ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಸಾಗರ ಶ್ರೀಗಳ ಚತುರ್ಥ ಪರ್ಯಾಯ ಸಂಭ್ರಮ

ಕೃಷ್ಣಾಪುರ ಮಠದ ಗುರು ಪರಂಪರೆಯಲ್ಲಿ 34ನೇ ಯತಿ; ಸರಳ ವ್ಯಕ್ತಿತ್ವದ ಸ್ವಾಮೀಜಿ
Last Updated 15 ಜನವರಿ 2022, 16:17 IST
ಅಕ್ಷರ ಗಾತ್ರ

ಉಡುಪಿ: ಮಧ್ವಾಚಾರ್ಯರು ದ್ವಾರಕೆಯ ರುಕ್ಮಿಣೀಕರಾರ್ಚಿತ ಕಡೆಗೋಲು ಕೃಷ್ಣನ ಪ್ರತಿಮೆಯನ್ನು ಉಡುಪಿಯಲ್ಲಿ ಪ್ರತಿಷ್ಟಾಪಿಸಿ ಪೂಜೆಗಾಗಿ ಎಂಟು ಯತಿಗಳನ್ನು ನೇಮಿಸಿ ಪೂಜಾ ಪರ್ಯಾಯಕ್ಕೆ ನಾಂದಿ ಹಾಡಿದರು. ಉತ್ತರ ಬದರಿಕಾಶ್ರಮದಲ್ಲಿ ವೇದವ್ಯಾಸರು ನೀಡಿದ ದಿವ್ಯ ಪ್ರತಿಮೆಗಳನ್ನು ಮಧ್ವಚಾರ್ಯರು ತಮ್ಮ ಶಿಷ್ಯರಿಗೆ ನೀಡಿ ಅನುಗ್ರಹಿಸಿದರು. ಈ ಪ್ರತಿಮೆಗಳು ಅಷ್ಟಮಠಗಳ ಪಟ್ಟದ ದೇವರಾಗಿ ಶತಮಾನಗಳಿಂದಲೂ ಪೂಜೆಗೊಳ್ಳುತ್ತಿದೆ.

ಕೃಷ್ಣಾಪುರ ಮಠದ ಗುರುಪರಂಪರೆ

ಜನಾರ್ದನ ತೀರ್ಥರು: ಕೃಷ್ಣಾಪುರ ಮಠದ ಮೂಲಯತಿಗಳಾದ ಜನಾರ್ದನ ತೀರ್ಥರು ನರಸಿಂಹದೇವರ ಅನನ್ಯ ಉಪಾಸಕರು. ಆಚಾರ್ಯರೇ ಸ್ವತಃ ನರಸಿಂಹದೇವರ ಪ್ರತಿಮೆ ಅನುಗ್ರಹಿಸಿದರು ಎಂಬ ಐತಿಹ್ಯವಿದೆ. ಹಾಗಾಗಿ, ಕೃಷ್ಣಾಪುರಮಠದಲ್ಲಿ ಪಟ್ಟದದೇವರಿಗೆ ಸಲ್ಲುವ ಪ್ರತಿ ಪೂಜೆ, ನೈವೇದ್ಯ, ಉಪಚಾರಾದಿಗಳು ನರಸಿಂಹದೇವರಿಗೂ ಸಲ್ಲುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಜನಾರ್ದನ ತೀರ್ಥರು 1329ರಲ್ಲಿ ಕಾಶೀಕ್ಷೇತ್ರದಲ್ಲಿ ಹರಿಪಾದ ಸೇರಿದರು. ಅವರ ಬಳಿಕ ವತ್ಸಾಂಕ ತೀರ್ಥರು, ವಾಗೀಶತೀರ್ಥರು, ಲೋಕೇಶತೀರ್ಥರು, ಲೋಕನಾಥ ತೀರ್ಥರು, ಲೋಕಪೂಜ್ಯ ತೀರ್ಥರು, ವಿದ್ಯಾಧಿರಾಜ ತೀರ್ಥರು, ವಿಶ್ವಾಧಿರಾಜ ತೀರ್ಥರು, ವಿಶ್ವಾಧೀಶ ತೀರ್ಥರು, ವಿಶ್ವೇಶ ತೀರ್ಥರು, ವಿಶ್ವವಂದ್ಯ ತೀರ್ಥರು, ವಿಶ್ವರಾಜತೀರ್ಥರು, ಧರಣೀಧರ ತೀರ್ಥರು, ಧರಾಧರ ತೀರ್ಥರು, ಪ್ರಜ್ಞಾನಮೂರ್ತಿ ತೀರ್ಥರು ಕೃಷ್ಣಾಪುರ ಮಠಾಧೀಶರಾಗಿದ್ದರು.

ನಂತರ ತಪೋಮೂರ್ತಿ ತೀರ್ಥರು, ಸುರೇಶ್ವರ ತೀರ್ಥರು, ಜಗನ್ನಾಥ ತೀರ್ಥರು, ಸುರೇಶ ತೀರ್ಥರು, ವಿಶ್ವಪುಂಗವ ತೀರ್ಥರು, ವಿಶ್ವವಲ್ಲಭತೀರ್ಥರು, ವಿಶ್ವಭೂಷಣ ತೀರ್ಥರು, ಯಾದವೇಂದ್ರ ತೀರ್ಥರು, ಪ್ರಜ್ಞಾನಮೂರ್ತಿ ತೀರ್ಥರು, ವಿದ್ಯಾಧಿರಾಜ ತೀರ್ಥರು, ವಿದ್ಯಾಮೂರ್ತಿತೀರ್ಥರು, ವಿದ್ಯಾವಲ್ಲಭ ತೀರ್ಥರು, ವಿದ್ಯೆಂದ್ರ ತೀರ್ಥರು, ವಿದ್ಯಾನಿಧಿ ತೀರ್ಥರು, ವಿದ್ಯಾಸಮುದ್ರ ತೀರ್ಥರು, ವಿದ್ಯಾಧೀಶ ತೀರ್ಥರು, ವಿದ್ಯಾಪೂರ್ಣ ತೀರ್ಥರು, ವಿದ್ಯಾರತ್ನ ತೀರ್ಥರು ಹಾಗೂ ಪ್ರಸ್ತುತ ಕೃಷ್ಣಾಪುರದ ಮಠದ 34ನೇ ಯತಿಯಾಗಿ ವಿದ್ಯಾಸಾಗರ ತೀರ್ಥರು ಪೀಠ ಅಲಂಕರಿಸಿದ್ದಾರೆ.

ವಿದ್ಯಾಸಾಗರ ತೀರ್ಥರ ಹಿನ್ನೆಲೆ:

ಕೃಷ್ಣಾಪುರ ಮಠದ ಪೀಠಾಧಿಪತಿಯಾಗಿರುವ ವಿದ್ಯಾಸಾಗರ ತೀರ್ಥರ ಪೂರ್ವಾಶ್ರಮದ ಹೆಸರು ರಮಾಪತಿ. ತಂದೆ ಶ್ರೀಪತಿ ತಂತ್ರಿ, ತಾಯಿ ಜಾನಕಿ. ಪುತ್ತಿಗೆ ಮಠದ ಸುಜ್ಞಾನೇಂದ್ರ ತೀರ್ಥರಿಂದ ಸೆ.3, 1971ರಲ್ಲಿ ಸನ್ಯಾಸಾಶ್ರಮ ದೀಕ್ಷೆಪಡೆದು, ಆಶ್ರಮದ ನಂತರ ಸೋದೆವಾದಿರಾಜ ಮಠದ ವಿಶ್ವೋತ್ತಮ ತೀರ್ಥರಿಂದ ಮಧ್ವಸಿದ್ದಾಂತ ವೇದ, ವೇದಾಂತಗಳ ಪಾಠ ಮಾಡಿಸಿಕೊಂಡರು.

ವಿಶ್ವೋತ್ತಮ ತೀರ್ಥರ ತೃತೀಯ ಪರ್ಯಾಯದಲ್ಲಿ ವಾದಿರಾಜರ ಗುರ್ವರ್ತ ದೀಪಿಕಾ ಸಹಿತ ಶ್ರೀಮನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಮಂಗಳ ಮಹೋತ್ಸವ ನೆರವೇರಿಸಿದರು. ವ್ಯಾಕರಣ ಶಾಸ್ತ್ರದಲ್ಲಿ ನಿಷ್ಣಾತರಾಗಿರುವ ಯತಿಗಳು, ವಾದಿರಾಜರ ಋಜುತ್ವದಲ್ಲಿ ಅಪಾರ ದೀಕ್ಷೆ ಹಾಗೂ ಶಾಸ್ತ್ರ ಸಂಪ್ರದಾಯದಲ್ಲಿ ಪೂರ್ಣನಂಬಿಕೆ ಹೊಂದಿದವರು. ಮಿತಭಾಷಿಗಳು ಹಾಗೂ ಏಕಾಂತಪ್ರಿಯರಾಗಿರುವ ವಿದ್ಯಾಸಾಗರ ಯತಿಗಳು ವೃತಾನುಷ್ಠಾನ ಜಪಪೂಜೆಯಲ್ಲಿ ವಿಶೇಷ ಅನುಸಂಧಾನ ಮಾಡಿದ್ದಾರೆ.

ಪರ್ಯಾಯದ ಅವಧಿಯಲ್ಲಿ ಶಿಥಿಲವಾಗಿದ್ದ ಕೃಷ್ಣಮಠದ ವಿವಿಧ ಕಟ್ಟಡಗಳ ಕಾಮಗಾರಿಗಳನ್ನು ಮಾಡಿಸಿದ್ದಾರೆ. ವೃಂದಾವನ, ಗೋಶಾಲೆ ಹಾಗೂ ಸುಬ್ರಮಣ್ಯ ಗುಡಿಯ ನವೀಕರಣ, ನಿರಂತರ ಅನ್ನದಾನ ,ಜ್ಞಾನ ಸತ್ರ, ಸನಾತನ ಸಂಸ್ಕೃತಿಗೆ ಪೂರಕವಾದ ತರಗತಿ, ತರಬೇತಿಗಳ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿದ್ದಾರೆ. ಉಡುಪಿಯ ಮುಖ್ಯಪ್ರಾಣ ದೇವರಿಗೆ ವಜ್ರಕವಚ ಸಮರ್ಪಣೆ ಮಾಡಿದ್ದು, ಕಡಿಯಾಳಿಯಲ್ಲಿ ಶ್ರೀಕೃಷ್ಣ ಪ್ರತಿಷ್ಠಾನದಿಂದ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜು ಮನ್ನಡೆಸುತ್ತಿದ್ದಾರೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ವಿದ್ಯಾಸಾಗರತೀರ್ಥ ಶ್ರೀಗಳ ಕೊಡುಗೆ ದೊಡ್ಡದು. ಶಿರೂರು ಮಠದ ಲಕ್ಷ್ಮೀವರತೀರ್ಥರಿಗೆ ಹಲವು ವರ್ಷಗಳ ಕಾಲ ಪಾಠ ಹೇಳಿದವರು ವಿದ್ಯಾಸಾಗರ ತೀರ್ಥರು.

ಶತಮಾನಗಳ ಸಂಪ್ರದಾಯ:

ಎರಡು ವರ್ಷಗಳಿಗೊಮ್ಮೆ ಮಕರ ಮಾಸದಲ್ಲಿ ಕೃಷ್ಣದೇವರ ಪೂಜಾ ವಿನಿಯೋಗಗಳ ಹಕ್ಕು ಕ್ರಮಬದ್ಧವಾಗಿ ಒಬ್ಬರು ಮಠಾಧೀಶರಿಂದ ಮತ್ತೊಬ್ಬರು ಮಠಾಧೀಶರಿಗೆ ಹಸ್ತಾಂತರವಾಗುತ್ತಿದೆ. ಈ ಪ್ರಕ್ರಿಯೆನ್ನು ಪರ್ಯಾಯ ಮಹೋತ್ಸವ ಎಂದು ಕರೆಯಲಾಗುತ್ತದೆ. ಶತಮಾನಗಳಿಂದಲೂ ಈ ಸಂಪ್ರದಾಯ ಚಾಚೂತಪ್ಪದೆ ಸಾಂಗವಾಗಿ ನಡೆದುಕೊಂಡು ಬಂದಿರುವುದು ವಿಶೇಷ. ಪರ್ಯಾಯ ಪೂಜಾಧಿಕಾರ ಪಡೆದ ನಿರ್ಧಿಷ್ಟ ಮಠದ ಮಠಾಧೀಶರು 2 ವರ್ಷಗಳ ಕಾಲ ಕೃಷ್ಣನ ಪೂಜಾಧಿಕಾರ ಪಡೆಯಲಿದ್ದಾರೆ. ಪ್ರತಿ 2 ವರ್ಷಕ್ಕೊಮ್ಮೆ ಜ.18ರಂದು ಪೂಜಾಧಿಕಾರ ಹಸ್ತಾಂತರ ನಡೆಯುತ್ತದೆ.

ನಾಲ್ಕನೇ ಬಾರಿ ಸರ್ವಜ್ಞ ಪೀಠಾರೋಹಣ

ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಮೂರು ಪರ್ಯಾಯಗಳನ್ನು ಯಶಸ್ವಿಯಾಗಿ ಪೂರೈಸಿದ್ದು ನಾಲ್ಕನೇ ಪರ್ಯಾಯಕ್ಕೆ ಸಜ್ಜಾಗಿದ್ದಾರೆ. ಕೃಷ್ಣಾಪುರ ಯತಿಗಳು 1974 ರಿಂದ 76ರವರೆಗೆ ಮೊದಲ ಪರ್ಯಾಯ, ಬಳಿಕ 1990ರಿಂದ 92ರವರೆಗೆ ದ್ವಿತೀಯ ಪರ್ಯಾಯ ಹಾಗೂ 2006–2008ರವರೆಗೆ ಮೂರನೇ ಪರ್ಯಾಯ ನಡೆಸಿದ್ದರು.ಇದೀಗ ಜ.18 2022ರಿಂದ ಜ.17, 2024ರವರೆಗೆ ನಾಲ್ಕನೇ ಬಾರಿಗೆ ಪರ್ಯಾಯ ಪೀಠವೇರುತ್ತಿದ್ದಾರೆ.

ಅಷ್ಟಮಠಗಳ ವಿವರ...

ಪಲಿಮಾರು ಮಠದಿಂದ ಆರಂಭವಾಗಿ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಪೇಜಾವರ ಮಠಗಳು ಕ್ರಮವಾಗಿ 2 ವರ್ಷ ಪರ್ಯಾಯ ಅವಧಿಯನ್ನು ಪೂರೈಸುತ್ತವೆ. ಪಲಿಮಾರು ಮಠಕ್ಕೆ ಅದಮಾರು ಮಠ, ಕೃಷ್ಣಾಪುರ ಮಠಕ್ಕೆ ಪುತ್ತಿಗೆ ಮಠ, ಶೀರೂರು ಮಠಕ್ಕೆ ಸೋದೆ ಮಠ ಹಾಗೂ ಕಾಣಿಯೂರು ಮಠಕ್ಕೆ ಪೇಜಾವರ ಮಠ ಧ್ವಂದ್ವ ಮಠಗಳಾಗಿ ಕಾರ್ಯ ನಿರ್ವಹಿಸುತ್ತವೆ.

ಪರ್ಯಾಯ ವಿಶೇಷ

ಎರಡು ವರ್ಷಗಳ ಪರ್ಯಾಯ ಅವಧಿ ಪೂರ್ಣಗೊಂಡ ಬಳಿಕ ಪರ್ಯಾಯ ಪೀಠಾಧಿಪತಿಗಳು ಭಾವಿ ಪರ್ಯಾಯ ಪೀಠಾಧಿಪತಿಗೆ ಸ್ವಾಗತ ಕೋರಿ ದೇವರ ದರ್ಶನ ಮಾಡಿಸಿ ಗಂಧಮಾಲ್ಯಾಧಿಗಳಿಂದ ಉಪಚರಿಸಿ, ಸುಮೂಹರ್ತದಲ್ಲಿ ಅಕ್ಷಯಪಾತ್ರೆಯನ್ನು ಅರ್ಪಿಸಿ ಸರ್ವಜ್ಞ ಪೀಠದಲ್ಲಿ ಕೂರಿಸುವುದು ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ಪ್ರಕ್ರಿಯೆ ಪ್ರಯಾಯೋತ್ಸವದ ಪ್ರಧಾನ ಅಂಶವಾಗಿದ್ದು ಜನವರಿ 18ರಂದು ಬೆಳಗಿನ ಜಾವ ನಡೆಯಲಿವೆ. ಅಂದು ಬಡಗು ಮಾಳಿಗೆಯಲ್ಲಿ ಅಷ್ಟಮಠದ ಯತಿಗಳಿಗೆ ಮಾಲಿಕೆ ಮಂಗಳಾರತಿ ನಡೆಯಲಿದ್ದು, ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಪರ್ಯಾಯ ಶ್ರೀಗಳ ಅನುಗ್ರಹ ಸಂದೇಶ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT