ಭಾನುವಾರ, ಜನವರಿ 26, 2020
20 °C
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಆರ್.ವಾಸುದೇವನ್

ಪ್ಲಾಸ್ಟಿಕ್ ತ್ಯಾಜ್ಯವಲ್ಲ, ಸಂಪನ್ಮೂಲ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಆರ್.ವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ದೈನಂದಿನ ಜೀವನದಲ್ಲಿ ಹಾಸುಹೊಕ್ಕಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಬಳಕೆಯ ಮೂಲಕಸಂಪನ್ಮೂಲವನ್ನಾಗಿ ಬದಲಿಸಬಹುದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಆರ್.ವಾಸುದೇವನ್ ಹೇಳಿದರು.  

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸುವ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ಲಾಸ್ಟಿಕ್ ಇಲ್ಲದ ಬದುಕು ಕಲ್ಪಿಸಿಕೊಳ್ಳಲೂ ಆಗದಷ್ಟು ಎಲ್ಲರೂ ಪ್ಲಾಸ್ಟಿಕ್‌ ಮೇಲೆ ಅವಲಂಬಿತರಾಗಿದ್ದೇವೆ. ಈಗ ಲಭ್ಯವಿರುವ ಪ್ಲಾಸ್ಟಿಕ್‌ ಅನ್ನು ಹೇಗೆ ಮರುಬಳಕೆ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸುವುದು ಅಗತ್ಯ ಎಂದರು.

ಪ್ಲಾಸ್ಟಿಕ್ ನಿಷೇಧಿಸಲು ಅಲ್ಲ; ಯೋಜನೆ ರೂಪಿಸಲು ಎನ್ನುವ ಧ್ಯೇಯದೊಂದಿಗೆ ಪ್ಲಾಸ್ಟಿಕ್ ಮರುಬಳಕೆಯಲ್ಲಿ ಯಶಸ್ಸು ಸಿಕ್ಕಿದೆ. ಬಳಸಿ ಬಿಸಾಡುವ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳಿಂದ ಪ್ಲಾಸ್ಟಿಕ್ ಟಾರ್ ರಸ್ತೆಗಳನ್ನು ನಿರ್ಮಿಸಬಹುದು. ಈ ರಸ್ತೆಗಳನ್ನು ಹತ್ತು ವರ್ಷಗಳವರೆಗೆ ನಿರ್ವಹಣೆ ಅವಶ್ಯಕತೆ ಇರುವುದಿಲ್ಲ. ರಸ್ತೆಗಳಿಗೆ ತಗಲುವ ವೆಚ್ಚವೂ ಕಡಿಮೆ ಎಂದು ಹೇಳಿದರು.

ದೇಶದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಡಾಂಬಾರು ರಸ್ತೆಗಳನ್ನು ನಿರ್ಮಿಸಲು 100 ಲಕ್ಷ ಟನ್ ಪ್ಲಾಸ್ಟಿಕ್ ಬೇಕಾಗುತ್ತದೆ. ನಮ್ಮಲ್ಲಿ ಕೇವಲ 10 ಲಕ್ಷ ಟನ್‍ ಮಾತ್ರ ಲಭ್ಯವಿದೆ. 1 ಟನ್ ಪ್ಲಾಸ್ಟಿಕ್‌ನಿಂದ 1 ಕಿ.ಮೀ ರಸ್ತೆ ನಿರ್ಮಾಣ ಮಾಡಬಹುದು ಎಂದರು.

11 ರಾಜ್ಯಗಳಲ್ಲಿ 1 ಲಕ್ಷ ಕಿ.ಮೀ ಉದ್ದದ ಪ್ಲಾಸ್ಟಿಕ್ ಡಾಂಬಾರು ರಸ್ತೆ ನಿರ್ಮಾಣ ಮಾಡಲಾಗಿದೆ. ಪ್ಲಾಸ್ಟಿಕ್‍ನಿಂದ ನಿರ್ಮಿಸುವ ರಸ್ತೆಗಳು ಗುಂಡಿ ಬೀಳುವ ಸಮಸ್ಯೆ ಇರುವುದಿಲ್ಲ. ಮುಂಬೈನಲ್ಲಿ ನಿರ್ಮಿಸಿರುವ ರಸ್ತೆಯು ಮಹಾಮಳೆಗೂ ಜಗ್ಗಿಲ್ಲ ಎಂದು ವಿವರಿಸಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಡುಪಿ ಪ್ಲಾಸ್ಟಿಕ್ ಮರುಬಳಕೆ ವಿಷಯದಲ್ಲಿ ಹಿಂದೆ ಬಿದ್ದಿದೆ. ಇದೀಗ ಹೊಸ ಪರಿಕಲ್ಪನೆ ಜಾರಿಗೆ ಮುಂದಾಗಿದ್ದು, ಅಧಿಕಾರಿಗಳು ಕಾರ್ಯಾಗಾರದ ಪ್ರಯೋಜನ ಪಡೆದು ಜಿಲ್ಲೆಯಲ್ಲಿ ಯೋಜನೆಗೆ ಯಶಸ್ಸು ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಹಲವು ರಾಜ್ಯಗಳಲ್ಲಿ ಪ್ಲಾಸ್ಟಿಕ್ ಡಾಂಬಾರು ರಸ್ತೆಗಳನ್ನು ಈಗಾಗಲೇ ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಪರಿಸರ ಹಾನಿ ತಪ್ಪಿಸಬಹುದು. ಅಧಿಕಾರಿಗಳು ಕಾರ್ಯಾಗಾರದಿಂದ ಪಡೆದ ಮಾಹಿತಿಯನ್ನು ಅಳವಡಿಸಿಕೊಂಡು ಯೋಜನೆ ಕಾರ್ಯಗತಗೊಳಿಸಬೇಕು.

ಮೈಸೂರು ಪಾಲಿಕೆಯ ಕಮಿಷನರ್ ಆಗಿದ್ದಾಗ 10 ರಸ್ತೆಗಳನ್ನು ಪ್ಲಾಸ್ಟಿಕ್ ಬಳಸಿ ನಿರ್ಮಿಸಲಾಗಿತ್ತು. ಇಲ್ಲಿಯೂ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲಿ. ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ರಕ್ಷಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಮಧುರೈ ತ್ಯಾಗರಾಜ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಮಲಿಂಗಂ ಚಂದ್ರಶೇಖರ್ ಉಪಸ್ಥಿತರಿದ್ದರು.

ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಸ್ವಾಗತಿಸಿದರು, ಪಿಡಿಒ ಮಹೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತಿಕ್ರಿಯಿಸಿ (+)