ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾಡ್ರನ್ಟಿಡ್‌ ಉಲ್ಕಾವೃಷ್ಟಿ ವೀಕ್ಷಣೆಗೆ ಅವಕಾಶ

Last Updated 1 ಜನವರಿ 2021, 13:29 IST
ಅಕ್ಷರ ಗಾತ್ರ

ಉಡುಪಿ: ಈಚೆಗೆ ಜೆಮಿನಿಡ್ ಉಲ್ಕಾವೃಷ್ಟಿ ನೋಡುವ ಅವಕಾಶ ವಂಚಿತರಿಗೆ ಮತ್ತೊಮ್ಮೆ ಉಲ್ಕಾವೃಷ್ಟಿ ನೋಡುವ ಅವಕಾಶ ಸಿಕ್ಕಿದೆ. ಜ.12ರವರೆಗೆ ಆಕಾಶದಲ್ಲಿ ಗೋಚರಿಸುವ ಕ್ವಾಡ್ರನ್ಟಿಡ್ ಉಲ್ಕಾವೃಷ್ಟಿಯನ್ನು ಕಣ್ತುಂಬಿಕೊಳ್ಳಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ತಿಳಿಸಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ಗುರು-ಶನಿ ಗ್ರಹಗಳ ಸಮಾಗಮವಾಗಿತ್ತು. ಇದಕ್ಕೂ ಕೆಲವು ದಿನಗಳ ಮುನ್ನ ಜೆಮಿನಿಡ್ ಉಲ್ಕಾವೃಷ್ಟಿ ಸಂಭವಿಸಿತ್ತು. ಈಗ ಕ್ವಾಡ್ರಾನ್ಟಿಡ್ ಉಲ್ಕಾವೃಷ್ಟಿ ವೀಕ್ಷಿಸಬಹುದಾಗಿದೆ. ವರ್ಷದಲ್ಲಿ ಅತಿ ಹೆಚ್ಚು ಸಂಭವಿಸುವ 3 ಉಲ್ಕಾ ವೃಷ್ಟಿಗಳಲ್ಲಿ ಕ್ವಾಡ್ರಾನ್ಟಿಡ್‌ ಕೂಡ ಒಂದಾಗಿದೆ. ಆಗಸ್ಟ್‌ನಲ್ಲಿ ಮತ್ತೊಮ್ಮೆ ಉಲ್ಕಾವೃಷ್ಟಿಯಾಗಲಿದೆ ಎಂದು ತಿಳಿಸಿದ್ದಾರೆ.

ಕ್ವಾಡ್ರಾನ್ಟಿಡ್ ಉಲ್ಕೆಗಳು ‘2003 ಇಎಚ್‌’ ಕ್ಷುದ್ರಗ್ರಹದ ಅವಶೇಷಗಳಿಂದಾಗಿ ಹುಟ್ಟಿದ್ದು, ಕ್ಷುದ್ರಗ್ರಹದ ಕಕ್ಷೆಯು ದೀರ್ಘ ವೃತ್ತಾಕಾರದಲ್ಲಿದೆ. ಸೂರ್ಯನಿಗೆ ಹತ್ತಿರ ಬರುತ್ತ, ಭೂಮಿಯ ಕಕ್ಷೆಗೆ ಹತ್ತಿರವಾಗುತ್ತದೆ. ಸೂರ್ಯನ ಸುತ್ತ ತನ್ನದೇ ಕಕ್ಷೆಯಲ್ಲಿ ಸುತ್ತುವ ಭೂಮಿಯು ಜನವರಿಯಲ್ಲಿ ತನ್ನ ಸ್ಥಾನದಲ್ಲಿ ಇರುವಾಗ, ಈ ಕ್ಷುದ್ರಗ್ರಹದ ಕಕ್ಷೆಯು ಭೂಮಿಯ ಕಕ್ಷೆಗೆ ತುಂಬಾ ಸಮೀಪದಲ್ಲಿ ಹಾದುಹೋಗುತ್ತದೆ. ಈ ವೇಳೆ ಉಲ್ಕಾವೃಷ್ಟಿ ಗೋಚರಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಜೆಮಿನಿಡ್ ಮತ್ತು ಕ್ವಾಡ್ರಾನ್ಟಿಡ್‌ ಉಲ್ಕಾವೃಷ್ಟಿಗಳು ಕ್ಷುದ್ರಗ್ರಹದ ಅವಶೇಷಗಳಿಂದಾಗಿ ಸಂಭವಿಸಿದರೆ, ಇತರೆ ಉಲ್ಕಾವೃಷ್ಟಿಗಳು ಧೂಮಕೇತುಗಳಿಂದ ಸಂಭವಿಸುತ್ತವೆ. ಜ. 3ರ ಮುಂಜಾನೆ ಸುಮಾರು 3 ಗಂಟೆಗೆ ಪೂರ್ವದಿಕ್ಕಿನಲ್ಲಿ ಸ್ವಾತಿ ನಕ್ಷತ್ರ ಗೋಚರಿಸುತ್ತಿದ್ದಂತೆ, ಸಹದೇವ ನಕ್ಷತ್ರಪುಂಜದ ಸಮೀಪ ಉಲ್ಕೆಗಳನ್ನು ನೋಡಬಹುದು. ಗಂಟೆಗೆ 100ರಷ್ಟು ಉಲ್ಕೆಗಳ ಚಲನೆ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT