ಮೋಟಾರು ವಾಹನ ಮಸೂದೆ ಹಿಂಪಡೆಯಿರಿ

7
ಕುಂದಾಪುರ ಹಾಗೂ ಉಡುಪಿ ಆಟೊರಿಕ್ಷಾ ಮತ್ತು ವಾಹನ ಮಾಲೀಕರ ಸಂಘದಿಂದ ಪ್ರತಿಭಟನೆ

ಮೋಟಾರು ವಾಹನ ಮಸೂದೆ ಹಿಂಪಡೆಯಿರಿ

Published:
Updated:
Deccan Herald

ಉಡುಪಿ: ಮೋಟಾರು ವಾಹನ ಮಸೂದೆ–2017 ಹಿಂತೆಗೆದುಕೊಳ್ಳಬೇಕು, ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕುಂದಾಪುರ ಹಾಗೂ ಉಡುಪಿ ಆಟೊರಿಕ್ಷಾ ಮತ್ತು ವಾಹನ ಮಾಲೀಕರ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು, ವಾಹನ ಮಾಲೀಕರನ್ನು ಹಾಗೂ ಕಾರ್ಮಿಕರನ್ನು ನಾಶಮಾಡಲು ಹೊರಟಿದೆ. ಸಾರಿಗೆ ಕ್ಷೇತ್ರವನ್ನು ಕಾರ್ಪೊರೆಟ್ ಕಂಪೆನಿಗಳಿಗೆ ಒಪ್ಪಿಸಲು ಮುಂದಾಗಿದೆ. ಕೂಡಲೇ ಕೇಂದ್ರ ಸರ್ಕಾರ ಮೋಟಾರು ವಾಹನ ಮಸೂದೆಯನ್ನು ವಾಪಸ್‌ ಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಉದ್ದೇಶಿತ ಮುಸೂದೆ ಜಾರಿಯಾದರೆ ವಾಹನಗಳ ‘ರೀಕಾಲ್‌’ ಮಾಡುವ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರಲಿದ್ದು, ಅವೈಜ್ಞಾನಿಕ ಮಾನದಂಡಗಳನ್ನು ನಿಗದಿಮಾಡಿ ವಾಹನಗಳನ್ನು ಬಹುಬೇಗ ಗುಜರಿಗೆ ತಳ್ಳಲಾಗುವುದು. ಡ್ರೈವಿಂಗ್ ಶಾಲೆಯಿಂದ ಹಿಡಿದು, ವಾಹನಗಳ ನೋಂದಣಿ, ಲೈಸೆನ್ಸ್ ನವೀಕರಣ, ಫಿಟ್ನೆಸ್ ಸರ್ಟಿಫಿಕೆಟ್‌, ವಾಹನ ರಿಪೇರಿ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಕಾರ್ಪೊರೆಟ್‌ ವ್ಯವಸ್ಥೆಯ ಹಸ್ತಕ್ಷೇಪವಾಗಲಿದೆ. ಇದರಿಂದ ವಾಹನ ಮಾಲೀಕರ ಸುಲಿಗೆಯಾಗಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಅಪಘಾತಗಳಿಗೆ ಕಾರಣವಾಗುವ ಇತರ ಕಾರಣಗಳನ್ನು ಮಸೂದೆಯಲ್ಲಿ ಕಡೆಗಣಿಸಿ, ಅಪಘಾತಗಳಿಗೆ ಚಾಲಕರು, ನಿರ್ವಾಹಕರನ್ನು ಹೊಣೆ ಮಾಡಲಾಗಿದೆ. ಇತಿಮಿತಿ ಇಲ್ಲದೆ ದಂಡ ಹಾಕುವ ನಿಯಮಗಳು ಮಸೂದೆಯಲ್ಲಿದ್ದು, ಇದೊಂದು ಕಾರ್ಮಿಕ ವಿರೋಧಿ ನೀತಿ ಎಂದು ಟೀಕಿಸಿದರು.

ಉದ್ದೇಶಿತ ಮಸೂದೆ ಜಾರಿಯಾದರೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಲಿದೆ. ವಾಹನ ಬಿಡಿಭಾಗಗಳ ಮಾರಾಟಗಾರರು ಬೀದಿಗೆ ಬೀಳಲಿದ್ದಾರೆ. ಸಾರಿಗೆ ಕ್ಷೇತ್ರ ಸಂಪೂರ್ಣವಾಗಿ ಕಾರ್ಪೊರೆಟ್‌ ಹಿಡಿತಕ್ಕೆ ಸಿಲುಕಲಿದೆ. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದರೆ, ದೇಶದಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆ ಜಾರಿ ಮಾಡಬೇಕು. ರಾಜ್ಯ ರಸ್ತೆ ಸಾರಿಗೆ ನಿಗಮಗಳನ್ನು ಆರ್ಥಿಕಹೊರೆಯಿಂದ ರಕ್ಷಿಸಬೇಕು. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ವಿಪರೀತ ದಂಡ ಹಾಗೂ ಶಿಕ್ಷೆಯ ಪ್ರಮಾಣ ತಗ್ಗಿಸಬೇಕು. ವಿಮಾ ಪ್ರೀಮಿಯಂ ಮೊತ್ತ ಕಡಿತಗೊಳಿಸಬೇಕು. ಚಾಲಕರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ಸೂಕ್ತ ರಾಷ್ಟ್ರೀಯ ಸಾರಿಗೆ ನೀತಿ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !