ಮಂಗಳವಾರ, ಡಿಸೆಂಬರ್ 10, 2019
19 °C
ಪರಿಹಾರ ತಲುಪಿರುವ ಕುರಿತು ಖುದ್ದು ಪರಿಶೀಲನೆ: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ

ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಈಚೆಗೆ ಸುರಿದ ಭಾರಿ ಮಳೆ ಹಾಗೂ ಪ್ರಾಕೃತಿಕ ವಿಕೋಪಗಳಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗಬೇಕು. ಸವಲತ್ತು ತಲುಪಿರುವ ಕುರಿತು ಲೋಕಾಯುಕ್ತ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 
ಕಂದಾಯ ಇಲಾಖೆಯಿಂದ ಪ್ರಾಕೃತಿಕ ವಿಕೋಪ ಸಂತ್ರಸ್ತರ ಪಟ್ಟಿ ಪಡೆದು, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳು ಖುದ್ದು ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ, ಪರಿಹಾರ ಮೊತ್ತ ದೊರಕಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.

ವಸತಿ ಯೋಜನೆಯಲ್ಲಿ ಅರ್ಹರಿಗೆ ಮನೆಗಳು ಮಂಜೂರಾಗುವಂತೆ ಕ್ರಮ ತೆಗೆದುಕೊಳ್ಳಬೇಕು. ಹಲವು ಕಡೆಗಳಲ್ಲಿ ಅನರ್ಹರಿಗೂ ವಸತಿ ಯೋಜನೆಯಡಿ ಮನೆ ಮಂಜೂರು ಮಾಡುವಂತೆ ಪಿಡಿಒಗಳ ಮೇಲೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಒತ್ತಡ ಹೇರಿರುವ ಬಗ್ಗೆ ದೂರುಗಳು ಬಂದಿವೆ. ಅರ್ಹರಿಗೆ ಮಾತ್ರ ಸೌಲಭ್ಯಗಳು ಸಿಗಬೇಕು ಎಂದರು.

ಅಮೇರಿಕಾದಲ್ಲಿ ಉದ್ಯೋಗದಲ್ಲಿರುವವರಿಗೂ ವಸತಿ ಯೋಜನೆಯ ಮನೆ ಮಂಜೂರಾಗಿರುವ ಪ್ರಕರಣಗಳು ಪತ್ತೆಯಾಗಿವೆ. ಹಾಗಾಗಿ, ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಮುತುವರ್ಜಿ ವಹಿಸಬೇಕು. ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗಬಾರದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸೂಚಿಸಿದರು.‌

ಮಧ್ಯವರ್ತಿಗಳನ್ನು ದೂರವಿಡಿ:

ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಸೇವೆಗಳನ್ನು ಪಡೆಯಲು ದುಬಾರಿ ಹಣ ಖರ್ಚು ಮಾಡಬೇಕು ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಬ್ರೋಕರ್ಸ್‌ಗಳನ್ನು ಆರ್‌ಟಿಒ ಕಚೇರಿಯಿಂದ ದೂರವಿಡಬೇಕು. ಪರ್ಮಿಟ್ ಪಡೆದಿರುವ ಖಾಸಗಿ ಬಸ್‍ಗಳು ನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಕೃಷಿ ಹೊಂಡ ನಿರ್ಮಾಣ ಯೋಜನೆ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿಯಾಗಿಲ್ಲ. ಈ ನಿಟ್ಟಿನಲ್ಲಿ ಕೃಷಿಹೊಂಡಗಳ ಮಹತ್ವದ ಬಗ್ಗೆ ಕೃಷಿಕರಿಗೆ ಅರಿವು ಮೂಡಿಸಿ, ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಶ್ರಮಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯ್ತಿ ಸಿಇಒ ಪ್ರೀತಿ ಗೆಹ್ಲೋಟ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಮಲಾ, ಎಎಸ್‌ಪಿ ಕುಮಾರ ಚಂದ್ರ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)