ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಫಲಿತಾಂಶ: ಉಡುಪಿಯ ‘ಭವ್ಯ‘ ಸಾಧನೆ

ತೃತೀಯ ರ‍್ಯಾಂಕ್ ಪಡೆದ ಉಡುಪಿಯ ಓಂಕಾರ್ ಪ್ರಭು, ಕಾರ್ಕಳದ ಅದ್ವೈತ್ ಶರ್ಮ
Last Updated 18 ಜೂನ್ 2022, 19:30 IST
ಅಕ್ಷರ ಗಾತ್ರ

ಉಡುಪಿ: ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿನಿ ಭವ್ಯಾ ನಾಯಕ್ ವಿಜ್ಞಾನ ವಿಭಾಗದಲ್ಲಿ 597 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಮೊದಲ ರ‍್ಯಾಂಕ್ ಪಡೆದರೆ, ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ವಿದ್ಯಾರ್ಥಿ ಓಂಕಾರ್ ಪ್ರಭು (596) ಹಾಗೂ ಕಾರ್ಕಳದ ಭುವನೇಂದ್ರ ಕಾಲೇಜು ವಿದ್ಯಾರ್ಥಿ ಯು.ಎಸ್‌.ಅದ್ವೈತ್ ಶರ್ಮಾ (596) ರಾಜ್ಯಕ್ಕೆ ತೃತೀಯ ಸ್ಥಾನಿಗಳಾಗಿದ್ದಾರೆ.

ಅಪ್ಪಳ ಮಾರುವವರ ಪುತ್ರಿಯ ಸಾಧನೆ:

ಉಡುಪಿಯ ನಾರಾಯಣ್‌ ನಾಯಕ್ ಹಾಗೂ ಉಮಾ ನಾಯಕ್ ದಂಪತಿ ಮನೆಯಲ್ಲಿ ಹಪ್ಪಳ ತಯಾರಿಸಿ ಅಂಗಡಿಗಳಿಗೆ ಹಾಗೂ ಮನೆಗಳಿಗೆ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್ಥಿಕ ಸವಾಲುಗಳ ಮಧ್ಯೆಯೂ ಇಬ್ಬರು ಪುತ್ರಿಯರ ವಿದ್ಯಾಭ್ಯಾಸಕ್ಕೆ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ.

ಅಕ್ಕ ಪವಿತ್ರಾ ನಾಯಕ್ ಕಂಪ್ಯೂಟರ್‌ ಸೈನ್ಸ್ ಎಂಜಿನಿಯರಿಂಗ್ ಕಲಿಯುತ್ತಿದ್ದು ಭವ್ಯಾ ನಾಯಕ್ ಕೂಡ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡುವ ಆಸೆ ಹೊಂದಿದ್ದಾರೆ. ಇದಕ್ಕಾಗಿ ಸಿಇಟಿ ಪರೀಕ್ಷೆ ಬರೆದಿದ್ದು, ಜೆಇಇ ಮುಖ್ಯ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಾರೆ.

ಕಠಿಣ ಶ್ರಮಕ್ಕೆ ಸಿಕ್ಕ ಫಲ:

ಉಡುಪಿಯ ಸಂಧ್ಯಾಪಾಟೀಲ್ ಹಾಗೂ ರಾಮದಾಸ್ ಪ್ರಭು ದಂಪತಿಯ ಪುತ್ರ ಓಂಕಾರ್ ಪ್ರಭು ವಿಜ್ಞಾನ ವಿಭಾಗದಲ್ಲಿ 596 ಅಂಕಗಳೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

ತಾಯಿ ಸಂಧ್ಯಾಪಾಟೀಲ್ ಮಣಿಪಾಲದ ಮಾಧವ ಕೃಪ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ತಂದೆ ರಾಮದಾಸ್ ಪ್ರಭು ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.

ಓದಿನಲ್ಲಷ್ಟೆ ಅಲ್ಲ ತಬಲಾದಲ್ಲಿ ಜ್ಯೂನಿಯರ್ ಪರೀಕ್ಷೆ ಉತ್ತೀರ್ಣರಾಗಿರುವ ಓಂಕಾರ್ ಪ್ರಭು ಸೀನಿಯರ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಉತ್ತಮ ಬ್ಯಾಡ್ಮಿಂಟನ್ ಆಟಗಾರನಾಗಿರುವ ಓಂಕಾರ್ ಪ್ರಭು ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದಾರೆ.

ಸಾಧನೆಯ ಹಿಂದಿನ ಹಾದಿ...

ವಿದ್ಯೋದಯ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆಗಾಗಿಯೇ ರೂಪಿಸಲಾಗಿದ್ದ ಪ್ರತ್ಯೇಕ ಬುಕ್‌ ಅಭ್ಯಾಸ ಮಾಡಿದ್ದು ಹೆಚ್ಚಿನ ಅಂಕಗಳಿಕೆಗೆ ನೆರವಾಯಿತು. ಪ್ರತಿದಿನ ಮೂರರಿಂದ ನಾಲ್ಕು ತಾಸು ಓದುತ್ತಿದ್ದೆ. ಪಿಯುಸಿ ಪರೀಕ್ಷೆ ಎದುರಿಸಲು ಆನ್‌ಲೈನ್‌ ಕೋಚಿಂಗ್ ಪಡೆಯುತ್ತಿದ್ದೆ. ಮುಂದೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಮಾಡುವ ಆಸೆ ಇದ್ದು, ಕಂಪ್ಯೂಟರ್‌ ಸೈನ್ಸ್‌ನಲ್ಲಿ ಉನ್ನತ ಹುದ್ದೆ ಪಡೆಯಬೇಕು ಎಂಬ ಗುರಿ ಇದೆ ಎನ್ನುತ್ತಾರೆ ಓಂಕಾರ್ ಪ್ರಭು.

ಇಷ್ಟಪಟ್ಟು ಓದಿದಕ್ಕೆ ಪ್ರತಿಫಲ

ಕಾಲೇಜಿನಲ್ಲಿ ಪಾಠವನ್ನು ಗಮನವಿಟ್ಟು ಕೇಳುತ್ತಿದ್ದೆ. ಅಂದಿನ ಪಾಠಗಳನ್ನು ಅಂದೇ ಪುನರ್‌ ಮನನ ಮಾಡಿಕೊಳ್ಳುತ್ತಿದೆ. ಸಂಶಯಗಳು ಬಂದರೆ ತಕ್ಷಣ ಪ್ರಾಧ್ಯಾಪಕರ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತಿದ್ದೆ. ಮನೆಯಲ್ಲಿ ಟೈಂಟೇಬಲ್‌ ಹಾಕಿಕೊಂಡು ಒದಲಿಲ್ಲ. ಆದರೆ, ಓದುವ ಮನಸ್ಸಾದಾಗ ಇಷ್ಟಪಟ್ಟು ತುಂಬ ಹೊತ್ತು ಓದುತ್ತಿದ್ದೆ. ಕಾಲೇಜಿನ ಆನ್‌ಲೈನ್ ತರಗತಿ ಹಾಗೂ ಲೈವ್‌ ಕ್ಲಾಸ್‌ ಹೆಚ್ಚು ಅಂಕಗಳಿಕೆಗೆ ನೆರವಾಯಿತು. ಇಂಗ್ಲೀಷ್ ವಿಷಯದಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದರಿಂದ ಮೂರು ಅಂಕ ಕಡಿಮೆಯಾಯಿತು. ಆದರೂ ಒಟ್ಟಾರೆ ಫಲಿತಾಂಶ ತೃಪ್ತಿ ತಂದಿದೆ ಎನ್ನುತ್ತಾರೆ ಭವ್ಯಾ ನಾಯಕ್‌

ಭವ್ಯಾ ನಾಯಕ್ ಅಂಕಪಟ್ಟಿ

ಇಂಗ್ಲೀಷ್‌– 97

ಸಂಸ್ಕೃತ–100

ಭೌತ ಶಾಸ್ತ್ರ–100

ರಸಾಯನ ಶಾಸ್ತ್ರ–100

ಗಣಿತ–100

ಕಂಪ್ಯೂಟರ್ ಸೈನ್ಸ್‌–100

–––––––––––––

ಓಂಕಾರ್ ಪ್ರಭು ಅಂಕಪಟ್ಟಿ

ಇಂಗ್ಲೀಷ್‌– 98

ಹಿಂದಿ–100

ಭೌತ ಶಾಸ್ತ್ರ–100

ರಸಾಯನ ಶಾಸ್ತ್ರ–98

ಗಣಿತ–100

ಕಂಪ್ಯೂಟರ್ ಸೈನ್ಸ್‌–100

––––––––––––––

ಯು.ಎಸ್‌.ಅದ್ವೈತ್ ಶರ್ಮ ಅಂಕಪಟ್ಟಿ

ಇಂಗ್ಲೀಷ್‌– 96

ಸಂಸ್ಕೃತ–100

ಭೌತ ಶಾಸ್ತ್ರ–100

ರಸಾಯನ ಶಾಸ್ತ್ರ–100

ಗಣಿತ–100

ಕಂಪ್ಯೂಟರ್ ಸೈನ್ಸ್‌–100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT