವಕ್ಕೆ ಇಡೀ ನಗರ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ನಾಡಹಬ್ಬದ ಮಾದರಿಯಲ್ಲಿ ನಗರ ಅಲಂಕೃತಗೊಂಡಿದೆ. ಗುಂಡಿಬಿದ್ದಿದ್ದ ರಸ್ತೆಗಳಿಗೆ ಡಾಂಬಾರ್ ಹಾಕಲಾಗಿದೆ. ರಸ್ತೆಯ ಇಕ್ಕೆಲಗಳನ್ನು ಶುಚಿಗೊಳಿಸಲಾಗಿದೆ. ಒಟ್ಟಾರೆ ನಗರ ನವವಧುವಂತೆ ಸಿಂಗಾರಗೊಂಡಿದೆ.

ಸ್ವಾಗತ ಗೋಪುರಗಳ ನಿರ್ಮಾಣ:

ಪರ್ಯಾಯ ಉತ್ಸವ ಆರಂಭವಾಗುವ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ 13 ಸ್ವಾಗತ ಗೋಪುರಗಳನ್ನು ನಿರ್ಮಾಣ ಮಾಡಲಾಗಿದೆ. 6 ಕಂಬಗಳನ್ನೊಳಗೊಂಡ 5 ಗೋಪುರ, ನಾಲ್ಕು ಕಂಬಗಳನ್ನು ಹೊಂದಿರುವ ಮೂರು ಗೋಪುರ, ಎರಡು ಕಂಬಗಳನ್ನು ಹೊಂದಿರುವ ಐದು ಸ್ವಾಗತ ಗೋಪುರಗಳನ್ನು ರಥಬೀದಿಯ ಸುತ್ತಲೂ ಹಾಕಲಾಗಿದೆ. ಎಲ್ಲ ಗೋಪುರಗಳು ಕಣ್ಮನ ಸೆಳೆಯುತ್ತಿವೆ.

ರಥಬೀದಿಗೆ ಸಿಂಗಾರ:

ಕೃಷ್ಣಮಠದ ರಥಬೀದಿ ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುತ್ತಿವೆ. ಅಷ್ಟಮಠಗಳು ಸೇರಿದಂತೆ ಇಡೀ ರಥಬೀದಿ ಪರಿಸರವನ್ನು ಅಲಂಕೃತಗೊಳಿಸಲಾಗಿದೆ. ಕೃಷ್ಣಾಪುರ ಮಠಕ್ಕೆ ಸುಣ್ಣ ಬಣ್ಣ ಬಳಿದು ಸುಂದರ ಸ್ಪರ್ಶ ನೀಡಲಾಗಿದೆ. ಮಠದ ಪಾರ್ಕಿಂಗ್ ಸ್ಥಳದಲ್ಲಿ ಹೊರೆಕಾಣಿಕೆ ಉಗ್ರಾಣವನ್ನು ಮಾಡಲಾಗಿದ್ದು, ಜ.10ರಿಂದ 16ರವರೆಗೆ ಭಕ್ತರಿಂದ, ಸಂಘ ಸಂಸ್ಥೆಗಳಿಂದ ಹೊರೆಕಾಣಿಕೆಯನ್ನು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ.

ಜ.18ರಂದು ಸರ್ವಜ್ಞ ಪೀಠಾರೋಹಣ:

ಜ.18ರಂದು ಮಧ್ಯರಾತ್ರಿ ಪರ್ಯಾಯ ಮೆರವಣಿಗೆ ಸೇರಿದಂತೆ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಅಂದು ನಸುಕಿನ 2.15ಕ್ಕೆ ಕಾಪುವಿನ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ಮಾಡಲಿರುವ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು 2.30ಕ್ಕೆ ಉಡುಪಿಯ ಜೋಡುಕಟ್ಟೆ ಪ್ರವೇಶಿಸಲಿದ್ದಾರೆ. 2.45ಕ್ಕೆ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆ ನೆರವೇರಲಿದ್ದು, 3 ಗಂಟೆಗೆ ಪರ್ಯಾಯ ಮೆರವಣಿಗೆ ಆರಂಭವಾಗಲಿದೆ. 4.15ಕ್ಕೆ ಮೆರವಣಿಗೆ ರಥಬೀದಿ ಪ್ರವೇಶಿಸಲಿದ್ದು, 4.30ಕ್ಕೆ ಕನಕನ ಕಿಂಡಿಯಲ್ಲಿ ಶ್ರೀಗಳು ದೇವರ ದರ್ಶನ ಮಾಡಿ, 4.45ಕ್ಕೆ ಚಂದ್ರಮೌಳೀಶ್ವರ, 5ಕ್ಕೆ ಅನಂತೇಶ್ವರ, ಮಧ್ವಾಚಾರ್ಯರ ದರ್ಶನ ಮಾಡಲಿದ್ದಾರೆ. ಬೆಳಗಿನ ಜಾವ 5.25ಕ್ಕೆ ಕೃಷ್ಣಮಠ ಪ್ರವೇಶಿಸಿ ದೇವರ ದರ್ಶನ ಮಾಡಿ ಪೂಜೆ ಮಾಡಲಿದ್ದಾರೆ. 5.35ಜಕ್ಕೆ ಚಂದ್ರಶಾಲೆಯಲ್ಲಿ ಮಾಲಿಕೆ ಮಂಗಳಾರತಿ ನಡೆದು, 4.45ಕ್ಕೆ ಮನ್ಮಧ್ವಾಚಾರ್ಯ ಕರಚಿತ ಅಕ್ಷಯಪಾತ್ರೆ, ಬೆಳ್ಳಿಯ ಸುಟ್ಟುಗ ಸ್ವೀಕರಿಸಲಿದ್ದಾರೆ. 5.55ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಬಳಿಕ 6.15ಕ್ಕೆ ಪರ್ಯಾಯ ಶ್ರೀಗಳಿಂದ ಬಡುಗಮಾಳಿಗೆಯ ಅರಳು ಗದ್ದುಗೆಯಲ್ಲಿ ಗಂಧಾಧ್ಯುಪಚಾರ, ಪಟ್ಟಕಾಣಿಕೆ, ಮಾಲಿಕೆ ಮಂಗಳಾರತಿ ನಡೆಯಲಿದೆ. 6.45ಕ್ಕೆ ರಾಜಾಂಗಣದಲ್ಲಿ ಅಷ್ಟಮಠಾಧೀಶರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪರ್ಯಾಯ ದರ್ಬಾರ್ ನಡೆದು, ಮಹಾಪೂಜೆ, ಪಲ್ಲಪೂಜೆ, ಅನ್ನ ಸಂತರ್ಪಣೆ, ಸಭಾ ಕಾರ್ಯಕ್ರಮ ರಾತ್ರಿ ಪೂಜೆ, ಬ್ರಹ್ಮರಥೋತ್ಸವದ ಮೂಲಕ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಳ್ಳಲಿವೆ.

ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಸೀಮಿತ ಸಂಖ್ಯೆಯಲ್ಲಿ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಉತ್ಸವ ನಡೆಯಲಿದೆ. ನಾಡಿನ ಗಣ್ಯರು, ಸಾಹಿತಿಗಳು, ವಿದ್ವಾಂಸರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜ.22ರವರೆಗೆ ಪ್ರತಿನಿತ್ಯ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೈಟ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳು ರಾತ್ರಿ 9ರೊಳಗೆ ಮುಕ್ತಾಯಗೊಳ್ಳಲಿವೆ ಎಂದು ಕೃಷ್ಣಾಪುರ ಮಠ ತಿಳಿಸಿದೆ.

ನಾಲ್ಕನೇ ಬಾರಿ ಸರ್ವಜ್ಞ ಪೀಠಾರೋಹಣ

ಅಷ್ಠಮಠಗಳ ಯತಿಗಳ ಪೈಕಿ ಹಿರಿಯ ಯತಿಗಳಾಗಿರುವ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರಿಗೆ ಇದು ನಾಲ್ಕನೇ ಪರ್ಯಾಯ. ಮೂರು ಪರ್ಯಾಯಗಳನ್ನು ಸರಳ ಹಾಗೂ ದೇವರಿಗೆ ಪ್ರಿಯವಾಗುವ ರೀತಿಯಲ್ಲಿ ನೆರವೇರಿಸಿದ ಹಿರಿಮೆ ಕೃಷ್ಣಾಪುರ ಮಠಾಧೀಶರದ್ದು. ಆಡಂಬರಕ್ಕೆ ಹೆಚ್ಚು ಒತ್ತು ನೀಡದೆ, ಕೃಷ್ಣನ ಪೂಜೆಗೆ, ಧಾರ್ಮಿಕ ಆಚರಣೆಗಳಿಗೆ ಆದ್ಯತೆ ನೀಡುವ ಶ್ರೀಗಳು ಈ ಬಾರಿಯೂ ಸರಳ, ಅರ್ಥಪೂರ್ಣ ಪರ್ಯಾಯದ ಸಂಕಲ್ಪ ಮಾಡಿದ್ದಾರೆ. ಜ.18, 2022ರಿಂದ ಜ.17, 2024ರವರೆಗೂ ಕೃಷ್ಣಾಪುರ ಮಠದ ಪರ್ಯಾಯ ಅವಧಿ ಇರಲಿದೆ. ದ್ವಿಭುಜ ಕಾಳೀಯ ಮರ್ಧನ ಕೃಷ್ಣದೇವರ ಸಹಿತ ನರಸಿಂಹ ದೇವರು ಕೃಷ್ಣಾಪುರ ಮಠದ ಪಟ್ಟದ ದೇವರ ಮೂರ್ತಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT