ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕ್ಕೆ ಆಸ್ಪತ್ರೆ ಕಟ್ಟಿಲ್ಲ; ಒಂದು ಪೈಸೆ ಬೇಡ: ಬಿ.ಆರ್‌.ಶೆಟ್ಟಿ ಹೇಳಿಕೆ

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 10,000 ಹೆರಿಗೆ ಸಂಭ್ರಮಾಚರಣೆ
Last Updated 1 ಮಾರ್ಚ್ 2021, 12:35 IST
ಅಕ್ಷರ ಗಾತ್ರ

ಉಡುಪಿ: ಬಡವರಿಗೆ ಉಚಿತ ಹೈಟೆಕ್‌ ಚಿಕಿತ್ಸೆ ಸಿಗಬೇಕು ಎಂಬ ಆಶಯದೊಂದಿಗೆ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 2018ರಲ್ಲಿ ನಿರ್ಮಾಣ ಮಾಡಲಾದ ಕೂಸಮ್ಮ ಶಂಭುಶೆಟ್ಟಿ ಮೆಮೊರಿಯಲ್ ಹಾಜಿ ಅಬ್ದುಲ್ಲ ತಾಯಿ ಹಾಗೂ ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ 10,000 ಹೆರಿಗೆಗಳು ನಡೆದಿರುವುದು ಸಂತಸ ತಂದಿದೆ ಎಂದು ಅನಿವಾಸಿ ಭಾರತೀಯ ಉದ್ಯಮಿ ಭವಗುತ್ತು ರಘುರಾಮ ಶೆಟ್ಟಿ ಹೇಳಿದರು.

10,000 ಹೆರಿಗೆಯ ಸಂಭ್ರಮಾಚರಣೆ ಅಂಗವಾಗಿ ಸೋಮವಾರ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ದುಸ್ಥಿತಿ ಕಂಡು ಅಂದಿನ ಕಾಂಗ್ರೆಸ್ ಸರ್ಕಾರದ ಜತೆಗೆ ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವ ಒಪ್ಪಂದ ಮಾಡಿಕೊಳ್ಳಲಾಯಿತು.

ಒಪ್ಪಂದದಂತೆ ಆಸ್ಪತ್ರೆ 2 ವರ್ಷಗಳಿಂದ ಕಾರ್ಯಾರಂಭ ಮಾಡಿದ್ದು, 10,000 ಹೆರಿಗೆಗಳು ಯಶಸ್ವಿಯಾಗಿ ನಡೆದಿವೆ. ರಾಜ್ಯದ ಎಲ್ಲ ಜಿಲ್ಲೆಗಳ ಜನರು, ಹೊರ ರಾಜ್ಯಗಳ ವಲಸೆ ಕಾರ್ಮಿಕರು ಕೂಡ ಆಸ್ಪತ್ರೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಣಿ ಶುಲ್ಕವಾಗಿ ನಿರ್ಧಿಷ್ಟ ದರ ಪಡೆಯಲಾಗುತ್ತದೆ. ಇಲ್ಲಿ ಬಿಲ್ಲಿಂಗ್ ಕೌಂಟರ್ ಕೂಡ ತೆರೆಯಲಾಗಿಲ್ಲ. ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಷರತ್ತುಗಳಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆ. ಹಣ ಮಾಡಲು ಆಸ್ಪತ್ರೆ ನಿರ್ಮಿಸಿಲ್ಲ. ಉಚಿತ ಚಿಕಿತ್ಸೆ ಪಡೆದ ಬಡವರ ಮುಖದಲ್ಲಿನ ನಗುವೇ ಸಂಪತ್ತು ಎಂದರು.

ಬಿ.ಆರ್‌.ಎಸ್‌ ವೆಂಚರ್ಸ್‌ ಕಂಟ್ರಿ ಹೆಡ್‌ ಕುಶಾಲ್ ಶೆಟ್ಟಿ ಮಾತನಾಡಿ, ನಗರಸಭೆ ಎದುರಿಗಿರುವ ಜಾಗದಲ್ಲಿ ನಿರ್ಮಾಣವಾಗುತ್ತಿರುವ 400 ಬೆಡ್‌ಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬರುವ ಲಾಭವನ್ನು ಬಿ.ಆರ್‌.ಶೆಟ್ಟಿ ಅವರು ಸ್ವಂತಕ್ಕೆ ಬಳಸುವುದಿಲ್ಲ. ಸರ್ಕಾರದ ಜತೆಗಿನ ಒಪ್ಪಂದದಂತೆ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗಿರುವ 200 ಬೆಡ್‌ಗಳ ಆಸ್ಪತ್ರೆಯ ನಿರ್ವಹಣೆ ಹಾಗೂ 400 ಬೆಡ್‌ಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ವಹಣೆಗೆ ಬಳಸಲಾಗುತ್ತದೆ. 30 ವರ್ಷಗಳ ಗುತ್ತಿಗೆ ಅವಧಿ ಮುಗಿದ ಬಳಿಕ ಎರಡೂ ಆಸ್ಪತ್ರೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಲಾಗುತ್ತದೆ. ಒಂದು ರೂಪಾಯಿ ಪ್ರತಿಫಲ ಪಡೆಯುವಂತಿಲ್ಲ ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರನ್ನೊಳಗೊಂಡ ತಂಡವನ್ನು ನಿಯೋಜಿಸಬೇಕು. ಜಿಲ್ಲಾ ಸರ್ಜನ್‌ ಘಟಕದ ಉಸ್ತುವಾರಿಯಾಗಿರಬೇಕು. ಇದರಿಂದ ಆಸ್ಪತ್ರೆಯಲ್ಲಿ ಸರ್ಕಾರದ ಪ್ರಾತಿನಿಧಿತ್ವ ಸಿಕ್ಕಂತಾಗುತ್ತದೆ ಎಂದರು.

400 ಬೆಡ್‌ಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮೂರು ನೆಲಮಹಡಿಯಲ್ಲಿ ನಿರ್ಮಾಣ ಮಾಡುವ ಪ್ರಸ್ತಾವವನ್ನು ಬಿ.ಆರ್‌.ಎಸ್‌ ಸಂಸ್ಥೆ ಮುಂದಿಟ್ಟಿದೆ. ಆದರೆ, ಕರಾವಳಿಯಲ್ಲಿ ಮೂರು ನೆಲಮಹಡಿ ನಿರ್ಮಾಣಕ್ಕೆ ಝೆಡ್‌ಆರ್‌ಆರ್‌ ನಿಯಮಗಳಡಿ ಅವಕಾಶವಿಲ್ಲ. ಅನುಮತಿ ಸಿಗಬೇಕಾದರೆ ಝೆಡ್‌ಆರ್‌ಆರ್‌ ನಿಯಮಗಳಿಗೆ ತಿದ್ದುಪಡಿಯಾಗಬೇಕು ಎಂದರು

ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾತನಾಡಿ, ಆಸ್ಪತ್ರೆಯಲ್ಲಿ 10 ಸಾವಿರ ಹೆರಿಗೆಗಳು ನಡೆದಿರುವುದು ಸಂತಸದ ವಿಚಾರ. ಆಸ್ಪತ್ರೆಯ ಸೇವೆ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು.

ನಗರಸಭೆ ಎದುರಿಗೆ ನಿರ್ಮಾಣವಾಗುತ್ತಿರುವ ಬಿ.ಆರ್‌.ಶೆಟ್ಟಿ ಅವರ 400 ಬೆಡ್‌ಗಳ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಸದ್ಯಕ್ಕೆ ನಿಂತಿದೆ. ಝೆಡ್‌ಆರ್‌ಆರ್‌ ನಿಯಮಗಳನ್ವಯ 2 ನೆಲಮಹಡಿ ಮಾತ್ರ ನಿರ್ಮಿಸಲು ಅವಕಾಶವಿದೆ. ಆದರೆ, ಕಂಪೆನಿ 3 ನೆಲ ಮಹಡಿಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಝೆಡ್‌ಆರ್‌ಆರ್‌ ನಿಯಮಾವಳಿಗೆ ತಿದ್ದುಪಡಿಯಾದರೆ ಮಾತ್ರ ಅನುಮತಿ ನೀಡಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT