ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊಗ್ರಫಿಯಲ್ಲಿ ಸೃಜನಶೀಲತೆ ಇರಲಿ

ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಕೆ.ಎನ್‌.ಶಾಂತಕುಮಾರ್ ಸಲಹೆ
Last Updated 26 ಆಗಸ್ಟ್ 2022, 14:02 IST
ಅಕ್ಷರ ಗಾತ್ರ

ಉಡುಪಿ: ಫೋಟೊ ಜರ್ನಲಿಸ್ಟ್‌ಗಳು ಸೃಜನಶೀಲ ಚಿತ್ರಗಳ ಮೂಲಕ ಓದುಗರಿಗೆ ಘಟನೆಯ ಸಂಪೂರ್ಣ ಚಿತ್ರಣವನ್ನು ಕಟ್ಟಿ ಕೊಡಬೇಕು ಎಂದು ದಿ ಪ್ರಿಂಟರ್ಸ್‌ ಮೈಸೂರು ಪ್ರೈಪೇಟ್‌ ಲಿಮೆಟೆಡ್ ಸಂಸ್ಥೆಯ ನಿರ್ದೇಶಕರಾದ ಕೆ.ಎನ್‌.ಶಾಂತಕುಮಾರ್ ಹೇಳಿದರು.

ಶುಕ್ರವಾರ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್‌ ಕಮ್ಯುನಿಕೇಷನ್‌ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಫೋಟೊ ಜರ್ನಲಿಸ್ಟ್‌ಗಳು ಛಾಯಾಚಿತ್ರ ತೆಗೆದು ಶೀರ್ಷಿಕೆ ಕೊಟ್ಟರೆ ಸಾಲದು. ಪರಿಣಾಮಕಾರಿ ಫೋಟೊಗಳ ಆಯ್ಕೆಯಿಂದ ಹಿಡಿದು ಮುದ್ರಣವಾಗುವವರೆಗಿನ ಎಲ್ಲ ಹಂತಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಉತ್ತಮ ಫಲಿತಾಂಶ ಕಾಣಬಹುದು ಎಂದು ಸಲಹೆ ನೀಡಿದರು.

ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಫೋಟೊಗ್ರಫಿ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ಚಿತ್ರಗಳ ಮೂಲಕವೇ ಕಥೆ ಹೇಳುವಂತಹ ಕೌಶಲವನ್ನು ಫೋಟೊ ಜರ್ನಲಿಸ್ಟ್‌ಗಳು ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.

ಛಾಯಾಚಿತ್ರ ಕಲೆಗೆ 2 ಶತಮಾನಗಳ ಇತಿಹಾಸವಿದ್ದರೂ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದು ಕೆಲವು ದಶಕಗಳ ಹಿಂದಷ್ಟೆ. ಮುದ್ರಣ ಮಾಧ್ಯಮಗಳಲ್ಲೂ ಛಾಯಾಚಿತ್ರಗಳಿಗೆ ಇತ್ತೀಚೆಗಷ್ಟೆ ಹೆಚ್ಚು ಮಹತ್ವ ದೊರೆಯುತ್ತಿದೆ ಎಂದು ತಿಳಿಸಿದ ಶಾಂತಕುಮಾರ್‌ ಪತ್ರಿಕಾ ಸಂಸ್ಥೆಗಳಲ್ಲಿ ಛಾಯಾಗ್ರಹಕರನ್ನು ಫೋಟೊ ಜರ್ನಲಿಸ್ಟ್‌ಗಳಾಗಿ ನೋಡುತ್ತಿರುವುದು ಉತ್ತಮ ಬೆಳವಣಿಗೆ. ಪತ್ರಕರ್ತರಷ್ಟೆ, ಫೋಟೊ ಜರ್ನಲಿಸ್ಟ್‌ಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

ದಶಕಗಳ ಹಿಂದೆ ಛಾಯಾಗ್ರಹಣ ಈಗಿನಷ್ಟು ಸುಲಭವಾಗಿರಲಿಲ್ಲ. ಚಿತ್ರ ತೆಗೆಯುವ ಮುನ್ನ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಿತ್ತು. ಫೋಟೊಗ್ರಫಿಗೆ ಬಳಸುತ್ತಿದ್ದ ಫಿಲ್ಮ್‌ ರೋಲ್‌ ದುಬಾರಿ ಹಾಗೂ ನೆಗೆಟಿವ್‌ ಸಂಸ್ಕರಣೆಗೆ ಹೆಚ್ಚು ಸಮಯ, ಹಣ ವ್ಯಯವಾಗುತ್ತಿದ್ದರಿಂದ ಎಚ್ಚರಿಕೆಯಿಂದ ಚಿತ್ರಗಳನ್ನು ತೆಗೆಯಬೇಕಿತ್ತು.

ಯಾವ ಚಿತ್ರಗಳನ್ನು ತೆಗೆಯಬೇಕು, ಯಾವ ವ್ಯಕ್ತಿ ಅಥವಾ ವಸ್ತು ಕೇಂದ್ರಿತವಾಗಿರಬೇಕು ಎಂಬುದನ್ನು ನಿರ್ಧರಿಸಬೇಕಿತ್ತು. ಬಳಕೆಯಾದ ಫಿಲ್ಮ್‌ ಫ್ರೇಮ್‌ಗಳನ್ನು ಲ್ಯಾಬ್‌ನಲ್ಲಿ ಸಂಸ್ಕರಿಸಿ, ಉಳಿದ ಫ್ರೇಮ್‌ಗಳನ್ನು ಜೋಪಾನವಾಗಿಡಬೇಕಿತ್ತು ಎಂದು ಸವಾಲುಗಳನ್ನು ತೆರೆದಿಟ್ಟರು.

ತಂತ್ರಜ್ಞಾನ ಕ್ಷೇತ್ರದಲ್ಲಾದ ಕ್ರಾಂತಿಕಾರಕ ಬದಲಾವಣೆಗಳಿಂದ ಫೋಟೊಗ್ರಫಿ ಸುಲಭವಾಗಿ, ಪ್ರಸ್ತುತ ‌ಅನಿಯಮಿತ ಫೋಟೊಗಳನ್ನು ಕ್ಲಿಕ್ಕಿಸುವ ಅವಕಾಶ ಸಿಕ್ಕಿದೆ. ಅತ್ಯಾಧುನಿಕ ಹಾಗೂ ಗುಣಮಟ್ಟದ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದಿದ್ದು, ತಂತ್ರಜ್ಞಾನ ಫೊಟೊಗ್ರಫಿ ಕ್ಷೇತ್ರದ ದಿಕ್ಕನ್ನು ಬದಲಿಸಿದೆ.

ಹಿರಿಯ ಫೋಟೊ ಜರ್ನಲಿಸ್ಟ್‌ ಆಸ್ಟ್ರೋ ಮೋಹನ್ ಮಾತನಾಡಿ, ಇಡೀ ವಿಶ್ವವನ್ನು ಛಾಯಾಚಿತ್ರಗಳಲ್ಲಿ ಕಟ್ಟಿಕೊಡಬಲ್ಲ ಶಕ್ತಿ ಫೋಟೊ ಜರ್ನಲಿಸ್ಟ್‌ಗಳಿಗೆ ಇದೆ. ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಸೃಜನಶೀಲತೆಯ ಗುಣವನ್ನು ಬೆಳೆಸಿಕೊಂಡರೆ ಯಶಸ್ವಿ ಫೋಟೊ ಜರ್ನಲಿಸ್ಟ್‌ಗಳಾಗಬಹುದು ಎಂದು ಸಲಹೆ ನೀಡಿದರು.

ಪತ್ರಕರ್ತ ಕಚೇರಿಯಲ್ಲಿ ಕುಳಿತು ಮಾಹಿತಿ ಪಡೆದು ವರದಿ ಮಾಡಬಹುದು. ಆದರೆ, ಫೋಟೊ ಜರ್ನಲಿಸ್ಟ್‌ಗಳು ಘಟನಾ ಸ್ಥಳಕ್ಕೆ ತೆರಳಿ ಅಲ್ಲಿನ ಸವಾಲುಗಳನ್ನು ಎದುರಿಸಿ ಅತ್ಯುತ್ತಮ ಚಿತ್ರಗಳನ್ನು ಸೆರೆ ಹಿಡಿಯಬೇಕು. ನಮ್ಮೊಳಗಿನ ಒಳಗಣ್ಣನ್ನು ತೆರೆದು ಪ್ರಪಂಚವನ್ನು ನೋಡಿದಾಗ ಅದ್ಭುತ ಚಿತ್ರಗಳನ್ನು ಸೆರೆ ಹಿಡಿಯಬಹುದು ಎಂದರು.

ಫೋಟೊಗ್ರಫಿ ಕಲೆಯಾಗಿದ್ದು ವಿಷಯವಸ್ತುವಿನ ಆಯ್ಕೆ, ನೆರಳು ಬೆಳಕಿನ ಅರಿವು, ಫೋಕಸ್‌ ಪಾಯಿಂಟ್‌ ತಿಳಿದಿದ್ದರೆ ಅದ್ಬುತವಾದ ಹಾಗೂ ಆಕರ್ಷಕ ಚಿತ್ರಗಳನ್ನು ತೆಗೆಯಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಾಗರಿಕ ಸಹಭಾಗಿತ್ವದ ಪತ್ರಿಕೋದ್ಯಮದ ಹೆಸರಿನಲ್ಲಿ ಮಾಧ್ಯಮ ಸಂಸ್ಥೆಗಳಿಗೆ ಗುಣಮಟ್ಟವಿಲ್ಲದ ಹಾಗೂ ವಿಷಯವಸ್ತುವೇ ಇಲ್ಲದ ಚಿತ್ರಗಳು ರವಾನೆಯಾಗುತ್ತಿದ್ದು ಅನಿವಾರ್ಯ ಕಾರಣಗಳಿಂದ ಮುದ್ರಣವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಖ್ಯಾತ ಫೋಟೊ ಜರ್ನಲಿಸ್ಟ್‌ ಹರ್ಷ ವಾಡ್ಲಮಣಿ ಫೋಟೊಗ್ರಫಿ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಆಸಕ್ತಿ ಹಾಗೂ ಪೂರ್ವ ತಯಾರಿ ಬಹಳ ಮುಖ್ಯ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಫೋಟೊಗ್ರಫಿ ಕ್ಷೇತ್ರಕ್ಕೆ ಸಂಬಂಧಿಸಿ ನಡೆದ ಸಂವಾದದಲ್ಲಿ ಭಾಗವಹಿಸಿದ್ರು. ವಿಭಾಗದ ಮುಖ್ಯಸ್ಥೆ ಡಾ.ಎಚ್‌.ಎಸ್‌.ಶುಭಾ ಉಪಸ್ಥಿತರಿದ್ದರು. ವಿನ್ಯಾಸ್‌ ಹೆಗಡೆ ಕಾರ್ಯಕ್ರಮ ಸಂಯೋಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT