ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ1ರಿಂದ ಖಾಸಗಿ ಬಸ್‌ ಸಂಚಾರ: ಟಿಕೆಟ್ ದರ ಶೇ 25 ಹೆಚ್ಚಳ

ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಖಾಸಗಿ ಬಸ್ ಮಾಲೀಕರ ಸಭೆ
Last Updated 25 ಜೂನ್ 2021, 16:17 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಜುಲೈ 1ರಿಂದ ಖಾಸಗಿ ಬಸ್‌ಗಳ ಸಂಚಾರ ಆರಂಭವಾಗಲಿದ್ದು, ಪ್ರಯಾಣ ದರವನ್ನು ಶೇ 25ರಷ್ಟು ಹೆಚ್ಚಿಸಲು ಖಾಸಗಿ ಬಸ್‌ ಮಾಲೀಕರು ತೀರ್ಮಾನಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಟಿಕೆಟ್‌ ದರ ಏರಿಕೆ, ತೆರಿಗೆ ವಿನಾಯಿತಿ ಸೇರಿದಂತೆ ಹಲವು ಬೇಡಿಕೆಗಳನ್ನು ಖಾಸಗಿ ಬಸ್ ಮಾಲೀಕರು ಸಭೆಯ ಮುಂದಿಟ್ಟರು.

ಲಾಕ್‌ಡೌನ್‌ನಿಂದಾಗಿ ಬಸ್‌ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಬಸ್‌ನಲ್ಲಿ ಶೇ 50ರಷ್ಟು ಆಸನಗಳನ್ನು ಮಾತ್ರ ಭರ್ತಿ ಮಾಡಲು ಅನುಮತಿ ನೀಡಿರುವುದರಿಂದ ಮತ್ತಷ್ಟು ಹೊರೆ ಬೀಳಲಿದೆ. ತೈ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರ್ಧದಷ್ಟು ಸೀಟುಗಳಲ್ಲಿ ಪ್ರಯಾಣಿಕರನ್ನು ತುಂಬಿಸಿಕೊಂಡು ಓಡಿಸಲು ಸಾಧ್ಯವಿಲ್ಲ ಎಂದು ಬಸ್ ಮಾಲೀಕರು ಸಭೆಗೆ ತಿಳಿಸಿದರು.

ಸರ್ಕಾರ 2 ರಿಂದ 3 ತಿಂಗಳು ತೆರಿಗೆ ವಿನಾಯಿತಿ ನೀಡದಿದ್ದರೆ ಬಸ್‌ಗಳನ್ನು ರಸ್ತೆಗಿಳಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದ ಮಾಲೀಕರು, ಜುಲೈ 1ರಿಂದ ಬಸ್‌ಗಳನ್ನು ರಸ್ತೆಗಿಳಿಸಲು ಸಿದ್ಧರಿದ್ದು, ಶೇ 25 ಪ್ರಯಾಣದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದರು.

ಸಾರ್ವಜನಿಕರಿಗೆ ದರ ಏರಿಕೆ ಬಿಸಿ:

ಕೋವಿಡ್–19 ಲಾಕ್‌ಡೌನ್‌ನಿಂದ ಎರಡು ತಿಂಗಳುಗಳಿಂದ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತವಾಗಿದೆ. ಸದ್ಯ ಬಸ್‌ಗಳ ಓಡಾಟಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಖಾಸಗಿ ಬಸ್‌ಗಳು ನಷ್ಟದ ಕಾರಣದಿಂದ ಬಸ್‌ಗಳನ್ನು ಓಡಿಸಿರಲಿಲ್ಲ. ಪರಿಣಾಮ ನಿತ್ಯದ ಕೆಲಸ ಕಾರ್ಯಗಳಿಗೆ ಖಾಸಗಿ ಬಸ್‌ಗಳನ್ನು ಅವಲಂಬಿಸಿದ್ದ ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು.

ಸಭೆಯಲ್ಲಿ ಶಾಸಕ ರಘುಪತಿ ಭಟ್‌, ಜಿಲ್ಲಾಧಿಕಾರಿ ಜಿ.ಜಗದೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ಉಡುಪಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪದಾಧಿಕಾರಿಗಳಾದ ಸದಾನಂದ ಛಾತ್ರ, ಪ್ರಸಾದ್ ಬಲ್ಲಾಳ್, ಶಿವರಾಮ ಶೆಟ್ಟಿ, ಸಂದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT