ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಎಚ್‌ಡಿಕೆ,ಎಚ್‌ಡಿಡಿಗೆ ಪ್ರಕೃತಿ ಚಿಕಿತ್ಸೆ: ರೆಸಾರ್ಟ್‌ನಲ್ಲೇ ರಾಜಕಾರಣ ಚರ್ಚೆ

Published:
Updated:
Prajavani

ಉಡುಪಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಕಾಪುವಿನ ಮೂಳೂರಿನಲ್ಲಿರುವ ಸಾಯಿರಾಧ ರೆಸಾರ್ಟ್‌ನಲ್ಲಿ ಪ್ರಕೃತಿ ಚಿಕಿತ್ಸೆ ಮುಂದುವರಿದಿದೆ.

ಆಯುರ್ವೇದ ತಜ್ಞ ತನ್ಮಯ ಗೋಸ್ವಾಮಿ ಅವರ ನೇತೃತ್ವದ ತಂಡ ಕುಮಾರಸ್ವಾಮಿ ಅವರಿಗೆ ಪಂಚಕರ್ಮ ಚಿಕಿತ್ಸೆ ನೀಡುತ್ತಿದೆ. ಮುಖ್ಯಮಂತ್ರಿಗಳು ಮೂರು ದಿನಗಳಿಂದ ರೆಸಾರ್ಟ್‌ ಬಿಟ್ಟು ಹೊರಬಂದಿಲ್ಲ. ಮುಖಂಡರ, ಆಪ್ತರ ಭೇಟಿಗೂ ಮುಂದಾಗಿಲ್ಲ. ರೆಸಾರ್ಟ್‌ ಸುತ್ತಲೂ ಖಾಕಿ ಕಣ್ಗಾವಲು ಹಾಕಲಾಗಿದೆ.

ದೇವೇಗೌಡರಿಗೆ ಪ್ರಕೃತಿ ಚಿಕಿತ್ಸೆ ನೀಡಲಾಗುತ್ತಿದೆ. ರೆಸಾರ್ಟ್‌ ಅಂಗಳದಲ್ಲೇ ಉಭಯ ನಾಯಕರು ವಾಕಿಂಗ್ ಮಾಡುತ್ತಾ, ವಿಶ್ರಾಂತಿ ಪಡೆಯುತ್ತಿದ್ದಾರೆ.

ಪರದೆ ಅಳವಡಿಕೆ:

ಮಾಧ್ಯಮಗಳು ಚಿತ್ರೀಕರಣ ಮಾಡದಂತೆ ರೆಸಾರ್ಟ್‌ನ ಬಹುತೇಕ ಭಾಗವನ್ನು ಪರದೆಯಿಂದ ಮುಚ್ಚಲಾಗಿದೆ. ರಸ್ತೆಗೆ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಮಾಹಿತಿ ನೀಡದಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ರಾಜಕಾರಣ ಚರ್ಚೆ:

ರೆಸಾರ್ಟ್‌ನಲ್ಲಿಯೇ ಕುಳಿತು ಮುಖ್ಯಮಂತ್ರಿಗಳು ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಸಚಿವ ಸಾರಾ ಮಹೇಶ್‌, ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರಿಂದ ಮಾಹಿತಿ ಪಡೆದು, ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.

ಕುಮಾರಸ್ವಾಮಿ ಅವರು ಒಂದೆರಡು ದಿನ ಇಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ.  

Post Comments (+)