ಉಡುಪಿ: ಕೃಷ್ಣಾಷ್ಟಮಿಯ ಅಂಗವಾಗಿ ಯಮ, ಚಿತ್ರಗುಪ್ತನ ವೇಷ ಹಾಕಿದ ವೇಷಧಾರಿಗಳು ನಗರದಲ್ಲಿ ರಸ್ತೆ ಹೊಂಡಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ನಗರದ ಕರಾವಳಿ ಬೈಪಾಸ್‌ನಿಂದ ಮಲ್ಪೆಗೆ ತೆರಳುವ ಹೆದ್ದಾರಿಯಲ್ಲಿ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ರಸ್ತೆಯ ಹೊಂಡವಿರುವಲ್ಲಿಗೆ ಬಂದ ಯಮ ಹಾಗೂ ಚಿತ್ರಗುಪ್ತ ವೇಷಧಾರಿಗಳು ಹೊಂಡಗಳ ಅಳತೆ ತೆಗೆಯುವ ಮತ್ತು ಪ್ರೇತ ವೇಷಧಾರಿಗಳು ಆ ಹೊಂಡವನ್ನು ಹಾರುವ ಸನ್ನಿವೇಷವನ್ನು ಸೃಷ್ಟಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ರಸ್ತೆಯ ದುರವಸ್ಥೆ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಲ್ಪೆ ಮೀನುಗಾರಿಕಾ ಬಂದರು ಮತ್ತು ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್‌ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚಾರ ನಡೆಸುತ್ತಿವೆ.
ರಸ್ತೆ ಗುಂಡಿಗಳ ಮೇಲೆ ಪ್ರೇತಗಳ ಲಾಂಗ್‌ಜಂಪ್ ನಡೆಯುವಾಗ ಸ್ಥಳೀಯರು ಸ್ಥಳದಲ್ಲಿ ನೆರೆದು ಪ್ರೋತ್ಸಾಹ ನೀಡಿದ್ದಾರೆ.