ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕು’

ನರಸಿಂಹ ಮೂರ್ತಿ ಬಂಧನ ಖಂಡಿಸಿ ಪ್ರತಿಭಟನೆ
Last Updated 31 ಅಕ್ಟೋಬರ್ 2019, 15:55 IST
ಅಕ್ಷರ ಗಾತ್ರ

ಉಡುಪಿ: ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತಿದೆ. ಅನ್ಯಾಯವನ್ನು ಖಂಡಿಸುವ, ಪ್ರಶ್ನೆಮಾಡುವ ಅಧಿಕಾರವನ್ನು ಬಲವಂತವಾಗಿ ಕಿತ್ತುಕೊಳ್ಳಲಾಗುತ್ತಿದೆ ಎಂದು ದಲಿತ ಮುಖಂಡ ಸುಂದರ್ ಮಾಸ್ತರ್ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ ಖಂಡಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಗುರುವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ನರಸಿಂಹ ಮೂರ್ತಿ ಅವರ ಬಂಧನದಿಂದ ಪ್ರಗತಿಪರರ ಧನಿ ಅಡಗಿಸಲು ಸಾಧ್ಯವಿಲ್ಲ. ಅನ್ಯಾಯದ ವಿರುದ್ಧ ಹೋರಾಟ ತೀವ್ರವಾಗಲಿದೆ. ಸರ್ಕಾರ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಕೋಮು ಸೌಹಾರ್ದ ವೇದಿಕೆ ಗೌರವಾಧ್ಯಕ್ಷ ವಿಲಿಯಂ ಮಾರ್ಟಿಸ್ ಮಾತನಾಡಿ, ಸರ್ಕಾರ ಬುದ್ದಿಜೀವಿಗಳ ವಿರುದ್ಧ ಸಮರ ಸಾರಿದೆ. ಅನ್ಯಾಯವನ್ನು ಪ್ರಶ್ನೆಮಾಡುವವರನ್ನು ಜೈಲಿಗಟ್ಟುತ್ತಿದೆ. ಬೆದರಿಕೆಗಳಿಗೆ ಹೋರಾಟಗಾರರು ಬಗ್ಗುವುದಿಲ್ಲ. ನಿರಂತರವಾಗಿ ಪ್ರಶ್ನೆ ಮಾಡುತ್ತಲೇ ಇರುತ್ತೇವೆ ಎಂದರು.

ಕೋಮು ಸೌಹಾರ್ದ ವೇದಿಕೆ ಅಧ್ಯಕ್ಷ ಜಿ.ರಾಜಶೇಖರ್ ಮಾತನಾಡಿ, ಬಂಧನಕ್ಕೊಳಗಾಗಿರುವ ನರಸಿಂಹ ಮೂರ್ತಿ ಸ್ವರಾಜ್ ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಗೌರಿ ಮೀಡಿಯಾ ಟ್ರಸ್ಟ್‌ ಕಾರ್ಯದರ್ಶಿಯಾಗಿದ್ದಾರೆ. ಮೂರು ದಶಕಗಳಿಂದ ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇಂಥ ವ್ಯಕ್ತಿಯನ್ನು ವಿಚಾರಣೆ ನೆಪದಲ್ಲಿ ಬಂಧಿಸಿದ್ದು ಖಂಡನೀಯ ಎಂದರು.

ದಶಕಗಳಿಂದ ನಿರಂತರವಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ನರಸಿಂಹ ಮೂರ್ತಿ ಅವರನ್ನು 25 ವರ್ಷಗಳ ಬಳಿಕ ಪ್ರಕರಣವೊಂದರಲ್ಲಿ ಬಂಧಿಸಿರುವುದು ಸರಿಯಲ್ಲ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೋಮು ಸೌಹಾರ್ದ ವೇದಿಕೆ ಉಪಾಧ್ಯಕ್ಷ ಕೆ.ಫಣಿರಾಜ್, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಸಂಚಾಲಕ ಶ್ಯಾಮರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT