ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವರ್ಷವಾದರೂ ಗುಂಡಿ ಬೀಳದ ಪ್ಲಾಸ್ಟಿಕ್ ರಸ್ತೆ !

ಉಡುಪಿಯ ಅಲೆವೂರಿನಲ್ಲಿ ಪ್ಲಾಸ್ಟಿಕ್ ಬಳಸಿ ನಿರ್ಮಿಸಲಾಗಿದ್ದ ರಸ್ತೆ
Last Updated 6 ಫೆಬ್ರುವರಿ 2023, 15:31 IST
ಅಕ್ಷರ ಗಾತ್ರ

ಉಡುಪಿ: ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರುಬಳಕೆ ಮಾಡಿಕೊಂಡು ಪ್ಲಾಸ್ಟಿಕ್‌ ವಸ್ತುಗಳನ್ನು ತಯಾರಿಸುವುದನ್ನು ಕೇಳಿದ್ದೇವೆ. ಆದರೆ, ಉಡುಪಿಯಲ್ಲಿ ಮೂರು ವರ್ಷಗಳ ಹಿಂದೆ ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ರಸ್ತೆಯನ್ನೇ ನಿರ್ಮಿಸಲಾಗಿತ್ತು. ಅಂದು ಪ್ಲಾಸ್ಟಿಕ್‌ನಿಂದ ನಿರ್ಮಾಣವಾಗಿದ್ದ ರಸ್ತೆ ಇಂದಿಗೂ ಹೊಂಡ ಗುಂಡಿಗಳು ಬೀಳದೆ ಗಟ್ಟಿಮುಟ್ಟಾಗಿರುವುದು ವಿಶೇಷ.

2019ರ ಡಿ.10ರಂದು ಪ್ಲಾಸ್ಟಿಕ್‌ತ್ಯಾಜ್ಯ ಮರುಬಳಕೆಯ ಕುರಿತು ಸ್ವಚ್ಛ ಭಾರತ್ ಮಿಷನ್‌ನಿಂದ ಕಾರ್ಯಾಗಾರ ನಡೆದಿತ್ತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಪ್ಲಾಸ್ಟಿಕ್ ಮ್ಯಾನ್ ಖ್ಯಾತಿಯ ತಮಿಳುನಾಡಿನ ಡಾ.ವಾಸುದೇವನ್ ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡುವ ಬಗ್ಗೆ ತರಬೇತಿ ನೀಡಿದ್ದರು.

ಜಿಲ್ಲೆಯ ಎಸ್‌ಎಲ್‌ಆರ್‌ಎಂ ಘಟಕಗಳಲ್ಲಿ ಸಂಗ್ರಹವಾಗುವ ದೊಡ್ಡ ಪ್ರಮಾಣದ ಪ್ಲಾಸ್ಟಿಕ್‌ ತ್ಯಾಜ್ಯವನ್ನೇ ರಸ್ತೆ ನಿರ್ಮಾಣಕ್ಕೆ ಬಳಸಬಹುದು. ಇದರಿಂದ ಒಣ ತ್ಯಾಜ್ಯದ ವಿಲೇವಾರಿ ಸಮಸ್ಯೆಯೂ ನಿವಾರಣೆಯಾಗುತ್ತದೆ. ಗುಣಮಟ್ಟದ ರಸ್ತೆಯೂ ನಿರ್ಮಾಣವಾಗುತ್ತದೆ ಎಂದು ವಾಸುದೇವನ್‌ ಅಧಿಕಾರಿಗಳಿಗೆ ಸಲಹೆ ನೀಡಿದ್ದರು.

1 ಕಿ.ಮಿ ರಸ್ತೆಗೆ 100 ಕೆ.ಜಿ ವ್ಯರ್ಥ ಪ್ಲಾಸ್ಟಿಕ್ ಬಳಸಿ ಬಿಟ್ಯುಮನ್ (ಡಾಂಬರ್) ಬಳಕೆಯಲ್ಲಿ ಉಳಿತಾಯ ಮಾಡಬಹುದು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದರು. ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಲೆವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಸಿ 300 ಮೀಟರ್ ಉದ್ದದ ರಸ್ತೆಯನ್ನೂ ನಿರ್ಮಾಣ ಮಾಡಿ ತೋರಿಸಿದ್ದರು.‌

ಮೂರು ವರ್ಷದ ಹಿಂದೆ ನಿರ್ಮಾಣವಾದ ರಸ್ತೆ ಇಂದಿಗೂ ಸುಸ್ಥಿತಿಯಲ್ಲಿದೆ. ಪ್ಲಾಸ್ಟಿಕ್ ಬಳಸಿ ನಿರ್ಮಾಣ ಮಾಡುವ ರಸ್ತೆ ಗುಣಮಟ್ಟ, ಬಾಳಿಕೆ ಬರುತ್ತದೆಯೇ ಎಂಬ ಅನುಮಾನಗಳಿಗೂ ಉತ್ತರ ನೀಡಿದೆ. ನಿರ್ವಹಣೆ ವೆಚ್ಚವೂ ತೀರಾ ಕಡಿಮೆಯಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ.

ಅಲೆವೂರು ಮಾತ್ರವಲ್ಲ; ಬೈಂದೂರು ತಾಲ್ಲೂಕಿನ ಮರವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2 ವರ್ಷಗಳ ಹಿಂದೆ 120 ಮೀಟರ್‌ ಉದ್ದದ ರಸ್ತೆಯನ್ನು ಪ್ಲಾಸ್ಟಿಕ್ ಬಳಸಿ ನಿರ್ಮಿಸಲಾಗಿದ್ದು, ಗುಣಮಟ್ಟದಿಂದ ಕೂಡಿದೆ.

ಲೋಕೋಪಯೋಗಿ ಇಲಾಖೆ, ಎಂಜಿನಿಯರಿಂಗ್ ವಿಭಾಗ, ಕೆ.ಆರ್.ಐ.ಡಿ.ಎಲ್ ಸೇರಿದಂತೆ ಇತರ ಇಲಾಖೆಗಳು ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ಶೇ 10ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಕಾಮಗಾರಿಗೆ ಅಗತ್ಯವಿರುವ ವ್ಯರ್ಥ ಪ್ಲಾಸ್ಟಿಕ್ ಅನ್ನು ವಂಡ್ಸೆ, ಶಂಕರ ನಾರಾಯಣ, ಹೆಬ್ರಿ ಹಾಗೂ ನಿಟ್ಟೆ ಗ್ರಾಮ ಪಂಚಾಯಿತಿಗಳಿಂದ ಪಡೆಯುವಂತೆ ಸೂಚಿಸಲಾಗಿದೆ.

ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಳಕೆಯಿಂದ ಪ್ಲಾಸ್ಟಿಕ್ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗುವುದರ ಜತೆಗೆ ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚವೂ ಕಡಿಮೆಯಾಗಲಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ.

ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಮುಕ್ತಿ

ಜಿಲ್ಲೆಯಲ್ಲಿರುವ ಎಸ್‌ಎಲ್‌ಆರ್‌ಎಂ ಕೇಂದ್ರಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಸವಾಲಾಗಿತ್ತು. ಗುಣಮಟ್ಟದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೇಡಿಕೆ ಇದ್ದರೆ ಗುಣಮಟ್ಟವಿಲ್ಲದ ಮಲ್ಟಿ ಲೇಯರ್ ಪ್ಲಾಸ್ಟಿಕ್‌, ಥರ್ಮಾಕೋಲ್, ಫೋಮ್‌ಗೆ ಬೇಡಿಕೆ ಇಲ್ಲದೆ ವಿಲೇವಾರಿ ಕಷ್ಟವಾಗಿತ್ತು. ಇದೀಗ ಇಂತಹ ತ್ಯಾಜ್ಯಗಳನ್ನು ರಸ್ತೆ ನಿರ್ಮಾಣಕ್ಕೆ ಬಳಸಬಹುದಾಗಿದೆ.

–ಎಚ್‌.ಪ್ರಸನ್ನ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT