ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಾಂತ್ ಕುಟಂಬದಲ್ಲಿ ನೀರವ ಮೌನ

ಮಗನ ನೋಡಲು ಹಂಬಲಿಸುತ್ತಿರುವ ತಾಯಿ
Last Updated 31 ಮಾರ್ಚ್ 2019, 19:09 IST
ಅಕ್ಷರ ಗಾತ್ರ

ಉಡುಪಿ: ಜರ್ಮನಿಯ ಮ್ಯುನಿಚ್ ನಗರದಲ್ಲಿ ಅಪರಿಚಿತ ವ್ಯಕ್ತಿಯಿಂದ ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಕುಂದಾಪುರ ತಾಲ್ಲೂಕಿನ ಪ್ರಶಾಂತ್ ಅವರ ಕುಟುಂಬದಲ್ಲಿ ಮೌನ ಆವರಿಸಿದೆ. ಪ್ರಶಾಂತ್ ಅವರ ಮೃತದೇಹವನ್ನು ನೋಡಲು ಸರ್ಕಾರ ಆದಷ್ಟು ಬೇಗ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದೆ.

ಈ ಸಂಬಂಧ ಉಡುಪಿಯಲ್ಲಿರುವ ಪ್ರಶಾಂತ್ ಸಹೋದರಿ ಸಾಧನಾ ಪತಿ ಶ್ರೀನಿವಾಸ ಶೇರಿಗಾರ್ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಪ್ರಶಾಂತ್ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರ್‌ ಪದವಿ ಪಡೆದಿದ್ದರು. ಬಳಿಕ ಬೆಂಗಳೂರು ಹಾಗೂ ಹೈದರಾಬಾದ್‌ನ ಖಾಸಗಿ ಕಂಪೆನಿಗಳಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ಸತ್ಯಂ ಕಂಪ್ಯೂಟರ್ಸ್‌ ಕಂಪೆನಿಯ ಮೂಲಕ ಜರ್ಮನಿಯಲ್ಲಿ ಕೆಲಸ ಮಾಡುವ ಅವಕಾಶ ಪ್ರಶಾಂತ್ ಅವರಿಗೆ ದೊರೆಯಿತು. 2003ರಲ್ಲಿ ಪತ್ನಿಯ ಜತೆಗೆ ಜರ್ಮನಿಗೆ ಹೋಗಿದ್ದ ಅವರು 15 ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡರು.

ಆರಂಭದಲ್ಲಿ ಹ್ಯಾಂಬರ್ಗ್‌ನಲ್ಲಿ ನೆಲೆಸಿದ್ದ ಅವರು, ಬಳಿಕ ಮ್ಯೂನಿಚ್‌ ನಗರಕ್ಕೆವರ್ಗಾವಣೆಗೊಂಡಿದ್ದರು. ಅಲ್ಲಿಗೆ ಹೋದ ಮೇಲೆ ಇಂತಹ ದುರ್ಘಟನೆ ಸಂಭವಿಸಿದೆ. ಇಲ್ಲಿ ಮಗನನ್ನು ನೋಡಬೇಕು ಎಂದು 73 ವರ್ಷದ ತಾಯಿ ಗೋಳಾಡುತ್ತಿದ್ದಾರೆ. ಅವರಿಗೆ ಜರ್ಮನಿಗೆ ತೆರಳಲು ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಪ್ರಶಾಂತ್‌ಗೆ ತಾಯಿ ಬಗ್ಗೆ ಕಾಳಜಿ ಹೆಚ್ಚು. ಆಗಾಗ ಕರೆ ಮಾಡಿ ಆರೋಗ್ಯವಿಚಾರಿಸಿಕೊಳ್ಳುತ್ತಿದ್ದರು. ತಾಯಿಗಾಗಿ 2013ರಲ್ಲಿ ಕುಂದಾಪುರ ತಾಲ್ಲೂಕಿನ ಕುಂದೇಶ್ವರ ದೇವಸ್ಥಾನದ ಬಳಿ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದರು.ತಾಯಿ ಅದೇ ಮನೆಯಲ್ಲಿ ವಾಸ ಮಾಡಿಕೊಂಡಿದ್ದಾರೆ. ಮಾರ್ಚ್‌ 23ರಂದು ಕೊನೆಯ ಬಾರಿ ಕರೆಮಾಡಿ ತಾಯಿಯ ಜತೆಗೆ ಮಾತನಾಡಿದ್ದರು. ಏಪ್ರಿಲ್‌ನಲ್ಲಿ ಊರಿಗೆ ಬರುವುದಾಗಿ ಹೇಳಿದ್ದರು ಎಂದು ತಿಳಿಸಿದರು.

ಪ್ರಶಾಂತ್‌ ತಾಯಿ ವಿನಯಾ, ತಂದೆ ವೆಂಕಟರಾಮ್‌. ತಂದೆ ಸಾಗರದಲ್ಲಿ ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಇಬ್ಬರು ಗಂಡುಮಕ್ಕಳ ಪೈಕಿ ಪ್ರಶಾಂತ್ ಕಿರಿಯವರು. ಅಣ್ಣ ಪ್ರಭಾತ್‌ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಕ್ಕ ಸಾಧನಾ ಅಂಬಲಪಾಡಿಯಲ್ಲಿ ವಾಸವಿದ್ದಾರೆ ಎಂದು ಕುಟುಂಬದ ವಿವರನೀಡಿದರು.

ಮೃತದೇಹವನ್ನು ಸರ್ಕಾರದ ಮೂಲಕ ಊರಿಗೆ ತೆಗೆದುಕೊಂಡು ಬರಲು ಪ್ರಯತ್ನಿಸುತ್ತಿದ್ದೇವೆ ಎಂದು ಶ್ರೀನಿವಾಸ್ ಶೇರಿಗಾರ್ ತಿಳಿಸಿದರು.

ಪ್ರಶಾಂತ್ ತಾಯಿ ಹಾಗೂ ಅಣ್ಣ ಜರ್ಮನಿಗೆ ತೆರಳುವ ಸಲುವಾಗಿ ಪಾಸ್‌ಪೋರ್ಟ್‌ ನವೀಕರಣ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ತುರ್ತಾಗಿ ಜರ್ಮನಿಗೆ ತೆರಳಲು ಎಲ್ಲ ವ್ಯವಸ್ಥೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

‘ಅರ್ಧಕ್ಕೆ ನಿಂತ ಮನೆ’
‘ಪ್ರಶಾಂತ್‌ ವರ್ಷದ ಹಿಂದೆಯಷ್ಟೇ ಜರ್ಮನಿ ದೇಶದ ಪೌರತ್ವ ಪಡೆದುಕೊಂಡಿದ್ದರು. ಈ ವಿಚಾರವನ್ನು ಕರೆ ಮಾಡಿ ತಿಳಿಸಿದ್ದರು. ಪೌರತ್ವ ಸಿಕ್ಕಿದ ಹಿನ್ನೆಲೆಯಲ್ಲಿ ಅಲ್ಲಿಯೇ ಸ್ವಂತ ಮನೆ ನಿರ್ಮಿಸಲು ಮುಂದಾಗಿದ್ದು, ಅರ್ಧದಷ್ಟು ನಿರ್ಮಾಣ ಕಾಮಗಾರಿಯೂ ಮುಗಿದಿದೆ’ ಎಂದು ಅವರ ಅಕ್ಕ ಸಾಧನಾ ಹೇಳಿದರು.

**
ಪ್ರಶಾಂತ್‌ ಅವರಿಗೆ ಇಬ್ಬರು ಮಕ್ಕಳು. ಮಗಳು 10ನೇ ತರಗತಿ, ಮಗ 3ನೇ ತರಗತಿ ಓದುತ್ತಿದ್ದಾನೆ. ಪತ್ನಿ ಸ್ಮಿತಾ ಒಂದು ವರ್ಷದ ಹಿಂದಷ್ಟೆ ಕೆಲಸಕ್ಕೆ ಹೋಗಲು ಶುರುಮಾಡಿದ್ದರು.
-ಶ್ರೀನಿವಾಸ ಶೇರಿಗಾರ್, ಪ್ರಶಾಂತ್ ಭಾವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT