ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಎಸ್‌ ಆಸ್ಪತ್ರೆ ಸರ್ಕಾರದ ವಶ: ರಘುಪತಿ ಭಟ್‌

ಜಿಲ್ಲೆಯಲ್ಲಿ ಶೀಘ್ರ 450 ಬೆಡ್‌ಗಳ ಸರ್ಕಾರಿ ಆಸ್ಪತ್ರೆಗಳು ಸಾರ್ವಜನಿಕರ ಸೇವೆಗೆ ಸಿದ್ಧ
Last Updated 31 ಮಾರ್ಚ್ 2022, 13:44 IST
ಅಕ್ಷರ ಗಾತ್ರ

ಉಡುಪಿ: ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆದಿದ್ದು, ವಾರ್ಷಿಕ ₹ 9.83 ಕೋಟಿ ಅನುದಾನ ನಿಗದಿಪಡಿಸಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 200 ಬೆಡ್‌ಗಳ ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿ ನೇಮಕಕ್ಕೂ ಸರ್ಕಾರ ಗ್ರೀನ್‌ಸಿಗ್ನಲ್ ನೀಡಿದ್ದು, ಆಸ್ಪತ್ರೆ ನಿರ್ವಹಣೆಗೆ ₹ 7 ಕೋಟಿ ಹಾಗೂ ಇತರೆ ವೆಚ್ಚಗಳನ್ನು ಭರಿಸಲು ಹೆಚ್ಚುವರಿಯಾಗಿ ₹ 2.83 ಕೋಟಿ ನೀಡಲು ನಿರ್ಧರಿಸಿದೆ. ಸರ್ಕಾರದ ದಿಟ್ಟ ನಿರ್ಧಾರದಿಂದಾಗಿ ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.

ಜಿಲ್ಲೆಯಲ್ಲಿ 450 ಬೆಡ್‌ಗಳ ಆಸ್ಪತ್ರೆಗಳು:ಈಗಾಗಲೇ 250 ಬೆಡ್‌ಗಳ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಸಿವಿಲ್ ಕಾಮಗಾರಿ ಶೇ 75ರಷ್ಟು ಮುಗಿದ ಕೂಡಲೇ ಜಿಲ್ಲಾ ಆಸ್ಪತ್ರೆಗೆ ಬೇಕಾದ ಸಿಬ್ಬಂದಿ, ವೈದ್ಯರ ನೇಮಕಾತಿ ಪ್ರಕ್ರಿಯೆ ಶುರುವಾಗಲಿದೆ. 200 ಬೆಡ್‌ಗಳ ಸಾಮರ್ಥ್ಯದ ಸರ್ಕಾರಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದರೆ ಜಿಲ್ಲೆಯಲ್ಲಿ 450 ಬೆಡ್‌ಗಳ ಎರಡು ಸರ್ಕಾರಿ ಆಸ್ಪತ್ರೆಗಳ ಆರೋಗ್ಯ ಸೇವೆ ಸಾರ್ವಜನಿಕರಿಗೆ ಸಿಗಲಿದೆ ಎಂದರು.

ಸುಸಜ್ಜಿತ ಸರ್ಕಾರಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯನ್ನು ಅಂದಿನ ಕಾಂಗ್ರೆಸ್‌ ಸರ್ಕಾರ ಬಿಆರ್‌ಎಸ್‌ ಸಂಸ್ಥೆಗೆ ಹಸ್ತಾಂತರಿಸುವಾಗಲೇ ವಿರೋಧ ವ್ಯಕ್ತಪಡಿಸಿದ್ದೆ. ಇದಾದ ಒಂದೆರಡು ವರ್ಷಗಳಲ್ಲಿ ಆಸ್ಪತ್ರೆ ಮುನ್ನಡೆಸಲು ಸಾಧ್ಯವಿಲ್ಲ ಎಂದು ಖಾಸಗಿ ಸಂಸ್ಥೆ ಕೈಚೆಲ್ಲಿ ಕುಳಿತಿದೆ. ಪರಿಣಾಮ ಬಡ ರೋಗಿಗಳು ಸಮಸ್ಯೆ ಎದುರಿಸಬೇಕಾಯಿತು ಎಂದು ಶಾಸಕರು ಹೇಳಿದರು.

ಹೆಸರು ಮುಂದುವರಿಕೆ:ಸುಸಜ್ಜಿತ ಆಸ್ಪತ್ರೆಯ ಕಟ್ಟಿಕೊಟ್ಟಿದ್ದಕ್ಕೆ ಪ್ರತಿಯಾಗಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹೆಸರನ್ನು ಬದಲಿಸದಂತೆ ಸರ್ಕಾರ ನಿರ್ಧರಿಸಿದೆ. ಶೀಘ್ರ 200 ಬೆಡ್‌ಗಳಿಗೆ ಅಗತ್ಯವಿರುವ ಸಿಬ್ಬಂದಿ ನೇಮಕವಾಗಲಿದೆ. ಅಗತ್ಯಬಿದ್ದರೆ ಹೊರ ಗುತ್ತಿಗೆ ಸೇವೆ ಪಡೆದುಕೊಳ್ಳಲಾಗುವುದು ಎಂದರು.

ಜಿಲ್ಲೆಗೊಂದು ಮೆಡಿಕಲ್‌ ಕಾಲೇಜು:ಜಿಲ್ಲೆಗೊಂದು ಮೆಡಿಕಲ್‌ ಕಾಲೇಜು ಬೇಕು ಎಂಬ ಬೇಡಿಕೆಯೂ ಈಡೇರುತ್ತಿದ್ದು, ಕೊಳಲಗಿರಿಯಲ್ಲಿ 32 ಎಕರೆ ಸರ್ಕಾರಿ ಜಾಗವನ್ನು ಮೆಡಿಕಲ್‌ ಕಾಲೇಜಿಗೆ ಮೀಸಲಿರಿಸಲಾಗಿದೆ. ಕೇಂದ್ರ ಸರ್ಕಾರ ಜಿಲ್ಲೆಗೆ ಪಿಪಿಪಿ ಮಾದರಿಯ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಒಪ್ಪಿಗೆ ನೀಡಿದೆ. ಈಗಾಗಲೇ ಐಡೆಕ್ಸ್‌ ಕಂಪೆನಿಗೆ ಡಿಪಿಆರ್‌ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಯೋಜನೆಯ ಸಾಧಕ ಬಾಧಕಗಳ ಪರಿಶೀಲನೆ ನಡೆಯುತ್ತಿದೆ. ಸರ್ಕಾರಿ ಅಥವಾ ಪಿಪಿಪಿ ಮಾದರಿಯ ಮೆಡಿಕಲ್‌ ಕಾಲೇಜು ಸ್ಥಾಪನೆ ಇನ್ನೂ ಅಂತಿಮವಾಗಿಲ್ಲ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ 450 ಬೆಡ್‌ಗಳ ಸರ್ಕಾರಿ ಆಸ್ಪತ್ರೆಗಳಿಗೆ ಖಾಸಗಿ ಮೆಡಿಕಲ್‌ ಕಾಲೇಜಿನ ವೈದ್ಯ ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಯ ಸೇವೆ ಲಭ್ಯವಾಗಲಿದೆ. ಇದರಿಂದ ಜಿಲ್ಲೆಯ ಆರೋಗ್ಯ ವ್ಯವಸ್ಥೆ ಬಲವಾಗಲಿದೆ ಎಂದು ಶಾಸಕರು ಸಮರ್ಥನೆ ನೀಡಿದರು.

ಸರ್ಕಾರದ ಮೆಡಿಕಲ್‌ ಕಾಲೇಜು ಸ್ಥಾಪನೆಯಾದರೂ ಎಲ್ಲ ಸೀಟುಗಳು ಉಡುಪಿಯ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ. ನೀಟ್‌ ಪರೀಕ್ಷೆಯ ಮೂಲಕವೇ ಸೀಟುಗಳು ಭರ್ತಿಯಾಗಲಿವೆ ಎಂದು ಪಿಪಿಪಿ ಮಾದರಿಯ ಮೆಡಿಕಲ್‌ ಕಾಲೇಜು ಸ್ಥಾಪನೆಯನ್ನು ಶಾಸಕ ರಘುಪತಿ ಭಟ್‌ ಸಮರ್ಥಿಸಿಕೊಂಡರು.

ಸಂಜೀವಿನಿಗೆ ನಿರ್ವಹಣೆ:ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್‌ ಕೇಂದ್ರಗಳ ನಿರ್ವಹಣೆ ಹೊಣೆ ಹೊತ್ತಿದ್ದ ಬಿಆರ್‌ಎಸ್‌ ಸಂಸ್ಥೆಯನ್ನು ಬದಲಿಸಲಾಗಿದ್ದು, ತಾತ್ಕಾಲಿಕವಾಗಿ ನಿರ್ವಹಣೆಯ ಜವಾಬ್ದಾರಿಯನ್ನು ಸಂಜೀವಿನಿ ಸಂಸ್ಥೆಗೆ ವಹಿಸಲಾಗಿದೆ. ಹಂತ ಹಂತವಾಗಿ ಡಯಾಲಿಸಿಸ್‌ ಕೇಂದ್ರಗಳ ಸಮಸ್ಯೆಗಳು ಬಗೆಹರಿಯಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್‌,ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ, ಮಾಜಿ ಅಧ್ಯಕ್ಷ ರಾಘವೇಂದ್ರ ಕಿಣಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT