ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಟಲ್ ರಾಕ್‌ ಇಂಡಿಯನ್‌ ಶಾಲೆಗೆ ಪ್ರಶಸ್ತಿ

ಉಡುಪಿಯಲ್ಲಿ ನಡೆದ ಮೊದಲ ‘ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್‌’ ಕ್ವಿಜ್‌ ಕಾರ್ಯಕ್ರಮ
Last Updated 17 ಜನವರಿ 2020, 9:58 IST
ಅಕ್ಷರ ಗಾತ್ರ

ಉಡುಪಿ: ಕ್ವಿಜ್‌ ಮಾಸ್ಟರ್‌ ಪ್ರಶ್ನೆಗಳನ್ನು ಕೇಳಿ ಮುಗಿಸುವ ಮುನ್ನವೇ ವಿದ್ಯಾರ್ಥಿಗಳಿಂದ ಉತ್ತರಗಳು ತೂರಿ ಬರುತ್ತಿದ್ದವು. ಕಠಿಣ ಪ್ರಶ್ನೆಗಳಿಗೂ ನಾ ಮುಂದು, ತಾ ಮುಂದು ಎಂದು ಮುಗಿಬಿದ್ದು ಉತ್ತರ ಕೊಡುತ್ತಿದ್ದರು. ಕೊನೆಯ ಕ್ಷಣದವರೆಗೂ ಕುತೂಹಲ, ಕಾತರ, ತಳಮಳ ಹಾಗೂ ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಗಿದ್ದ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆ ವಿದ್ಯಾರ್ಥಿಗಳ ಜ್ಞಾನದ ಪರಿಧಿಯನ್ನು ವಿಸ್ತರಿಸಿತು.

ನಗರದ ವಿದ್ಯೋದಯ ಪಬ್ಲಿಕ್ ಶಾಲೆಯ ವಿಶ್ವೇಶತೀರ್ಥ ರಂಗಮಂದಿರದಲ್ಲಿ ಗುರುವಾರ ನಡೆದ ‘ಪ್ರಜಾವಾಣಿ ಹಾಗೂ ಡೆಕ್ಕನ್‌ ಹೆರಾಲ್ಡ್‌’ ರಸಪ್ರಶ್ನೆ ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಯಿತು. ಜಿಲ್ಲೆಯ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದಲೂ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಆರಂಭದಲ್ಲಿ ಸರಿ ಉತ್ತರಗಳನ್ನು ನೀಡಿ ಪ್ರಜ್ಞಾನ್ ಶೆಟ್ಟಿ ಹಾಗೂ ರೇವನ್‌ ಕಾರ್ಯಕ್ರಮ ಉದ್ಘಾಟಿಸುವ ಅವಕಾಶ ಪಡೆದರು. ಅರ್ಹತಾ ಸುತ್ತಿನ ಲಿಖಿತ ಪರೀಕ್ಷೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 20 ಪ್ರಶ್ನೆಗಳಿಗೆ ಅತಿ ಹೆಚ್ಚು ಉತ್ತರ ಕೊಟ್ಟ 6 ಶಾಲೆಗಳ 12 ವಿದ್ಯಾರ್ಥಿಗಳು ಪ್ರಧಾನ ಸುತ್ತಿಗೆ ಆಯ್ಕೆಯಾದರು.

5 ವಿಭಿನ್ನ ಸುತ್ತುಗಳಲ್ಲಿ ನಡೆದ ಕ್ವಿಜ್‌ ಕಾರ್ಯಕ್ರಮ ಅಂತಿಮ ಕ್ಷಣದವರೆಗೂ ರೋಚಕತೆಯಿಂದ ಕೂಡಿತ್ತು. ಕೊನೆ ಸುತ್ತಿನಲ್ಲಿ ಕೇವಲ 2 ಅಂಕಗಳ ಅಂತರದಲ್ಲಿ ಪ್ರತಿಸ್ಪರ್ಧಿಗಳನ್ನು ಮಣಿಸಿದಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್‌ ಶಾಲೆಯ ಪ್ರಭವ್‌ ಹಾಗೂ ರಕ್ಷಿತ್ ಶೆಟ್ಟಿ ಅಗ್ರಸ್ಥಾನ ಪಡೆದು ಪ್ರಶಸ್ತಿ ಮುಡಿಗೇರಿಸಿಕೊಂಡರು.

ಅದೇ ಶಾಲೆಯ ಅಂಕಿತ್ ಕಿಣಿ ಹಾಗೂ ಮುರಳೀಧರ ರಾವ್‌ ದ್ವಿತೀಯ ಸ್ಥಾನ ಪಡೆದರೆ, ಶ್ರೀ ಸಿದ್ಧಿವಿನಾಯಕ ರೆಸಿಡೆನ್ಷಿಯಲ್ ಶಾಲೆಯ ರೋಷನ್‌ ಹಾಗೂ ಪವನ್ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

ಆರಂಭದಲ್ಲೇ ಜೋಶ್‌:ಮೊದಲ ಸುತ್ತಿನಲ್ಲಿ ಪಟಪಟನೆ ಉತ್ತರ ಕೊಟ್ಟ ವಿದ್ಯಾರ್ಥಿಗಳು ಕಾರ್ಯಕ್ರಮದ ಜೋಶ್ ಹೆಚ್ಚಿಸಿದರು. 1989ರಲ್ಲಿ ದೈಲೈಲಾಮಾಗೆ ನೊಬೆಲ್‌ ಸಮಿತಿಯು ಶಾಂತಿ ಪ್ರಶಸ್ತಿ ಕೊಡುವಾಗ ಯಾರ ಹೆಸರನ್ನು ಉಲ್ಲೇಖಿಸಿತು ಎಂಬ ಮೊದಲ ಪ್ರಶಸ್ತಿಗೆ ಲಿಟಲ್ ರಾಕ್ ಶಾಲೆಯ ವಿದ್ಯಾರ್ಥಿಗಳು ಮಹಾತ್ಮಾ ಗಾಂಧಿ ಎಂದು ಉತ್ತರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ನಾಲ್ಕು ನಾಗರಿಕ ಪುರಸ್ಕಾರ ಗೆದ್ದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಭೂಪೇನ್ ಹಜಾರಿಕಾ ಎಂದು ಉತ್ತರಿಸಿದ ಲಿಟಲ್ ರಾಕ್ ಶಾಲೆ ವಿದ್ಯಾರ್ಥಿಗಳು ಎಲ್ಲರ ಹುಬ್ಬೇರಿಸಿದರು. ಪರಿಸರಕ್ಕೆ ಸಂಬಂಧಪಟ್ಟಂತೆ ‘ಪ್ರಜಾವಾಣಿ’ ಪತ್ರಿಕೆ ಕನ್ನಡ ಶಬ್ಧಕೋಶಕ್ಕೆ ನೀಡಿರುವ ಹೊಸ ಪದ ಯಾವುದು ಎಂಬ ಪ್ರಶ್ನೆಗೆ ಮಣಿಪಾಲದ ಮಾಧವ ಕೃಪ ಶಾಲೆಯ ಮಾಧವ ಎಂಬ ವಿದ್ಯಾರ್ಥಿ ‘ಹೊಂಜು’ ಎಂದು ಉತ್ತರಿಸಿ ಗಮನ ಸೆಳೆದ. ನಂತರ ಭಾರತ ರತ್ನ ಪುರಸ್ಕಾರದ ಜತೆಗೆ ಸಿಗುವ ನಗದು ಎಷ್ಟು ಎಂಬ ಪ್ರಶ್ನೆಗೆ ‘ಯಾವ ಮೊತ್ತವೂ ಸಿಗುವುದಿಲ್ಲ’ ಎಂದು ಉತ್ತರಿಸಿ ಚಪ್ಪಾಳೆ ಗಿಟ್ಟಿಸಿದ.

ಬಳಿಕ ಸರಿ–ತಪ್ಪು 2ನೇ ಸುತ್ತಿನಲ್ಲಿ ಯಾವ ತಂಡಗಳೂ ಸರಿ ಉತ್ತರ ನೀಡಲಿಲ್ಲ. ಈ ಸಂದರ್ಭ ಕ್ವಿಜ್‌ ಮಾಸ್ಟರ್‌ ಮೇಘವಿ ಮಕ್ಕಳಲ್ಲಿ ಧೈರ್ಯ ತುಂಬಿ, ಯೋಚಿಸಿ ಉತ್ತರಿಸುವಂತೆ ಸಲಹೆ ನೀಡಿದರು. ಜತೆಗೆ, ಆಗಾಗ ಸುಳಿವುಗಳನ್ನು ನೀಡಿ ಪ್ರೋತ್ಸಾಹಿಸಿದರು.‌

ಮೂರನೇಯ ಬಜರ್‌ ಸುತ್ತಿನ ಕನೆಕ್ಟಿವ್ ಪ್ರಶ್ನೆಗಳಿಗೆಲಿಟಲ್‌ ರಾಕ್ ಶಾಲೆಯ ಪ್ರಭವ್‌ ಹಾಗೂ ರಕ್ಷಿತ್‌ ಉತ್ತರಿಸಿ ಬರೋಬ್ಬರಿ 45 ಅಂಕ ಗಿಟ್ಟಿಸಿ ಮುನ್ನಡೆ ಪಡೆದರು. ನಾಲ್ಕನೇ ರ್‍ಯಾಪಿಡ್ ಸುತ್ತಿನಲ್ಲಿ ಅದೇ ಶಾಲೆಯ ಅಂಕಿತ್ ಕಿಣಿ ಹಾಗೂ ಮುರಳೀಧರ ರಾವ್ 45 ಅಂಕಪಡೆದು ಗಮನ ಸೆಳೆದರು.

ಹಿಂದೆ ಮಿಲಿಟರಿಗೆ ಬಳಕೆಯಲ್ಲಿದ್ದ, ಕತ್ತಲಲ್ಲಿಯೂ ಸಂವಹನ ಸಾಧ್ಯವಾಗುವ, ಈಗ ಹೆಚ್ಚು ಬಳಕೆಯಲ್ಲಿರುವ ವಸ್ತು ಯಾವುದು ಎಂಬ ಕಠಿಣ ಪ್ರಶ್ನೆಗೆ ‘ಬ್ರೈಲ್‌’ ಎಂದು ಉತ್ತರಿಸಿದ ವಿದ್ಯಾರ್ಥಿಗಳು ಮೆಚ್ಚುಗೆ ಪಡೆದರು. ನಟ ವಿಜಯ್ ರಾಘವೇಂದ್ರ ಕೂಡ ಒಂದು ಪ್ರೇಕ್ಷಕರಿಗೆ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

5ನೇ ಸುತ್ತಿನಲ್ಲಿ ಲಿಟಲ್‌ ರಾಕ್ ಶಾಲೆಯ ಎರಡು ಶಾಲೆಗಳ ನಡುವೆಯೇ ಪೈಪೋಟಿ ಮುಂದುವರಿಯಿತು. ಅಂತಿಮ ಸುತ್ತಿನಲ್ಲಿ ಎಚ್ಚರಿಕೆಯ ಆಟವಾಡಿದ ಪ್ರಭವ್ ಹಾಗೂ ರಕ್ಷಿತ್‌ ವಿಜಯಮಾಲೆಗೆ ಕೊರಳೊಡ್ಡಿದರು. ಮೊದಲ ಮೂರು ತಂಡಗಳಿಗೆ ಕ್ರಮವಾಗಿ ₹ 6000,₹ 4000 ಹಾಗೂ ₹ 2000 ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಲಾಯಿತು.

ನಟ ವಿಜಯ್ ರಾಘವೇಂದ್ರ, ನಟಿ ಗ್ರೀಷ್ಮಾ ವಿಜೇತರಿಗೆ ಬಹುಮಾನ ವಿತರಿಸಿದರು. ದೀಕ್ಷಾ ಸಂಸ್ಥೆಯ ಸಹಯೋಗದಲ್ಲಿ ನಡೆದ ಕ್ವಿಜ್ ಕಾರ್ಯಕ್ರಮಕ್ಕೆ ಮಾಲ್ಗುಡಿ ಡೇಸ್‌, ಕೆನರಾ ಬ್ಯಾಂಕ್‌ ಸಹಪ್ರಯೋಜಕತ್ವ ವಹಿಸಿತ್ತು. ವಿದ್ಯೋದಯ ಪಬ್ಲಿಕ್ ಶಾಲೆ, ಕೆಎಂಎಫ್‌ ನೆರವು ಹಾಗೂ ಪಲಿಮಾರು ಮಠದಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‌ ಉಡುಪಿ ವಿಭಾಗದ ಎಜಿಎಂ ನಂಜುಂಡಪ್ಪ, ಪ್ರಜಾವಾಣಿ ಮಂಗಳೂರು ಬ್ಯುರೋ ಮುಖ್ಯಸ್ಥರಾದ ಪ್ರಕಾಶ ಕುಗ್ವೆ, ಪ್ರಸರಣ ವಿಭಾಗದ ಪ್ರಕಾಶ್ ನಾಯಕ್‌, ಸಂತೋಷ್ ಭಂಡಾರಿ, ಜಾಹೀರಾತು ವಿಭಾಗದ ಜಯಪ್ರಕಾಶ್‌, ವಿನ್ಸೆಂಟ್‌ ಪ್ರಶಾಂತ್‌ ಇದ್ದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಈಚೆಗೆ ಕೃಷ್ಣೈಕ್ಯರಾದ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳಿಗೆ ಸಂತಾಪ ಸೂಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT