ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಜತೆ ‘ಪರೀಕ್ಷಾ ಪೇ ಚರ್ಚಾ’ದಲ್ಲಿ ಉಡುಪಿಯ ವಿದ್ಯಾರ್ಥಿನಿ ಅನುಷಾ

ಶಿಕ್ಷಣ ಸಚಿವ ಸುರೇಶಕುಮಾರ್‌ ದಂಪತಿಯಿಂದ ಅಭಿನಂದನೆ
Last Updated 19 ಮಾರ್ಚ್ 2021, 13:40 IST
ಅಕ್ಷರ ಗಾತ್ರ

ಸಿದ್ದಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ನಡೆಯುವ ‘ಪರೀಕ್ಷಾ ಪೇ ಚರ್ಚಾ’ಕ್ಕೆ ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕಿನ ಆರ್ಡಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಷಾ ಕುಲಾಲ್ ಕೂಡ ಒಬ್ಬಳು. ಈ ವಿದ್ಯಾರ್ಥಿನಿಯ ಕಿರುಚಿತ್ರ ಚಿತ್ರೀಕರಣಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪ್ರತಿನಿಧಿ ಶುಕ್ರವಾರ ಶಾಲೆಗೆ ಬಂದಿದ್ದರು.

ಪ್ರತಿನಿಧಿ ಜಯರಾಜೇಂದ್ರ ಚೋಳನ್ ಅವರು, ವಿದ್ಯಾರ್ಥಿನಿ ಅನುಷಾಳ ಹೇಳಿಕೆ ಚಿತ್ರೀಕರಣ ಮಾಡಿಕೊಂಡರು. ವಿದ್ಯಾರ್ಥಿನಿಯ ಕಿರು ಪರಿಚಯ ಹಾಗೂ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಪ್ರಧಾನಿಗೆ ಕೇಳಿರುವ ಪ್ರಶ್ನೆಯನ್ನು ಚಿತ್ರೀಕರಣ ಮಾಡಲಾಗಿದೆ. ಶಾಲೆ ಮುಖ್ಯ ಶಿಕ್ಷಕ ಕೆ.ಎಂ.ಶೇಖರ್ ಶೆಟ್ಟಿಗಾರ್, ಶಿಕ್ಷಕ ಸುರೇಶ ಮರಕಾಲ ಹಾಗೂ ಶಿಕ್ಷಕರ ವೃಂದ, ಹಳೆ ವಿದ್ಯಾರ್ಥಿಗಳು ಇದ್ದರು.

ಶಿಕ್ಷಣ ಸಚಿವರ ಕರೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವಿದ್ಯಾರ್ಥಿನಿ ಅನುಷಾಗೆ ಕರೆ ಮಾಡಿ ಆಕೆಯ ಕ್ಷೇಮ ಸಮಾಚಾರವನ್ನು ವಿಚಾರಿಸುವ ಜತೆಗೆ ಪ್ರಧಾನಿ ಅವರೊಂದಿಗೆ ‘ಪರೀಕ್ಷಾ ಪೇ ಚರ್ಚೆ’ಗೆ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಮೂಲಕ ರಾಜ್ಯಕ್ಕೆ ಕೀರ್ತಿ ತರುವಂತೆ ಹಾರೈಸಿದರು. ಸಚಿವರ ಪತ್ನಿ ಕೆ.ಎಚ್.ಸಾವಿತ್ರಿ ಅವರು ವಿದ್ಯಾರ್ಥಿನಿ ಅನುಷಾಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.

ಗಾರೆ ಕೆಲಸ ನಿರ್ವಹಿಸುತ್ತಿರುವ ಕೃಷ್ಣ ಕುಲಾಲ್ ಹಾಗೂ ಜಯಲಕ್ಷ್ಮೀ ಕೆ. ಕುಲಾಲ್ ಅವರ ನಾಲ್ವರು ಹೆಣ್ಣುಮಕ್ಕಳಲ್ಲಿ ಅನುಷಾ ಕಿರಿಯವಳು. ಗ್ರಾಮೀಣ ಭಾಗದಿಂದ ಬಂದು ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾಳೆ. ದಿನವೂ ಹತ್ತಾರು ಕಿಲೋ ಮೀಟರ್‌ ನಡೆದು ಶಾಲೆಗೆ ಬರುವ ಇವಳು, ಪ್ರತಿಭಾನ್ವಿತ ವಿದ್ಯಾರ್ಥಿನಿ.

‘ವಿದ್ಯಾರ್ಥಿಗಳಿಗೆ ಸಾರಿಗೆ ಸೌಕರ್ಯವಿಲ್ಲದೇ ಇರುವುದನ್ನು ಗಮನಿಸಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಟ್ರಸ್ಟ್‌ನ ವತಿಯಿಂದ ಶಾಲೆಗೆ ಬಸ್‌ ಸೌಕರ್ಯ ಒದಗಿಸುವ ಭರವಸೆ ನೀಡಿದ್ದು, ವಾರದೊಳಗೆ ಸರ್ಕಾರಿ ಶಾಲೆಗೆ ನೂತನ ಬಸ್ ವ್ಯವಸ್ಥೆ ಆಗಲಿದೆ’ ಎಂದು ಮುಖ್ಯ ಶಿಕ್ಷಕ ಶೇಖರ್ ಶೆಟ್ಟಿಗಾರ್ ತಿಳಿಸಿದರು.

‘ಪ್ರಧಾನಿಗೆ ಮನವಿ ಮಾಡುವೆ’

ಎಂಜಿನಿಯರಿಂಗ್‌ ವ್ಯಾಸಂಗ ಮಾಡುವ ಆಸೆಯಿದೆ. ಶಿಕ್ಷಣಕ್ಕೆ ಸಹಕಾರ ನೀಡುವಂತೆ ಪ್ರಧಾನಿ ಅವರಿಗೆ ಮನವಿ ಮಾಡುತ್ತೇನೆ. ಹೆಣ್ಣು ಮಕ್ಕಳಗೆ ಉಚಿತ ಶಿಕ್ಷಣ ನೀಡುವ ಮೂಲಕ ಮಹಿಳಾ ಸಬಲೀಕರಣ ಆಗಬೇಕು. ಯಾವುದೇ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತ ಆಗಬಾರದು. ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆ ಇನ್ನಷ್ಟು ಬೆಳೆಯಲು ಅನುಕೂಲ ಮಾಡಬೇಕು. ದೌರ್ಜನ್ಯ ನಡೆಸುವವರ ವಿರುದ್ಧ ತ್ವರಿತ ತನಿಖೆ ನಡೆಸಿ, ಶಿಕ್ಷೆ ಸಿಗುವಂತೆ ಮಾಡಬೇಕು ಎನ್ನುವ ವಿಚಾರವನ್ನು ಚರ್ಚೆಯ ವೇಳೆ ಪ್ರಸ್ತಾಪಿಸುವುದಾಗಿವಿದ್ಯಾರ್ಥಿನಿ ಅನುಷಾ ಕುಲಾಲ್ ಹೇಳಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT